ADVERTISEMENT

ಮಂಡ್ಯ | ಮತೀಯ ಗಲಭೆ, ನಾಲಾ ದುರಂತಗಳ ಸದ್ದು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 6:29 IST
Last Updated 29 ಡಿಸೆಂಬರ್ 2025, 6:29 IST
ಮದ್ದೂರು ಪಟ್ಟಣದಲ್ಲಿ ಬಿಜೆಪಿ, ಬಜರಂಗದಳ ಮತ್ತು ಹಿಂದುತ್ವಪರ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದ ದೃಶ್ಯ  
ಮದ್ದೂರು ಪಟ್ಟಣದಲ್ಲಿ ಬಿಜೆಪಿ, ಬಜರಂಗದಳ ಮತ್ತು ಹಿಂದುತ್ವಪರ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದ ದೃಶ್ಯ     

ಮಂಡ್ಯ: 2024ರಲ್ಲಿ ನಾಗಮಂಗಲ ಗಲಭೆ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿತ್ತು. ಅದೇ ರೀತಿ 2025ರಲ್ಲಿ ನಡೆದ ಮದ್ದೂರಿನ ಮತೀಯ ಗಲಭೆಯು ಜಿಲ್ಲೆಯಲ್ಲಿ ಸೌಹಾರ್ದ, ಶಾಂತಿಗೆ ಭಂಗ ತಂದಿತು. 

ಉಪಲೋಕಾಯುಕ್ತ ಬಿ.ವೀರಪ್ಪ ಅವರು ಜಿಲ್ಲೆಯಲ್ಲಿ ಮೇ 26ರಿಂದ 29ರವರೆಗೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ, ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿ ಬರೋಬ್ಬರಿ 23 ಸ್ವಯಂಪ್ರೇರಿತ ದೂರು ದಾಖಲು ಮಾಡಲು ಕ್ರಮ ಕೈಗೊಂಡಿದ್ದರು. ಅವರು ಬಂದು ಹೋದ ಬೆನ್ನಲ್ಲೇ 26 ಅಧಿಕಾರಿಗಳು ಬೇರೆ ಕಡೆಗೆ ವರ್ಗಾವಣೆಗೊಂಡರು, ನಾಲ್ವರು ನೌಕರರು ಅಮಾನತುಗೊಂಡರು. 

ವಿಶ್ವೇಶ್ವರಯ್ಯ ನಾಲೆಗೆ ತಡೆಗೋಡೆ ಇಲ್ಲದ ಕಾರಣ ಈ ವರ್ಷವೂ ಜಿಲ್ಲೆಯಲ್ಲಿ ನಾಲಾ ದುರಂತಗಳು ಸಂಭವಿಸಿದವು. ಕಲುಷಿತ ಆಹಾರ ಸೇವಿಸಿ ಇಬ್ಬರು ವಿದ್ಯಾರ್ಥಿಗಳು ಸಾವಿಗೀಡಾಗಿ, 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು ಜಿಲ್ಲೆಯ ಪಾಲಿಗೆ ಕರಾಳ ನೆನಪಾಗಿದೆ. 

ADVERTISEMENT

ನಿಲ್ಲದ ನಾಲಾ ದುರಂತಗಳು

ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಸಮೀಪದ ನಾರ್ತ್ ಬ್ಯಾಂಕ್ ಗ್ರಾಮದ ಬಳಿಯಿರುವ ವಿಶ್ವೇಶ್ವರಯ್ಯ ನಾಲೆಗೆ ಬಿದ್ದ ಕಾರಿನಲ್ಲಿ ಏಪ್ರಿಲ್‌ 29ರಂದು ಮೂರು ಮೃತದೇಹಗಳು ಪತ್ತೆಯಾಗಿದ್ದವು. ಮತ್ತೊಂದು ಪ್ರಕರಣದಲ್ಲಿ, ಚಾಲಕನ ನಿಯಂತ್ರಣ ತಪ್ಪಿ ಕಾರು ವಿಶ್ವೇಶ್ವರಯ್ಯ ನಾಲೆಗೆ ಉರುಳಿಬಿದ್ದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟು, ಮತ್ತೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಘಟನೆ ಮಂಡ್ಯ ತಾಲ್ಲೂಕಿನ ತಿಬ್ಬನಹಳ್ಳಿ ಬಳಿ ಫೆ.3ರಂದು ನಡೆದಿತ್ತು. ಮಂಡ್ಯ ತಾಲ್ಲೂಕಿನ ಬಿ.ಯರಹಳ್ಳಿ ಸಮೀಪದ ವಿಶ್ವೇಶ್ವರಯ್ಯ ನಾಲೆಯಲ್ಲಿ ಕಾರು ಬಿದ್ದಿತ್ತು, ಅದೃಷ್ಟವಶಾತ್‌ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರು. 

ಡಿಸಿಎಂ ಬೆಂಗಾವಲು ವಾಹನ ಪಲ್ಟಿ

ಶ್ರೀರಂಗಪಟ್ಟಣ ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್ ಬಳಿ ಜುಲೈ 19ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಗಾವಲು ವಾಹನ ಪಲ್ಟಿಯಾಗಿ ಅದರಲ್ಲಿದ್ದ ನಾಲ್ವರು ಗಾಯಗೊಂಡಿದ್ದರು. ಮೈಸೂರಿನಲ್ಲಿ ಸರ್ಕಾರದ ‘ಸಾಧನಾ ಸಮಾವೇಶ’ ಮುಗಿಸಿ ಡಿ.ಕೆ. ಶಿವಕುಮಾರ್ ಬೆಂಗಳೂರಿಗೆ ತೆರಳುತ್ತಿದ್ದಾಗ, ಮಳೆ ನೀರು ಹೆದ್ದಾರಿಯಲ್ಲಿ ನಿಂತಿದ್ದ ಕಾರಣ ಬೆಂಗಾವಲು ವಾಹನ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತ್ತು. 

ದಲಿತರಿಂದಲೇ ದಲಿತರಿಗೆ ಬಹಿಷ್ಕಾರ!

ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂನಲ್ಲಿ ಕುಲಸ್ಥರ ಮಾತಿಗೆ ವಿರುದ್ಧವಾಗಿ ನಡೆದುಕೊಂಡರು ಎಂಬ ಕಾರಣಕ್ಕೆ ಏಳು ದಲಿತ ಕುಟುಂಬಗಳಿಗೆ ದಲಿತ ಕುಲದ ಯಜಮಾನರು ಬಹಿಷ್ಕಾರ ಹಾಕಿ ದಂಡ ವಿಧಿಸಿದ್ದ ಘಟನೆ ಅ.17ರಂದು ನಡೆದಿತ್ತು. ‘ಗಂಜಾಂನ ಅಂಬೇಡ್ಕರ್‌ ಬೀದಿಯ ಮಹೇಶ್, ಯಶವಂತಕುಮಾರ್‌ ಇತರರ ಕುಟುಂಬಗಳು ದೇವಾಲಯದ ಕಾರ್ಯಕ್ರಮಗಳಿಗೆ ವಂತಿಕೆ ಹಣ ಕೊಡದೆ ಕುಲದ ಯಜಮಾನರ ಮಾತಿಗೆ ಎದುರು ಮಾತನಾಡಿದ್ದಾರೆ ಎಂದು ಬಹಿಷ್ಕಾರ ಮತ್ತು ದಂಡದ ಶಿಕ್ಷೆ ವಿಧಿಸಲಾಗಿತ್ತು. 

ಸದ್ದು ಮಾಡಿದ ‘ಡೆಕಾಯ್‌ ಕಾರ್ಯಾಚರಣೆ’

ಮಂಡ್ಯ ಡಿಎಚ್‌ಒ ಡಾ.ಕೆ.ಮೋಹನ್‌ ನೇತೃತ್ವದಲ್ಲಿ ನಡೆದ ‘ಡೆಕಾಯ್‌ ಕಾರ್ಯಾಚರಣೆ’ ಈ ವರ್ಷವೂ ಹೆಚ್ಚು ಸದ್ದು ಮಾಡಿತು. ‘ಹೆಣ್ಣುಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ’ ಪ್ರಕರಣಗಳು ‘ಸಕ್ಕರೆ ನಾಡು’ ಮಂಡ್ಯಕ್ಕೆ ಕಳಂಕ ತಂದಿದ್ದವು. ‘ಸಿಎಂ ತವರು ಕ್ಷೇತ್ರ’ವಾದ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ತಿ.ನರಸೀಪುರ ತಾಲ್ಲೂಕಿನ ಹುನಗನಹಳ್ಳಿ ಗ್ರಾಮದ ಫಾರಂ ಹೌಸ್‌ವೊಂದರಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸುವುದಕ್ಕೆ ಡೆಕಾಯ್‌ ಕಾರ್ಯಾಚರಣೆ ನೆರವಾಯಿತು.  

ಉಪಲೋಕಾಯುಕ್ತರ ಸಂಚಾರ; 23 ಸ್ವಯಂಪ್ರೇರಿತ ದೂರು

ಉಪಲೋಕಾಯುಕ್ತ ಬಿ.ವೀರಪ್ಪ ಅವರು ಮಂಡ್ಯ ಜಿಲ್ಲೆಯಲ್ಲಿ ಮೇ 26ರಿಂದ ಮೇ 29ರವರೆಗೆ ಪ್ರವಾಸ ಕೈಗೊಂಡು, ಸರ್ಕಾರಿ ಕಚೇರಿ, ಸರ್ಕಾರಿ ಜಾಗ ಸೇರಿದಂತೆ ಒಟ್ಟು 26 ಸ್ಥಳಗಳಿಗೆ ಭೇಟಿ ಕೊಟ್ಟು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಕರ್ತವ್ಯದಲ್ಲಿ ನಿರ್ಲಕ್ಷ್ಯ, ವಿಳಂಬ ಧೋರಣೆ, ಅಕ್ರಮ ಎಸಗಿದ ತಪ್ಪಿತಸ್ಥ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ನಿಗದಿತ ಸಮಯದಲ್ಲಿ ಸೂಚಿಸಿದ ಕೆಲಸಗಳನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು. ಒಟ್ಟು 23 ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಿಕೊಂಡು, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಕೆಆರ್‌ಎಸ್‌ ಹಿನ್ನೀರು ಒತ್ತುವರಿ ತೆರವಿಗೆ ಆದೇಶ

ಕೃಷ್ಣರಾಜ ಸಾಗರ ಅಣೆಕಟ್ಟೆಯ ಹಿನ್ನೀರಿನ ಪ್ರದೇಶಗಳಲ್ಲಿ ಭೂ ಒತ್ತುವರಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಕೂಡಲೇ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಬೇಕು. ಗಡಿ ಕಲ್ಲುಗಳನ್ನು ನೆಟ್ಟು ವರದಿ ನೀಡಬೇಕು’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನ.7ರಂದು ಆದೇಶಿಸಿದ್ದರು. ಮಧ್ಯಂತರ ವರದಿ ಸಲ್ಲಿಸಲು ಈಚೆಗೆ ಸೂಚನೆಯನ್ನೂ ನೀಡಿದ್ದಾರೆ. 

ಶ್ರೀರಂಗಪಟ್ಟಣ ತಾಲ್ಲೂಕಿನ ಬಂಗಾರದೊಡ್ಡಿ ನಾಲೆ ಅಣೆಕಟ್ಟೆ ಸಮೀಪದ ಕಾವೇರಿ ನದಿಯ ಬಫರ್‌ ಜೋನ್‌ ಮತ್ತು ಪರಿಸರ ಸೂಕ್ಷ್ಮ ವಲಯದಲ್ಲಿ ತಲೆ ಎತ್ತಿರುವ ಅಕ್ರಮ ರೆಸಾರ್ಟ್‌, ಹೋಂಸ್ಟೇಗಳ ಕಟ್ಟಡಗಳನ್ನು ಡಿಸೆಂಬರ್‌ 30ರೊಳಗೆ ತೆರವುಗೊಳಿಸಲು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. 

ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದ ಬಳಿಯ ಕಾಲುವೆಯಿಂದ ಕಾಡಾನೆಯನ್ನು ಮೇಲೆ ತರಲು ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ್ದ ಕಾರ್ಯಾಚರಣೆ
ಆತ್ಮಹತ್ಯೆಗೆ ಯತ್ನಿಸಿದ್ದ ಮಂಜೇಗೌಡ 
ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿ ಕೊನ್ನಾಪುರ ಗ್ರಾಮದ ಪ್ರೇಮಾ ಅವರ ಮನೆಗೆ ಭೇಟಿ ನೀಡಿದ್ದ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು
ಶ್ರೀರಂಗಪಟ್ಟಣ ಸಮೀಪ ಬಂಗಾರದೊಡ್ಡಿ ಅಣೆಕಟ್ಟೆ ಮಾರ್ಗದಲ್ಲಿ ಕಾವೇರಿ ನದಿಯ ಬಫರ್‌ ಜೋನ್‌ ವ್ಯಾಪ್ತಿಯಲ್ಲಿ ನಿರ್ಮಿಸಿದ್ದ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ದೃಶ್ಯ
ಮಂಡ್ಯ ತಾಲ್ಲೂಕಿನ ತಿಬ್ಬನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿಶ್ವೇಶ್ವರಯ್ಯ ನಾಲೆಗೆ ಉರುಳಿಬಿದ್ದ ಕಾರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಮೇಲೆತ್ತಿದರು
ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಇಂಡುವಾಳು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ್ದರು

ಡಿಸಿ ಕಚೇರಿ ಎದುರು ರೈತ ಆತ್ಮಹತ್ಯೆ ಭೂಸ್ವಾಧೀನ ಪ್ರಕರಣದಲ್ಲಿ ಹಲವು ವರ್ಷಗಳಿಂದ ಪರಿಹಾರ ದೊರಕಿಲ್ಲವೆಂದು ಆರೋಪಿಸಿ ಕೆ.ಆರ್.ಪೇಟೆ ತಾಲ್ಲೂಕು ಮೂಡನಹಳ್ಳಿಯ ರೈತ ಮಂಜೇಗೌಡ ಎಂ.ಡಿ. (55) ಎಂಬವರು ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನದಲ್ಲಿ ನ.4ರಂದು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಸ್ಥಳೀಯರು ಕೂಡಲೇ ನೀರು ಎರಚಿ ಅವರನ್ನು ರಕ್ಷಿಸಿ ನಗರದ ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಲು ನೆರವಾದರು. ದೇಹವು ಶೇ 60ರಷ್ಟು ಸುಟ್ಟಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದರು.

ಕಾಲುವೆಗೆ ಬಿದ್ದಿದ್ದ ಕಾಡಾನೆ ರಕ್ಷಣೆ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ‘ಪಯನಿಯರ್‌ ಜೆನ್ಕೋ ಲಿಮಿಟೆಡ್ ವಿದ್ಯುತ್ ಉತ್ಪಾದನಾ ಕೇಂದ್ರ’ದ 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯನ್ನು ನ.19ರಂದು ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ ಕ್ರೇನ್‌ ನೆರವಿನಿಂದ ಯಶಸ್ವಿಯಾಗಿ ಮೇಲೆ ತರಲಾಯಿತು. ನಾಲ್ಕು ದಿನಗಳ ಹಿಂದೆ ವಿದ್ಯುತ್ ಘಟಕದ ಬಳಿ ಸುತ್ತಾಡುತ್ತಿದ್ದ 12 ವರ್ಷದ ಗಂಡು ಕಾಡಾನೆಯು ನೀರು ಕುಡಿಯಲು ಗೇಟ್ ಮೂಲಕ ನಾಲೆಗೆ ಇಳಿದಿತ್ತು. ಆದರೆ ಹರಿವಿನ ರಭಸಕ್ಕೆ ಮೇಲೆ ಬರಲಾಗದೆ ಮೂರು ದಿನಗಳಿಂದ ಅಲ್ಲಿಯೇ ಓಡಾಡಿ ನಿತ್ರಾಣಗೊಂಡಿತ್ತು. 

ಕಲುಷಿತ ಆಹಾರ: ಇಬ್ಬರು ವಿದ್ಯಾರ್ಥಿಗಳ ಸಾವು ಕಲುಷಿತ ಆಹಾರ ಸೇವಿಸಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಯ ಮೂರು ಶಾಲೆಗಳ ಮಾನ್ಯತೆಯನ್ನು ಡಿಡಿಪಿಐ ಎಚ್. ಶಿವರಾಮೇಗೌಡ ಅವರು ಮೇ 9ರಂದು ರದ್ದುಪಡಿಸಿದ್ದರು. ಮಾ.16ರಂದು ಉದ್ಯಮಿಯೊಬ್ಬರು ನೀಡಿದ್ದ ಆಹಾರ ಸೇವಿಸಿ ಮೇಘಾಲಯ ಮೂಲದ ವಿದ್ಯಾರ್ಥಿಗಳಾದ ಕೇರ್ಲಾಂಗ್ (13) ಮತ್ತು ನಮೀಬ್ ಮಾಂತೆ (14) ಮೃತಪಟ್ಟಿದ್ದರು. 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. 

ಮದ್ದೂರು ಗಲಭೆ: 21 ಆರೋಪಿಗಳ ಬಂಧನ ‌ಗಣೇಶ ಮೂರ್ತಿ ವಿಸರ್ಜನೆ ವೇಳೆ ಸೆ.8ರ ರಾತ್ರಿ ಹಿಂದೂ ಮತ್ತು ಮುಸ್ಲಿಂ ಯುವಕರ ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದ್ದು ಮದ್ದೂರು ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು. ಘಟನೆಯಲ್ಲಿ ಒಟ್ಟು 8 ಮಂದಿಗೆ ಗಾಯಗಳಾಗಿದ್ದವು. ನಂತರ ಬಿಜೆಪಿ ಬಜರಂಗದಳ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ‘ಮದ್ದೂರು ಬಂದ್‌’ ಆಚರಿಸಲಾಗಿತ್ತು. ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ 21 ಮಂದಿಯನ್ನು ಬಂಧಿಸಿದ್ದರು. ಪಟ್ಟಣದಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.