
ಮಂಡ್ಯ: ‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ನೀಡಿರುವ ಅನುದಾನದ ಬಗ್ಗೆ ಲೇವಡಿ ಮಾಡಿದ್ದಾರೆ. 2018ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ನೀಡಿದ ₹8 ಸಾವಿರ ಕೋಟಿಯ ದಾಖಲೆ ಬಿಡುಗಡೆ ಮಾಡಲಿ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಸಚಿವರು ಹಾಗೂ ಶಾಸಕರು ₹10 ಸಾವಿರ ಕೋಟಿ ಅಭಿವೃದ್ಧಿ ಕಾರ್ಯಗಳನ್ನು ತಂದಿದ್ದಾರೆ. ಒಂದು ವಾರದೊಳಗೆ ಕ್ಷೇತ್ರವಾರು ಅನುದಾನದ ಮಾಹಿತಿಯನ್ನು ದಾಖಲೆ ಸಹಿತ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಸಂಸದರಾಗಿ, ಕೇಂದ್ರ ಸಚಿವರಾಗಿ ಪ್ರದೇಶಾಭಿವೃದ್ಧಿ ಅನುದಾನ ಹೊರತುಪಡಿಸಿ ಇಲ್ಲಿವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ತಂದಿಲ್ಲ. ಕೈಗಾರಿಕೆ ಸ್ಥಾಪನೆ ಮಾಡುವುದನ್ನು ಬಿಟ್ಟು ಕೇವಲ ಆರೋಪ ಮಾಡುವುದಕ್ಕೆ ಸೀಮಿತರಾಗಿದ್ದಾರೆ ಎಂದು ದೂರಿದರು.
ಇತ್ತೀಚೆಗೆ ಕೆ.ಆರ್.ಪೇಟೆಗೆ ಆಗಮಿಸಿದ್ದ ನಿಖಿಲ್ ಕುಮಾರಸ್ವಾಮಿ ಅವರು ಸಚಿವ ಚಲುವರಾಯಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. 1999ರಲ್ಲಿ ಚಲುವರಾಯಸ್ವಾಮಿ ಗೆದ್ದು ಜೆಡಿಎಸ್ ಪಕ್ಷ ಕಟ್ಟಿರುವುದನ್ನು ನಿಖಿಲ್ ಮರೆತಿರುವಂತಿದೆ. ರಾಜಕೀಯ ಪ್ರಬುದ್ಧತೆಯನ್ನು ನಿಖಿಲ್ ಬೆಳೆಸಿಕೊಳ್ಳಲಿ ಎಂದು ಹೇಳಿದರು.
ಮೈಷುಗರ್ ಅಕ್ರಮ ಕುರಿತ ಪ್ರಶ್ನೆಗೆ ಉತ್ತರಿಸಿ, ‘ನನ್ನ ಅವಧಿಯ ಎರಡು ವರ್ಷದಲ್ಲಿ ಯಾವುದೇ ಆರ್ಥಿಕ ಲೋಪವಾಗಿಲ್ಲ. ಸಕ್ಕರೆಯನ್ನು ಸ್ಪರ್ಧಾತ್ಮಕ ದರದಲ್ಲಿ ಮತ್ತು ಪಾರದರ್ಶಕ ಆಡಳಿತ ನೀಡಿರುವ ಬಗ್ಗೆ ತನಿಖಾ ತಂಡಕ್ಕೆ ಪೂರ್ಣ ಮಾಹಿತಿ ಒದಗಿಸಿದ್ದೇವೆ. ಕಬ್ಬು ಪೂರೈಸಿದ ರೈತರಿಗೆ ಬಾಕಿ ₹2.5 ಕೋಟಿಯನ್ನು ಇನ್ನೊಂದು ವಾರದಲ್ಲಿ ನೀಡುತ್ತೇವೆ’ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಚಿನಕುರಳಿ ರಮೇಶ್, ರಾಮಕೃಷ್ಣ, ಮಹದೇವು, ವಿಜಯ್‌ಕುಮಾರ್, ಸಿ.ಎಂ.ದ್ಯಾವಪ್ಪ ಇತರರಿದ್ದರು.
‘ಶಿವರಾಮೇಗೌಡ ವಿರುದ್ಧ ಕ್ರಮಕ್ಕೆ ಪತ್ರ’
‘ಕೆಪಿಸಿಸಿ ವಕ್ತಾರ ಎಲ್.ಆರ್.ಶಿವರಾಮೇಗೌಡ ಅವರು ದಿವಂಗತ ಜಿ.ಮಾದೇಗೌಡ ದಿವಂಗತ ಅಂಬರೀಷ್ ಹಾಗೂ ಸಚಿವ ಚಲುವರಾಯಸ್ವಾಮಿ ವಿರುದ್ಧ ಅಸಂವಿಧಾನಿಕ ಪದಗಳನ್ನು ಬಳಸಿರುವ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು’ ಎಂದು ಸಿ.ಡಿ. ಗಂಗಾಧರ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.