
ಹಲಗೂರು: ಸಮೀಪದ ಧನಗೂರು ಗ್ರಾಮದ ಮಾರಮ್ಮನ ದೇವಾಲಯದಲ್ಲಿ ಸೋಮವಾರ ರಾತ್ರಿ ಮುಸ್ಲಿಮರು ಒಗ್ಗೂಡಿ ಪೂಜಾ ಕಾರ್ಯಕ್ರಮ ಏರ್ಪಡಿಸಿ, ಅನ್ನ ಸಂತರ್ಪಣೆ ಮಾಡಿ ಹಿಂದೂ- ಮುಸ್ಲಿಂ ಭಾವೈಕ್ಯತೆ ಮೆರೆದರು.
ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಭಕ್ತರ ಸಹಕಾರದಿಂದ ನೂತನವಾಗಿ ಮಾರಮ್ಮ ದೇವಾಲಯ ನಿರ್ಮಿಸಿದ್ದು, ನ.2 ರಂದು ಲೋಕಾರ್ಪಣೆ ಮಾಡಲಾಗಿತ್ತು. ಮುಂದಿನ 48 ದಿನಗಳ ಕಾಲ ಪ್ರತಿದಿನ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ, ರಾತ್ರಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಬೇಕೆಂದು ಪೂರ್ವ ನಿರ್ಧರಿತವಾಗಿತ್ತು.
ಗ್ರಾಮದ ದೇವಾಲಯದಲ್ಲಿ ಪ್ರತಿನಿತ್ಯ ಪೂಜೆ ನಡೆಯುವುದನ್ನು ಗಮನಿಸಿದ ಮುಸ್ಲಿಮರು ಮಾರಮ್ಮ ದೇವರ ಪೂಜೆ ಮತ್ತು ಸೇವಾ ಕಾರ್ಯದಲ್ಲಿ ಭಾಗವಹಿಸಲು ನಮಗೂ ಅವಕಾಶ ಕೊಡಿ ಎಂದು ಗ್ರಾಮದ ಮುಖಂಡರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪಿದ ಮುಖಂಡರು ಸೋಮವಾರ ದೇವಿಗೆ ಪೂಜೆ ಮತ್ತು ಅನ್ನ ಸಂತರ್ಪಣೆ ಮಾಡಲು ಅವಕಾಶ ಕಲ್ಪಿಸಿದ್ದರು. ಅದರಂತೆ ಮುಸ್ಲಿಮರೆಲ್ಲರೂ ಸೇರಿ ಅಡುಗೆಗೆ ಬೇಕಾದ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಿ, ಮುಂದಾಳತ್ವ ವಹಿಸಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದರು.
ಧನಗೂರು ಜಾಮೀಯಾ ಮಸೀದಿ ಅಧ್ಯಕ್ಷ ರಿಜ್ವಾನ್, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಂದ್ರ, ಸಯ್ಯದ್ ಅಲ್ಲಾ ಬಕಾಷ್, ಮುಖಂಡರಾದ ಫಾರೂಕ್ ಪಾಷಾ, ಸಾಧಿಕ್ ಪಾಷಾ, ಅಬ್ಬಾಸ್, ಮುದಾಪೀರ್ ಪಾಷಾ, ಮುಷ್ತಾಕಿನ್ ಪಾಷಾ, ರಿಹಾನ್, ಇಲಿಯಾಜ್ ಪಾಷಾ ಭಾಗವಹಿಸಿದ್ದರು.
ಖುಷಿ ಕೊಟ್ಟ ಪೂಜಾ–ಸೇವೆ ಅವಕಾಶ
‘ನಮ್ಮ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯ ಪರಸ್ಪರ ಸ್ನೇಹಿತರಂತೆ ಇದ್ದು ನಮ್ಮ ಹಿರಿಯರ ಕಾಲದಿಂದಲೂ ಬಹಳ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದೇವೆ. ಗ್ರಾಮದ ಯಜಮಾನರು ದೇವಿಗೆ ಪೂಜೆ ಮತ್ತು ಅನ್ನ ಸಂತರ್ಪಣೆ ಮಾಡಲು ಇಂದು ಅವಕಾಶ ಮಾಡಿಕೊಟ್ಟಿದ್ದಾರೆ. ಮಾರಮ್ಮ ದೇವತೆಗೆ ಪೂಜೆ ಮಾಡಿದ್ದು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಿದ್ದು ಬಹಳ ಖುಷಿ ತಂದಿದೆ’ ಎಂದು ಗ್ರಾಮದ ಮುಸ್ಲಿಂ ಮುಖಂಡ ಫಾರೂಕ್ ಪಾಷಾ ಹರ್ಷ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.