ADVERTISEMENT

ಮಂಡ್ಯ: ಅಕ್ರಮ ಭೂಸ್ವಾಧೀನ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 2:20 IST
Last Updated 9 ಅಕ್ಟೋಬರ್ 2025, 2:20 IST
ಮಂಡ್ಯ ತಾಲ್ಲೂಕಿನ ಎಲೆಚಾಕನಹಳ್ಳಿ ದಲಿತರ ತೋಟಿ ಇನಾಂ ಭೂಮಿ ರಕ್ಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಡಿಎಸ್‌ಎಸ್‌ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಮಂಡ್ಯ ತಾಲ್ಲೂಕಿನ ಎಲೆಚಾಕನಹಳ್ಳಿ ದಲಿತರ ತೋಟಿ ಇನಾಂ ಭೂಮಿ ರಕ್ಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಡಿಎಸ್‌ಎಸ್‌ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ: ತಾಲ್ಲೂಕಿನ ಎಲೆಚಾಕನಹಳ್ಳಿ ದಲಿತರ ತೋಟಿ ಇನಾಂ ಭೂಮಿ ರಕ್ಷಣೆ ಮಾಡಬೇಕು ಹಾಗೂ ಕರ್ನಾಟಕ ಗೃಹ ಮಂಡಳಿಗೆ ಅಕ್ರಮ ಭೂಸ್ವಾಧೀನ ಮಾಡಿರುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಕಾರ್ಯಕರ್ತರು ಜಿಲ್ಲೆಯಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಬೇಕೆಂದು ಘೊಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕುಮಾರ ಅವರಿಗೆ ಮನವಿ ನೀಡಿದರು.

ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಗ್ರಾ.ಪಂ ವ್ಯಾಪ್ತಿಯ ಬಸವನಪುರದಲ್ಲಿ ಆಶ್ರಯ ನಿವಾಸಿಗಳಿಗಾಗಿ ನಿವೇಶನ ಹಂಚಿಕೆ ಮಾಡಿ ಕಳೆದ 20 ವರ್ಷಗಳಿಂದ ಬಳಕೆ ಮಾಡುತ್ತಿದ್ದ ಬೆಂಗಳೂರು- ಮೈಸೂರು ಹೆದ್ದಾರಿಗೆ ಸಂಪರ್ಕಿಸುವ ಸಾರ್ವಜನಿಕ ರಸ್ತೆಯನ್ನು ಸಮರ್ಪಕ ಮತ್ತು ನಿಯಮಾನುಸಾರ ಕ್ರಮವಹಿಸದೆ ಸಿವಿಲ್ ನ್ಯಾಯಾಲಯ ರಸ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ. ಇದನ್ನು ತೆರವುಗೊಳಿಸುವಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತಾಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ರಾಜ್ಯ ಸರ್ಕಾರ ಈ ಕೂಡಲೆ ಕರ್ನಾಟಕ ಗೃಹಮಂಡಳಿಗೆ ಭೂಸ್ವಾಧೀನ ಪ್ರಕ್ರಿಯೆ ಅಧಿಸೂಚನೆಯನ್ನು ರದ್ದುಪಡಿಸುವ ಮೂಲಕ ಎಲೆಚಾಕನಹಳ್ಳಿ ದಲಿತರ ತುಂಡು ಭೂಮಿಯನ್ನು ರಕ್ಷಿಸಬೇಕು. ಪಾಂಡವಪುರ ತಾಲ್ಲೂಕು ಮೇಲುಕೋಟೆ ಸ.ನಂ.68 ರಲ್ಲಿ  ಸರ್ಕಾರಿ ಭೂಮಿಯಲ್ಲಿ ಕಳೆದ 20 ವರ್ಷಗಳಿಂದಲೂ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಅಲೆಮಾರಿ ಸಮುದಾಯದ ಗೀತಾ ಮತ್ತು ಮಂಜುಳಾ ಅವರಿಗೆ ಭೂಸುಧಾರಣೆ ಕಾಯ್ದೆಯ ಅನ್ವಯ ಸಕ್ರಮಗೊಳಿಸಿ, ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಮದ್ದೂರು ತಾಲ್ಲೂಕು ಕೊಪ್ಪ ಗ್ರಾಮ ಪಂಚಾಯಿತಿಯ ಹುರುಗಲವಾಡಿ ಗ್ರಾಮದ ಸ.ನಂ.158 ರಲ್ಲಿ ಸರ್ಕಾರ ದಲಿತ ಕುಟುಂಬಗಳಿಗೆ ಹಂಚಿಕೆ ಮಾಡಿರುವ ನಿವೇಶನ ಸಂಖ್ಯೆ 13 ಮತ್ತು 14ನೇ ನಿವೇಶನದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ನಡೆದಿರುವ ಭೂ ಅಕ್ರಮ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈರ ನಾಯಕಿ ಸುನಂದಾ ಜಯರಾಂ, ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ, ಮುಖಂಡರಾದ ಶರಾವತಿ ಅಶ್ವಥ್, ಬಿ.ಆನಂದ್, ಕೊತ್ತತ್ತಿ ಮಹದೇವ್, ಮುತ್ತುರಾಜು, ಪುಟ್ಟಮ್ಮ, ಪ್ರೇಮಾ, ರವಿ, ಜಯಬೋರ, ಪುಟ್ಟಮ್ಮ, ಕೆ.ಎಸ್‌.ಶಿವಲಿಂಗಯ್ಯ, ಕೆ.ಎಸ್‌.ಪುಟ್ಟಸ್ವಾಮಿ, ರೇಖಾ ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.