ADVERTISEMENT

ಮಂಡ್ಯ | ಕಂದಾಯ ಇಲಾಖೆ ಕೆಲಸದಲ್ಲಿ ಕಾಣದ ಪ್ರಗತಿ: ಜಿಲ್ಲಾಧಿಕಾರಿ ತರಾಟೆ

ಮಳವಳ್ಳಿ: ತಹಶೀಲ್ದಾರ್ ಸೇರಿದಂತೆ ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾಧಿಕಾರಿ ತರಾಟೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 2:38 IST
Last Updated 10 ಜುಲೈ 2025, 2:38 IST
ಮಳವಳ್ಳಿ ಪಟ್ಟಣದ ತಾಲ್ಲೂಕು ‌ಪಂಚಾಯಿತಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕುಮಾರ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆ ನಡೆಯಿತು 
ಮಳವಳ್ಳಿ ಪಟ್ಟಣದ ತಾಲ್ಲೂಕು ‌ಪಂಚಾಯಿತಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕುಮಾರ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆ ನಡೆಯಿತು    

ಮಳವಳ್ಳಿ: ತಾಲ್ಲೂಕಿನಲ್ಲಿನ ಕಂದಾಯ ಇಲಾಖೆಯ ಕಡತಗಳ‌ ವಿಲೇವಾರಿಯಲ್ಲಿ ಏಕೆ ನಿರ್ಲಕ್ಷ್ಯ ಎಂದು ತಹಶೀಲ್ದಾರ್ ಎಸ್.ವಿ‌.ಲೋಕೇಶ್ ಅವರನ್ನು ಜಿಲ್ಲಾಧಿಕಾರಿ ಕುಮಾರ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕಂದಾಯ ಇಲಾಖೆಯ ಅಧಿಕಾರಿಗಳ ಹಾಗೂ ಸಿಬ್ಬಂದಿ  ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕಡತಗಳು ಮಳವಳ್ಳಿಯಲ್ಲಿ ವಿಲೇವಾರಿ ಆಗದೇ ಬಾಕಿ ಉಳಿದಿವೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮರ್ಪಕವಾಗಿ ಕೆಲಸ ನಿರ್ವಹಿಸದಿದ್ದರೆ ಏಕೆ ಕ್ರಮ ಕೈಗೊಂಡಿಲ್ಲ. ಇನ್ನೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಏಕೆ ಲ್ಯಾಪ್‌ಟಾಪ್ ವಿತರಿಸಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

‘ಜನರ ಕೆಲಸಗಳು ಸಮರ್ಪಕವಾಗಿ ಆಗಬೇಕು. ಎಲ್ಲ ಅರ್ಜಿಗಳನ್ನು ಕೂಡಲೇ ಇ–ಆಫೀಸ್‌ನಲ್ಲಿ ಎಂಟ್ರಿ ಮಾಡಬೇಕು’ ಎಂದು ತಾಕೀತು ಮಾಡಿದರು.

‘ಸರ್ಕಾರಿ ವೇತನ ಪಡೆಯುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸಗಳು ಆನ್ ಲೈನ್ ನಲ್ಲಿ ಗೊತ್ತಾಗುತ್ತದೆ’ ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಮಾತನಾಡಿ, ‘ಮಳವಳ್ಳಿ ತಾಲ್ಲೂಕಿನಲ್ಲಿ ಕಂದಾಯ ಇಲಾಖೆಯಲ್ಲಿ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಖುದ್ದು ಜಿಲ್ಲಾಧಿಕಾರಿಗಳು ಸಭೆ ನಡೆಸುವಂತಾಗಿದೆ. ಆರ್ ಐ, ಶಿರಸ್ತೇದಾರರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು’ ಎಂದು ಎಚ್ಚರಿಸಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕುಮಾರ ಅವರು ತಾಲ್ಲೂಕಿನ ಬಾಣಸಮುದ್ರ ಗ್ರಾಮಕ್ಕೆ ಭೇಟಿ ನೀಡಿದರು. ಕೂಡಲೇ ಅಂಗನವಾಡಿಗೆ ಜಾಗ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಡಿಡಿಎಲ್ ಆರ್ ವೀರೂಪಾಕ್ಷ, ತಾ.ಪಂ.ಇಒ ಎಚ್.ಜಿ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ‌ ವಿ.ಒ.ಉಮಾ ಪಾಲ್ಗೊಂಡಿದ್ದರು.

ಆರ್ ಟಿಸಿ ಬದಲಾವಣೆ ಸರ್ಕಾರಿ ಜಮೀನುಗಳ ರಕ್ಷಣೆ ಅರ್ಜಿ ವಿಲೇವಾರಿಯಲ್ಲಿ ಮಳವಳ್ಳಿ ಹಿಂದುಳಿದಿದೆ. ಇಲಾಖೆಯ ಕೆಲಸದಲ್ಲಿ ನಿಷ್ಠೆ ಮತ್ತು ಕಾಳಜಿ ಇಲ್ಲ. ಇದೇ ಮುಂದುವರಿದರೇ ವೇತನ ಮತ್ತು ಬಡ್ತಿಯನ್ನು ಕಡಿತಗೊಳಿಸಲಾಗುವುದು
ಕುಮಾರ ಜಿಲ್ಲಾಧಿಕಾರಿ

ಗ್ರಾಮ ಪಂಚಾಯತಿಯಲ್ಲಿಯೇ ಕಚೇರಿ

ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾ.ಪಂ.ಕಚೇರಿಯಲ್ಲಿಯೇ ಕಾರ್ಯನಿರ್ವಹಿಸಬೇಕು. ಬಾಡಿಗೆ ಮನೆ ಪಡೆದು ಕರ್ತವ್ಯ ನಿರ್ವಹಿಸಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು‌. ಸರ್ವೆ ನಡೆಸಿ ಪೌತಿ ಖಾತೆಗಳನ್ನು ಮಾಡಿಸಬೇಕು. ಮರಣ ಹೊಂದಿರಿವವರ ಹೆಸರಿನಲ್ಲಿ ಖಾತೆಗಳು ಇರಬಾರದು. ಸರ್ಕಾರಿ ಒತ್ತುವರಿಯನ್ನು ತೆರವುಗೊಳಿಸಿ ಸರ್ಕಾರಿ ಭೂಮಿ ಎಂದು ನಮೂದಿಸಬೇಕು ಎಂದು ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.