ಮೇ 19ರಂದು ಮಹಾಕುಂಭಾಭಿಷೇಕ
ಸುತ್ತೂರು ಮತ್ತು ಆದಿಚುಂಚನಗಿರಿ ಶ್ರೀಗಳು ಭಾಗಿ
ಶಿಥಿಲಗೊಂಡ ದೇವಾಲಯಕ್ಕೆ ಹೊಸರೂಪ
ಮಂಡ್ಯ: ಚಾಲುಕ್ಯ ರಾಜರ ಆಳ್ವಿಕೆಯಲ್ಲಿ ಕೀಲಾರ ಗ್ರಾಮದಲ್ಲಿ ನಿರ್ಮಾಣವಾಗಿದ್ದ ಆರಾಧ್ಯ ದೈವ ಸೋಮೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ, ಮಹಾ ಕುಂಭಾಭಿಷೇಕ ಮಹೋತ್ಸವವು ಮೇ 16ರಿಂದ 19ವರೆಗೆ ನಡೆಯಲಿದೆ. ದೇವಾಲಯದ ಮೂಲಸ್ವರೂಪಕ್ಕೆ ಧಕ್ಕೆ ಬಾರದ ರೀತಿ ಆಧುನಿಕ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಿರುವುದು ವಿಶೇಷ ಎನಿಸಿದೆ.
ಸುಮಾರು 750 ವರ್ಷಗಳ ಹಿಂದೆ ಮಾಂಡವ್ಯ ಪ್ರದೇಶದ ಕೀಲಾರ ಗ್ರಾಮದಲ್ಲಿ ಚಾಲುಕ್ಯ ರಾಜರ ಆಳ್ವಿಕೆಯಲ್ಲಿ ಸಾಮಂತ ರಾಜರು ಹಾಗೂ ಮಾಂಡಲೀಕರು ಸೋಮೇಶ್ವರಸ್ವಾಮಿ ದೇವಾಲಯವನ್ನು ನಿರ್ಮಿಸಿದರೆಂಬ ಐತಿಹ್ಯವಿದೆ.
ಶಿಥಿಲಗೊಂಡಿರುವ ದೇವಾಲಯವನ್ನು ಗ್ರಾಮಸ್ಥರು, ದೇವರ ಕುಲದವರು, ಭಕ್ತರು, ಆಗಮ ಪಂಡಿತರು, ವಿದ್ವಾಂಸರು, ಜ್ಯೋತಿಷಿಗಳ ಮಾರ್ಗದರ್ಶನದಂತೆ ಜೀರ್ಣೋದ್ಧಾರ ಮಾಡಲಾಗಿದೆ. ಸೋಮೇಶ್ವರ ದೇವಾಲಯ ಟ್ರಸ್ಟ್, ಪ್ರಾಚ್ಯವಸ್ತು ಸಂಗ್ರಹಾಲಯ, ಪರಂಪರೆ ಮತ್ತು ಧಾರ್ಮಿಕ ದತ್ತಿ ಇಲಾಖೆ, ಧರ್ಮಸ್ಥಳ ಮಂಜುನಾಥೇಶ್ವರಸ್ವಾಮಿ ದೇವಾಲಯದ ಸಹಕಾರದಿಂದ ಒಟ್ಟು ₹3.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ದೇವಾಲಯದಲ್ಲಿ ನವಗ್ರಹ ದೇವಸ್ಥಾನ, ಧ್ವಜಸ್ತಂಭ, ನಂದಿ ಮಂಟಪ, ಬಲಿಪೀಠ, ದೀಪಸ್ತಂಭ, ಚಂಡೀಕೇಶ್ವರ ಸನ್ನಿಧಿ, ನಾಗರಕಲ್ಲು, ಪಂಚ ಕಳಸಗಳನ್ನೊಳಗೊಂಡ ರಾಜಗೋಪುರ, ಶಿಲಾ ಕಾಂಪೌಂಡ್, ಪಾಕಶಾಲೆ, ದೇವಾಲಯದ ಒಳ ಪ್ರಾಕಾರಕ್ಕೆ ನೆಲಹಾಸಿನಿಂದಿಗೆ ಸುಂದರವಾಗಿ ನಿರ್ಮಾಣ ಮಾಡಿದ್ದು, ಭಕ್ತರನ್ನು ಕೈಬೀಸಿ ಕರೆಯುತ್ತಿದೆ.
ನಾಲ್ಕು ದಿನ ನಡೆಯುವ ದೇವತಾ ಕಾರ್ಯ:
ದೇವಾಲಯದ ಜೀರ್ಣೋದ್ಧಾರ, ಮಹಾ ಕುಂಭಾಭಿಷೇಕ ಮಹೋತ್ಸವವು ಮೇ 16ರಿಂದ 19ವರೆಗೆ ನಡೆಯಲಿದ್ದು, ಸುಮಾರು 25 ಸಾವಿರ ಜನ ಸೇರುವ ನಿರೀಕ್ಷೆಯಿದೆ.
16ರಂದು ಬೆಳಿಗ್ಗೆ 9.30ರಿಂದ ವಿವಿಧ ಧಾರ್ಮಿಕ ಕೈಂಕರ್ಯ ಮತ್ತು ಗಂಗಾದಿ ಸಪ್ತ ತೀರ್ಥ ಅವಾಹನೆ ಪ್ರಾಕಾರ ಪ್ರವೇಶ ಕಾರ್ಯಕ್ರಮ ಇರಲಿದೆ. ದೇವಸ್ಥಾನದ ಲೋಕಾರ್ಪಣೆ ಮತ್ತು ಧಾರ್ಮಿಕ ಸಭೆಯು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ನಿಶ್ಚಲಾನಂದನಾಥ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನಸ್ವಾಮಿ ಸಾನ್ನಿಧ್ಯ ವಹಿಸುವರು.
17ರಂದು ಬೆಳಿಗ್ಗೆ 7.30ರಿಂದ ಮಹಾಗಣಪತಿ ಪೂಜಾ, ಹೋಮ, ವಸ್ತು ಮಂಡಲಾರಾಧನೆ, ಸಂಜೆ 7 ಗಂಟೆಯ ನಂತರ ನಿರ್ಭಯಾನಂದ ರಾಮಾರ್ಯರು ಭಜನಾ ಕಾರ್ಯಕ್ರಮ ನಡೆಸಿಕೊಡುವರು.
18ರಂದು ಬೆಳಿಗ್ಗಿನಿಂದ ವಿವಿಧ ಪೂಜಾ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಸಂಜೆ 7 ಗಂಟೆಗೆ ಜಿ.ವಿ. ಅಮರೇಶಶಾಸ್ತ್ರಿ ಗುರೂಜಿ ಅವರಿಂದ ಪ್ರವಚನ ಇರಲಿದೆ.
ಮೇ 19ರಂದು ಬೆಳಿಗ್ಗೆ 9.20ರಿಂದ ಪುಣ್ಯಾಹವಾಚನ, ಪ್ರಧಾನ ಕಳಶಾರಾಧನೆ ಪರಿವಾರ ಸಹಿತ ಸ್ವಾಮಿಯವರಿಗೆ ಮಹಾಕುಂಭಾಭಿಷೇಕ, ವಿಮಾನಗೋಪುರ, ರಾಜಗೋಪುರ ಕಳಸಗಳಿಗೆ ಮಹಾಕುಂಭಾಭಿಷೇಕ ನಡೆಯಲಿದೆ.
ಮೇ 18ರಂದು ನಡೆಯುವ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಹಾಗೂ ಆಶೀರ್ವಚನ ನೀಡುವರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್‌ಗೌಡ ಆಗಮಿಸಲಿದ್ದಾರೆ.
40 ಮಂದಿ ಪೌರೋಹಿತ್ಯ
‘ಜಲಪೋಷಣೆಗಾಗಿ ಕೀಲಾರ ಗ್ರಾಮದ ಪ್ರತಿ ಮನೆಯಿಂದಲೂ ಒಬ್ಬರಂತೆ ಮೀಸಲು ನೀರು ತರುವ ಕಾರ್ಯದಲ್ಲಿ ತೊಡಗಲಿದ್ದು ಅನ್ನಸಂತರ್ಪಣೆಯೂ ಇರುತ್ತದೆ. ಹೋಮ ಹವನ ನಡೆಸಲು ಉತ್ತರ ಕರ್ನಾಟಕದಿಂದ 40ಕ್ಕೂ ಹೆಚ್ಚು ಪುರೋಹಿತರು ಬರುತ್ತಾರೆ. ಈ ಕಾರ್ಯಕ್ರಮಕ್ಕೆ 42 ಗ್ರಾಮದ ಕುಳದವರು ಸೇರಿದಂತೆ ಭಕ್ತರು ಭಾಗವಹಿಸಬೇಕು’ ಎಂದು ಸೋಮೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೆ.ಎನ್.ಜಯರಾಮೇಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.