ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟದ ಘಟನಾ ಸ್ಥಳ (ಒಳಚಿತ್ರ: ಮೃತ ಜಯಕುಮಾರ್)
- ಪ್ರಜಾವಾಣಿ ಚಿತ್ರ
ಮಂಡ್ಯ: ತಾಲ್ಲೂಕಿನ ಕತ್ತರಘಟ್ಟ ಗ್ರಾಮದ ದಲಿತ ಯುವಕನ ಅನುಮಾನಾಸ್ಪದ ಸಾವಿನ ಗಂಭೀರ ಪ್ರಕರಣವನ್ನು ರಾಜ್ಯ ಸರ್ಕಾರ ‘ಅಪರಾಧ ತನಿಖಾ ವಿಭಾಗ’ದ (ಸಿಐಡಿ) ಪೊಲೀಸರಿಗೆ ಹಸ್ತಾಂತರಿಸಿದ್ದು, ತನಿಖೆ ಚುರುಕುಗೊಂಡಿದೆ.
ಡಿವೈಎಸ್ಪಿ ಉಮೇಶ್ ನೇತೃತ್ವದ ತನಿಖಾ ತಂಡ ಕತ್ತರಘಟ್ಟ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು. ದಲಿತ ವ್ಯಕ್ತಿ ಜಯಕುಮಾರ್ ಮೃತಪಟ್ಟ ಘಟನಾ ಸ್ಥಳದ ಮಹಜರು ನಡೆಸಿತು. ನಂತರ ಅವರ ಮನೆಗೂ ಭೇಟಿ ನೀಡಿ, ಮೃತರ ಪತ್ನಿ ಲಕ್ಷ್ಮಿ ಅವರನ್ನು ಮಾತನಾಡಿಸಿ ಮಾಹಿತಿ ಪಡೆದುಕೊಂಡಿತು. ನಂತರ ಕೆ.ಆರ್.ಪೇಟೆ ಪ್ರವಾಸಿ ಮಂದಿರಕ್ಕೆ ಬಂದ ಸಿಐಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದವರಿಂದ ಹೇಳಿಕೆ ಪಡೆದುಕೊಂಡಿದ್ದಾರೆ.
‘ಸಿಐಡಿ ತಂಡವು ಗ್ರಾಮಕ್ಕೆ ಭೇಟಿ ನೀಡಿದ ವಿಷಯ ತಿಳಿದು ತಹಶೀಲ್ದಾರ್ ಪರವಾಗಿ ಕಂದಾಯ ಅಧಿಕಾರಿಯೊಬ್ಬರ ಜೊತೆ ಕತ್ತರಘಟ್ಟಕ್ಕೆ ಹೋಗಿದ್ದೆವು. ಆದರೆ ಸಿಐಡಿ ತಂಡ ‘ನಾವು ಕರೆದಾಗ ಬನ್ನಿ’ ಎಂದು ನಮ್ಮನ್ನು ವಾಪಸ್ ಕಳುಹಿಸಿತು’ ಎಂದು ಕಂದಾಯ ನಿರೀಕ್ಷಕ ಜ್ಞಾನೇಶ್ ತಿಳಿಸಿದ್ದಾರೆ.
ಕತ್ತರಘಟ್ಟ ಗ್ರಾಮದ ದಲಿತ ವ್ಯಕ್ತಿ ಜಯಕುಮಾರ್ ಅವರಿಗೆ ಸೇರಿದ ಜಮೀನಿನಲ್ಲಿ ಅದೇ ಗ್ರಾಮದ ಅನಿಲ್‌ಕುಮಾರ್ ಎಂಬಾತ ಹುಲ್ಲಿನ ಬಣವೆ ಹಾಕಿಕೊಂಡಿದ್ದ. ಈ ಬಣವೆ ತೆರವುಗೊಳಿಸುವಂತೆ ಹಲವು ಬಾರಿ ಜಯಕುಮಾರ್ ಕೋರಿದ್ದರು. ಈ ವಿಷಯಕ್ಕೆ ಇವರಿಬ್ಬರ ನಡುವೆ ಜಗಳವಾಗಿತ್ತು. ಮೇ 16ರಂದು ಪೊಲೀಸ್ ಠಾಣೆಯಲ್ಲಿ ಜಯಕುಮಾರ್ ದೂರು ದಾಖಲಿಸಿದ್ದರು. ಮರುದಿನವೇ ಜಯಕುಮಾರ್ ಅವರ ಮೃತದೇಹ ಬಣವೆ ಪಕ್ಕ ಪತ್ತೆಯಾಗಿತ್ತು.
‘ಜಯಕುಮಾರ್ ಅವರನ್ನು ಹುಲ್ಲಿನ ಮೆದೆಗೆ ದೂಡಿ ಸಜೀವವಾಗಿ ದಹನ ಮಾಡಲಾಗಿದೆ, ಇದು ಕೊಲೆ’ ಎಂಬುದು ಮೃತರ ಕುಟುಂಬಸ್ಥರು ಮತ್ತು ದಲಿತ ಸಂಘಟನೆಗಳ ಆರೋಪ.
ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದ ತಂಡ ಮೇ 29ರಂದು ಗ್ರಾಮಕ್ಕೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.