ಮಂಡ್ಯ: ಜಿಲ್ಲೆಯ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರ ಸ್ಥಳದಲ್ಲಿ ವಾಸಿಸುವುದು ಸೇರಿದಂತೆ ಅಧಿಕಾರಿ ವರ್ಗ ನಿಯಮಾನುಸಾರ ಪಾಲನೆ ಮಾಡಬೇಕಾದ 11 ಸೂಚನೆಗಳ ಸುತ್ತೋಲೆ ಜಿಲ್ಲಾಧಿಕಾರಿ ಕಚೇರಿಯಿಂದ ಹೊರಬಿದ್ದಿದೆ.
ಕೆಳಹಂತದ ಅಧಿಕಾರಿಗಳನ್ನು ನಿರ್ವಹಣೆ ಮಾಡುವುದು ಪ್ರತಿ ಜಿಲ್ಲಾಧಿಕಾರಿಗೂ ಸವಾಲಿನ ವಿಷಯವಾಗಿದೆ. ವಿವಿಧ ರೀತಿಯ ಪ್ರಭಾವ ಬಳಸುವ ಸಿಬ್ಬಂದಿ ವರ್ಗ ದಶಕದಿಂದಲೂ ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿದ್ದಾರೆ. ಸರ್ಕಾರಿ ಕೆಲಸದಲ್ಲಿದ್ದರೂ ಅನ್ಯ ಚಟುವಟಿಕೆಯಲ್ಲಿ ತೊಡಗಿರುವುದು ಸಾಮಾನ್ಯ ಸಂಗತಿಯಾಗಿದೆ. ಇವರನ್ನು ನಿರ್ವಹಣೆ ಮಾಡಲು ದಿಟ್ಟ ಕ್ರಮ ಕೈಗೊಂಡಿರುವ ಜಿಲ್ಲಾಧಿಕಾರಿ ಕುಮಾರ ನಿಯಮಗಳ ಪರಿಪಾಲನೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲೆಯಾದ್ಯಂತ ಶೇ 80ರಷ್ಟು ಸರ್ಕಾರಿ ಅಧಿಕಾರಿಗಳು ಮೈಸೂರು, ಬೆಂಗಳೂರು ಸೇರಿದಂತೆ ಬೇರೆ ನಗರಗಳಲ್ಲಿ ನೆಲೆಸಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ ಸಿಇಒ ಹೊರತುಪಡಿಸಿದರೆ ವಿವಿಧ ಇಲಾಖೆಗಳ ಮುಖ್ಯಸ್ಥರು ಹೊಗಿನಿಂದ ಬಂದು ಹೋಗುತ್ತಾರೆ. ಜಿಲ್ಲಾಧಿಕಾರಿ ಕಚೇರಿಯ ಗುಮಾಸ್ತನಿಂದ ಜಂಟಿ ನಿರ್ದೇಶಕ, ಉಪ ನಿರ್ದೇಶಕರೆಲ್ಲರೂ ಬೇರೆ ನಗರಗಳಲ್ಲೇ ನೆಲೆಸಿದ್ದಾರೆ.
ಅಧಿಕಾರಿಗಳ ಕರ್ತವ್ಯ ಭೇಟಿಗಷ್ಟೇ ಸೀಮಿತವಾಗಿದ್ದು ಕಚೇರಿಗಳಲ್ಲಿ ಸಮರ್ಪಕ ಕರ್ತವ್ಯ ನಿರ್ವಹಣೆಗೆ ತೊಂದರೆಯಾಗಿದೆ. ‘ಮಂಡ್ಯದಲ್ಲಿ ಕೆಲಸ; ಮೈಸೂರು, ಬೆಂಗಳೂರಲ್ಲಿ ವಾಸ’ ಎಂಬ ಪರಿಸ್ಥಿತಿ ಇದೆ. ಸಾರ್ವಜನಿಕರಿಗೆ ಪಾರದರ್ಶಕ ಹಾಗೂ ಸಮರ್ಪಕ ಸೇವೆ ಒದಗಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಕುಮಾರ ಅವರು ಕಟ್ಟುನಿಟ್ಟಿನ ಸೂಚನೆಗಳ ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರಿ ಆದೇಶದ ಅನ್ವಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಇಲಾಖೆಯ ಗುರುತಿನ ಚೀಟಿ ಧರಿಸಿ ಕರ್ತವ್ಯ ನಿರ್ವಹಣೆ ಮಾಡಬೇಕು. ಕರ್ತವ್ಯ ನಿರ್ವಹಿಸುವ ಅಧಿಕಾರಿಯ ಮೇಜಿನ ಮೇಲೆ ಹುದ್ದೆ ಸೂಚಿಸುವ ಪದನಾಮ ಫಲಕ ಅಳವಡಿಸಿರಬೇಕು. ಕಡ್ಡಾಯವಾಗಿ ಕಚೇರಿಯಲ್ಲಿ ಬಯೋಮೆಟ್ರಿಕ್ ಹಾಜರಾತಿ ಅನುಸರಿಸಬೇಕು, ಮುಖ್ಯಾಧಿಕಾರಿ ಅದನ್ನು ವಾರಕ್ಕೊಮ್ಮೆ ಪರಿಶೀಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.
ಅನಿರೀಕ್ಷಿತ ಭೇಟಿ; ಜಿಲ್ಲಾಧಿಕಾರಿ ಕುಮಾರ ಅವರು ಈಗಾಗಲೇ ಹಲವು ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಸಿಬ್ಬಂದಿ ಹಾಗೂ ಕಚೇರಿಯ ಚಟವಟಿಕೆಯನ್ನು ಚುರುಕುಗೊಳಿಸಿದ್ದಾರೆ. ಇದನ್ನು ವಿವಿಧ ಇಲಾಖಾ ಮುಖ್ಯಸ್ಥರೂ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. ಮುಖ್ಯಾಧಿಕಾರಿಗಳು ಆಯಾ ಕಚೇರಿ ಶಾಖೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಹಾಜರಾತಿ ತಪಾಸಣೆ ಮಾಡಬೇಕು. ನಿಗದಿತ ಸಮಯ ಪರಿಪಾಲನೆ ಮಾಡದ ಸಿಬ್ಬಂದಿಗೆ ಲಿಖಿತ ಎಚ್ಚರಿಕೆ ನೀಡುವಂತೆ ಸೂಚಿಸಿದ್ದಾರೆ.
ಕಚೇರಿಗೆ ಬಂದ ನಂತರ ಅಧಿಕಾರಿಗಳು ತಮಗೆ ನಿಗದಿಯಾದ ಸ್ಥಳದಲ್ಲೇ ಇರಬೇಕು. ಕರ್ತವ್ಯದ ಸಮಯದಲ್ಲಿ ಸಿಬಂದಿ ಹೊರಗೆ ಹೋಗದಂತೆ ಮುಖ್ಯಾಧಿಕಾರಿಗಳು ನಿರ್ಬಂಧಿಸಬೇಕು, ಸಿಬ್ಬಂದಿಯ ಚಲನ–ವಲನದ ಮೇಲೆ ನಿಗಾ ವಹಿಸಬೇಕು ಎಂದು ಸೂಚಿಸಿದ್ದಾರೆ.
‘ಪಾರದರ್ಶಕ ಕರ್ತವ್ಯ ನಿರ್ವಹಣೆಗೆ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆ ಮೂಲಕ ಸಾರ್ವಜನಿಕರಿಗೆ ಸಮರ್ಪಕ ಸೇವೆ ಒದಗಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಪರ ಊರುಗಳಲ್ಲಿ ನೆಲೆಸಿರುವ ಹಲವು ಅಧಿಕಾರಿಗಳಿಗೆ ನೀಡಲಾಗಿರುವ ವಾಹನಗಳ ದುರುಪಯೋಗವೂ ಆಗುತ್ತಿದೆ. ನಗರದ ಬಸ್ ರೈಲು ನಿಲ್ದಾಣಗಳಿಂದ ಅಧಿಕಾರಿಗಳನ್ನು ಕರೆದು ತರುವ ಅಲ್ಲಿಗೆ ಬಿಡುವ ಹೆಚ್ಚುವರಿ ಜವಾಬ್ದಾರಿಯೂ ಇದೆ. ಬೆಳಿಗ್ಗೆ ಹಾಗೂ ಸಂಜೆ ನಿಲ್ದಾಣಗಳ ಬಳಿ ವಾಹನಗಳೊಂದಿಗೆ ಚಾಲಕರು ಕಾಯುವ ರೂಢಿಯೂ ಇದೆ. ಈ ಬಗ್ಗೆಯೂ ಸುತ್ತೋಲೆಯಲ್ಲಿ ಪ್ರಸ್ತಾಪ ಮಾಡಿರುವ ಜಿಲ್ಲಾಧಿಕಾರಿಗಳು ಕರ್ತವ್ಯ ಮುಗಿದ ನಂತರ ವಾಹನಗಳನ್ನು ಕಚೇರಿ ಆವರಣದಲ್ಲೇ ಪಾರ್ಕಿಂಗ್ ಮಾಡಬೇಕು. ಗುತ್ತಿಗೆ ಆಧಾರದ ಮೇಲೆ ವಾಹನ ಸೌಲಭ್ಯ ಪಡೆದಿರುವ ಅಧಿಕಾರಿಗಳು ವಾಹನದ ಮೇಲೆ ಅಧಿಕಾರಿಯ ಹೆಸರು ‘ಸರ್ಕಾರಿ ಉದ್ದೇಶಕ್ಕೆ’ ಫಲಕ ಅಳವಡಿಸಬೇಕು ಎಂದು ಸೂಚಿಸಿದ್ದಾರೆ.
ಕರ್ತವ್ಯದಲ್ಲಿ ಶಿಸ್ತು ತರುವ ಉದ್ದೇಶ ಈ ಸುತ್ತೋಲೆ ಹೊರಡಿಸಲಾಗಿದೆ. ಅವಧಿ ಮುಗಿದ ನಂತರ ರಾತ್ರಿವರೆಗೂ ಕೆಲಸ ಮಾಡುವ ಉತ್ತಮ ಸಿಬ್ಬಂದಿಯೂ ಜಿಲ್ಲೆಯಲ್ಲಿದ್ದಾರೆ ಆ ಬಗ್ಗೆ ಅನುಮಾನವಿಲ್ಲ.-ಕುಮಾರ, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.