ಮಂಡ್ಯ: ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಬಗ್ಗೆ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ. ಪುಟ್ಟಮಾದು ಅವರು ಅವಹೇಳನಕಾರಿಯಾಗಿ ಮಾತನಾಡಿದ್ದು, ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಕಪ್ಪುಪಟ್ಟಿ ಧರಿಸಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಜಮಾವಣೆಗೊಂಡ ಅಧಿಕಾರಿಗಳು, ಸಿಬ್ಬಂದಿ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಜಿಪಂ ಉಪಕಾರ್ಯದರ್ಶಿಗಳಾದ ಪಿ.ಲಕ್ಷ್ಮೀ ಹಾಗೂ ಧನರಾಜ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕುಮಾರ ಅವರಿಗೆ ಮತ್ತು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಮನವಿ ಸಲ್ಲಿಸಿದರು.
ಜು.4ರಂದು ನಡೆದ ದಿಶಾ ಸಮಿತಿ ಸಭೆ ವೇಳೆ, ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ಸಿಇಒ ಕೆ.ಆರ್. ನಂದಿನಿ ಆಗಮಿಸಿದ್ದಾರೆ. ಈ ಸಮಯದಲ್ಲಿ ಎಂ. ಪುಟ್ಟಮಾದು ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.
‘ನೀವು ಬಂದು ಜಿಲ್ಲೆಯನ್ನು ಹಾಳು ಮಾಡಿದ್ದೀರಿ’ ಎಂದು ಅವಹೇಳನಕಾರಿ ಹಾಗೂ ನಿಂದನಾತ್ಮಕವಾಗಿ ಘೋಷಣೆ ಕೂಗಿದ್ದಾರೆ. ಇದರಿಂದಾಗಿ ಪ್ರಾಮಾಣಿಕ ಮತ್ತು ನಿಷ್ಠಾವಂತ ಅಧಿಕಾರಿಯ ಕರ್ತವ್ಯ ನಿರ್ವಹಣೆಗೆ ಧಕ್ಕೆ ಉಂಟಾಗುವುದಲ್ಲದೇ ಕೆಳವರ್ಗದ ನೌಕರರು ಸಹ ಆತ್ಮಸ್ಥೈರ್ಯ ಕಳೆದುಕೊಳ್ಳುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಪುಟ್ಟಮಾದು ವಿರುದ್ಧ ಕಾನೂನು ಕ್ರಮ ಜರುಗಿಸಿ’ ಎಂದು ಒತ್ತಾಯಿಸಿದರು.
ಸಮಾಜದಲ್ಲಿ ಪರಿವರ್ತನೆಗೆ ಕಾರಣರಾಗುವ ಹೋರಾಟಗಾರರು, ವಿವಿಧ ಸಂಘಟನೆಗಳು ಮತ್ತು ಸಮಾಜಮುಖಿ ಸಂಸ್ಥೆಗಳ ಕಾರ್ಯಪ್ರವೃತ್ತಿಯ ಕುರಿತು ನಮಗೆ ಅಪಾರ ಗೌರವವಿದೆ. ನಂದಿನಿ ಅವರು ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಹಲವಾರು ವರ್ಷದಿಂದ ಬಾಕಿ ಇದ್ದ ಕೂಲಿ ಮತ್ತು ಸಾಮಗ್ರಿ ಮೊತ್ತ ಪಾವತಿಸಲು ಅನುಕೂಲವಾಗುವಂತೆ ಹಲವಾರು ಕ್ರಮ ತೆಗೆದುಕೊಂಡು ರೈತರು ಹಾಗೂ ಕೂಲಿ ಕಾರ್ಮಿಕರಿಗೆ ನೆರವಾಗಿದ್ದಾರೆ.
ನರೇಗಾ ಯೋಜನೆ ಸೇರಿದಂತೆ ಇತರೆ ಯೋಜನೆಗಳ ಅನುಷ್ಠಾನದಲ್ಲಿ ಗಣನೀಯ ಪ್ರಗತಿ ಸಾಧಿಸಿರುವುದು ಗಮನಿಸಿ ಕೆ.ಆರ್.ನಂದಿನಿ ಅವರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ‘ಪ್ರಶಂಸನಾ ಪತ್ರ’ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಕಟದ ಅಧ್ಯಕ್ಷ ಪ್ರಶಾಂತ್‌ಬಾಬು, ಪ್ರಧಾನ ಕಾರ್ಯದರ್ಶಿ ಸುನೀಲ್, ಕ್ರೀಡಾ ಕಾರ್ಯದರ್ಶಿ ಪಿ.ಆರ್.ಹರೀಶ್, ಮಂಡ್ಯ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್ ಭಾಗವಹಿಸಿದ್ದರು.
ಸಿಇಒ ವರ್ಗಾವಣೆಗೆ ಆಗ್ರಹ
ಕಳೆದ ಮೂರು ತಿಂಗಳಿನಿಂದ ಕೂಲಿಕಾರರಿಗೆ ಕೆಲಸ ನೀಡದೆ ಕೂಲಿಕಾರರ ವಿರೋಧಿಯಾಗಿ ವರ್ತಿಸುತ್ತಿರುವ ಮಂಡ್ಯ ಜಿಲ್ಲಾ ಪಂಚಾಯತಿ ಸಿಇಒ ನಂದಿನಿ ಕೆ.ಆರ್. ಅವರನ್ನು ಕೂಡಲೇ ಮಂಡ್ಯ ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮಂಡ್ಯ ಜಿಲ್ಲಾ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಬಡವರ ಬಗ್ಗೆ ಕಾಳಜಿ ಇಲ್ಲದ ಈ ಅಧಿಕಾರಿಗೆ ಜನರೊಡನೆ ನೇರವಾಗಿ ಸಂಪರ್ಕವಿರುವ ಯಾವುದೇ ಹುದ್ದೆ ನೀಡಬಾರದು ಅವರು ಮಂಡ್ಯ ಜಿಲ್ಲೆಯ ನಿವಾಸಿಯಾಗಿದ್ದು ಸ್ಥಳೀಯರೂ ಆಗಿದ್ದಾರೆ ಸ್ಥಳೀಯರನ್ನು ಇಂತಹ ಜವಾಬ್ದಾರಿ ಹುದ್ದೆಯಲ್ಲಿ ಮುಂದುವರಿಸಬಾರದು ಎಂದು ಮನವಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.