ADVERTISEMENT

ನಗರಸಭೆಗೆ ಹೊಸ ಬಡಾವಣೆ ಸೇರಿಸಿ

ಮಂಡ್ಯ ನಗರಸಭೆಯ 2026–27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ: ಸಾರ್ವಜನಿಕರಿಂದ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 5:03 IST
Last Updated 20 ಜನವರಿ 2026, 5:03 IST
ಮಂಡ್ಯ ನಗರಸಭೆ ಕಚೇರಿಯಲ್ಲಿ ಸೋಮವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಿರ್ಗಮಿತ ಅಧ್ಯಕ್ಷ ಎಂ.ವಿ. ಪ್ರಕಾಶ್ ಮಾತನಾಡಿದರು. ಪೌರಾಯುಕ್ತೆ ಪಂಪಾಶ್ರೀ ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು 
ಮಂಡ್ಯ ನಗರಸಭೆ ಕಚೇರಿಯಲ್ಲಿ ಸೋಮವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಿರ್ಗಮಿತ ಅಧ್ಯಕ್ಷ ಎಂ.ವಿ. ಪ್ರಕಾಶ್ ಮಾತನಾಡಿದರು. ಪೌರಾಯುಕ್ತೆ ಪಂಪಾಶ್ರೀ ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು    

ಮಂಡ್ಯ: ಇಲ್ಲಿಯ ನಗರಸಭೆಗೆ ಹೊಂದಿಕೊಂಡಂತೆ ಹತ್ತಾರು ಹೊಸ ಬಡಾವಣೆಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಬೇಕು ಮತ್ತು ರಸ್ತೆಗಳ ಗುಣಮಟ್ಟ ಕಾಪಾಡಬೇಕು ಎಂದು ಜನಪ್ರತಿನಿಧಿಗಳೂ, ಸಾರ್ವಜನಿಕರು ಮತ್ತು ಸಂಘಟನೆಗಳ ಮುಖಂಡರು ಸಲಹೆ ನೀಡಿದರು. 

ಮಂಡ್ಯ ನಗರಸಭೆಯ ಅಮೃತ ಭವನದ ಆವರಣದಲ್ಲಿ ನಡೆದ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಗರಸಭೆ ಆಡಳಿತ ಮಂಡಳಿಗೆ ಜನರು ಹತ್ತಾರು ಸಲಹೆ-ಸೂಚನೆಗಳನ್ನು ನೀಡಿದರು.

ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಬೇಕು, ನಗರಸಭೆ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ನೀಡಿ ಆದಾಯ ಹೆಚ್ಚಳಕ್ಕೆ ಕ್ರಮ ವಹಿಸಬೇಕು, ಇ-ಸ್ವತ್ತು ವಿತರಣೆಯಲ್ಲಿನ ಲೋಪ ಸರಿಪಡಿಸಬೇಕು ಎಂಬ ಒತ್ತಾಯ ಕೇಳಿಬಂದಿತು.  

ADVERTISEMENT

ಬೀದಿನಾಯಿಗಳು, ಮಂಗಗಳ ಹಾವಳಿ ತಪ್ಪಿಸಿ, ಸ್ಕೈ ವಾಕರ್‌ಗಳಲ್ಲಿ ಎಲಿವೇಟರ್ ಅಳವಡಿಸಬೇಕು. ಕಾಮಗಾರಿಗಳು ವಿಳಂಬವಾಗದೆ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಬೇಕು. ನಗರಸಭೆ ಆಡಳಿತ ಪಾರದರ್ಶಕವಾಗಿರಲಿ. ಸರ್ಕಾರಿ ಕಚೇರಿಗೆ ವಿನಾಕಾರಣ ಜನರ ಅಲೆದಾಟ ತಪ್ಪಿಸಬೇಕು ಎಂಬ ಸಲಹೆಗಳು ಕೇಳಿಬಂದವು. 

ಪ್ರಮುಖವಾಗಿ ಮಂಡ್ಯ ನಗರಸಭೆಗೆ ಹೊಂದಿಕೊಂಡಂತೆ ಎರಡು ದಶಕಗಳ ಹಿಂದೆಯೇ ನಿರ್ಮಾಣವಾಗಿರುವ ಹತ್ತಾರು ಹೊಸ ಬಡಾವಣೆಗಳು ನಗರಸಭೆಗೆ ವ್ಯಾಪ್ತಿಗೆ ಸೇರಿಸಬೇಕು. ಆ ಮೂಲಕ ನಗರಸಭೆ ವ್ಯಾಪ್ತಿಯನ್ನು ವಿಸ್ತರಿಸಿ, ಬೃಹತ್ ಮಂಡ್ಯ ಅಥವಾ ನಗರಪಾಲಿಕೆಯಾಗಿ ರೂಪಿಸಬೇಕು. ಈ ನಿಟ್ಟಿನಲ್ಲಿ ಬಜೆಟ್ ಸಭೆಯಲ್ಲೇ ವಿಶೇಷ ನಿರ್ಣಯ ಮಾಡಬೇಕೆಂದು ಹಲವು ಮಂದಿ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ನಿರ್ಗಮಿತ ಅಧ್ಯಕ್ಷ ಎಂ.ವಿ.ಪ್ರಕಾಶ್, ‘35 ವರ್ಷಗಳ ಹಿಂದೆ ಆಗಿರುವ ಮಂಡ್ಯ ನಗರದ ಸಿಡಿಪಿ ಪ್ಲಾನ್ ಬದಲಾಗಿಲ್ಲ. ಅದನ್ನು ಸರ್ಕಾರ ಬದಲಾವಣೆ ಮಾಡಬೇಕು. ಶಾಸಕರು, ಸಚಿವರು ಮನಸು ಮಾಡಿದರೆ ನಗರಸಭೆ ವ್ಯಾಪ್ತಿ ವಿಸ್ತರಣೆಯಾಗಲಿದೆ. ಈ ಸಂಗತಿಯನ್ನು ಶಾಸಕರು, ಸಚಿವರ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

‘ಫುಟ್‌ಪಾತ್‌ ಕಾಮಗಾರಿಗೆ ನಗರಸಭೆ ಹಣ ನೀಡುವಂತಿಲ್ಲ’ ‘

ಬೆಂಗಳೂರು-ಮೈಸೂರು ಹೆದ್ದಾರಿ ಬದಿಯ ಪಾದಚಾರಿ ಮಾರ್ಗದ ಕಾಮಗಾರಿಗೆ ನಗರಸಭೆಯಿಂದ ಹಣ ನೀಡುವಂತಿಲ್ಲ. ಹೆದ್ದಾರಿ ಪ್ರಾಧಿಕಾರದಿಂದಲೇ ಮಾಡಬೇಕು. ನಾನು ಅಧ್ಯಕ್ಷನಾಗಿದ್ದಾಗ ಕೆಎಚ್‌ಬಿ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸಲು ₹85 ಲಕ್ಷ ಅನುದಾನ ನೀಡಿದ್ದೆ. ತುರ್ತಾಗಿ ಕಾಮಗಾರಿ ಆರಂಭಿಸಿ. ಒಳಚರಂಡಿ ಕಾಮಗಾರಿಗಾಗಿ ಹಲವೆಡೆ ರಸ್ತೆಗಳನ್ನು ಅಗೆಯಲಾಗುತ್ತಿದೆ. ಕಾಮಗಾರಿ ನಿರ್ವಹಿಸುತ್ತಿರುವ ಎನ್‌ಜಿಟಿ (ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್‌) ವತಿಯಿಂದಲೇ ರಸ್ತೆಗಳನ್ನು ಸರಿಪಡಿಸಬೇಕು. ಉದ್ಯಾನಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಮಂಡ್ಯ ನಗರಸಭೆಯ ನಿರ್ಗಮಿತಿ ಅಧ್ಯಕ್ಷ ಎಂ.ವಿ.ಪ್ರಕಾಶ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.