ಮಂಡ್ಯ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆಸಿದ ಗಲಭೆಕೋರರ ಬಂಧನವಾಗಿದ್ದು, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಗರ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
‘ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯ ಸಂಧರ್ಭದಲ್ಲಿ ಮಸೀದಿ ಒಳಗಿನಿಂದ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಹೊರಗಡೆಯಿಂದ ಬಂದವರು ಹಾಗೂ ಸ್ಥಳೀಯ ಮುಸ್ಲಿಂ ಗೂಂಡಾಗಳಿಂದ ಕೃತ್ಯ ನಡೆದಿದೆ’ ಎಂದು ಆರೋಪಿಸಿದರು.
‘ಘಟನೆ ಖಂಡಿಸಿ ಸಾರ್ವಜನಿಕರು ಶಾಂತಿಯುತ ಹೋರಾಟ ಮಾಡುವಾಗ ಪೊಲೀಸರು ಏಕಾಏಕಿ ಲಾಠಿ ಚಾರ್ಜ್ ಮಾಡಿರುವುದು ಸರಿಯಲ್ಲ. ಮಹಿಳೆಯರ ಮೇಲೆ ಹಲ್ಲೆ ಮಾಡಿದ ಪೋಲಿಸರನ್ನು ಅಮಾನತು ಮಾಡಬೇಕು. ಕಲ್ಲು ತೂರಾಟದ ಗಲಭೆಯ ಹಿಂದೆ ಹಲವು ಸಂಘಟನೆಗಳಿವೆ. ಕೂಡಲೇ ಸೂಕ್ತ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
ಗಾಯಗೊಂಡಿರುವ ಭಕ್ತರಿಗೆ ಉಚಿತ ಚಿಕಿತ್ಸೆ ಹಾಗೂ ಆಸ್ತಿಹಾನಿಯ ವೆಚ್ಚವನ್ನು ಗಲಭೆಕೋರರಿಂದ ವಸೂಲಿ ಮಾಡಬೇಕು. ಒಂದು ವೇಳೆ ಗಲಭೆಕೋರರ ಬಗ್ಗೆ ಮೃದುಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರೈತರಿಗೆ ವಂಚನೆ ಮಾಡಿ ಜಲಪಾತೋತ್ಸವ: ‘ಸೆ.13 ಮತ್ತು 14ರಂದು ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿಯಲ್ಲಿ ಜಲಪಾತೋತ್ಸವ ಮಾಡಲು ಸರ್ಕಾರ ಸಜ್ಜಾಗಿದೆ. ಆದರೆ, ಕೆಆರ್‌ಎಸ್ ಜಲಾಶಯ ತುಂಬಿ ಎರಡು ತಿಂಗಳು ಕಳೆದಿದ್ದರೂ ಮಳವಳ್ಳಿ ತಾಲ್ಲೂಕಿನಲ್ಲಿ ಬೆಳೆ ಬೆಳೆಯಲು, ಕೆರೆ ಕಟ್ಟೆ ತುಂಬಿಸಲು ನೀರನ್ನು ಹರಿಸದೆ ಜಲಪಾತೋತ್ಸವ ಮಾಡುವುದು ಎಷ್ಟು ಸರಿ’ ಎಂದು ಮುಖಂಡರು ಪ್ರಶ್ನಿಸಿದರು.
ಮುಖಂಡರಾದ ವಸಂತ್‌ಕಮಾರ್, ಅಶೋಕ್ ಜಯರಾಂ, ಎಚ್.ಆರ್.ಅಶೋಕ್ ಕುಮಾರ್, ಸಿ.ಟಿ.ಮಂಜುನಾಥ್, ಎಚ್.ಆರ್.ಅರವಿಂದ್, ಸಿದ್ದರಾಜುಗೌಡ, ಹೊಸಹಳ್ಳಿ ಶಿವು, ಬೂದನೂರು ಸತೀಶ್, ಮಹಂತಪ್ಪ, ಪ್ರಸನ್ನಕುಮಾರ್, ನಿತ್ಯಾನಂದ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.