ADVERTISEMENT

ಸೈಟ್‌ ಎಂಜಿನಿಯರ್‌ ನೇಮಕಾತಿಯಲ್ಲಿ ಅಕ್ರಮ!

ನಿಗದಿತ ವಿದ್ಯಾರ್ಹತೆ ಇಲ್ಲದಿದ್ದರೂ ನೇಮಕ: ಮೂವರನ್ನು ಹುದ್ದೆಯಿಂದ ಕೈಬಿಡಲು ತನಿಖಾ ತಂಡ ಶಿಫಾರಸು

ಸಿದ್ದು ಆರ್.ಜಿ.ಹಳ್ಳಿ
Published 24 ಏಪ್ರಿಲ್ 2025, 4:19 IST
Last Updated 24 ಏಪ್ರಿಲ್ 2025, 4:19 IST
ಮಂಡ್ಯ ಜಿಲ್ಲಾ ನಿರ್ಮಿತಿ ಕೇಂದ್ರ ಕಚೇರಿಯ ಹೊರನೋಟ
ಮಂಡ್ಯ ಜಿಲ್ಲಾ ನಿರ್ಮಿತಿ ಕೇಂದ್ರ ಕಚೇರಿಯ ಹೊರನೋಟ   

ಮಂಡ್ಯ: ಜಿಲ್ಲಾ ನಿರ್ಮಿತಿ ಕೇಂದ್ರದ ಸೈಟ್‌ ಎಂಜಿನಿಯರ್‌ ಹುದ್ದೆಗೆ ನಿಗದಿತ ವಿದ್ಯಾರ್ಹತೆ ಹೊಂದಿಲ್ಲದಿದ್ದರೂ ಮೂವರನ್ನು ಅಕ್ರಮವಾಗಿ ನೇಮಕಾತಿ ಮಾಡಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. 

‘ಜಿಲ್ಲಾ ನಿರ್ಮಿತಿ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಮೂವರು ಸೈಟ್‌ ಎಂಜಿನಿಯ‌ರ್‌ಗಳು ನಕಲಿ ಅಂಕಪಟ್ಟಿ ದಾಖಲೆಗಳನ್ನು ನೀಡಿ, ಕೆಲಸಕ್ಕೆ ಸೇರಿರುತ್ತಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ವಂಚನೆ ಮಾಡಿರುವ ನೌಕರರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಿ’ ಎಂದು ಮಂಡ್ಯದ ಸಾಮಾಜಿಕ ಹೋರಾಟಗಾರ ಕೆ.ಆರ್‌. ರವೀಂದ್ರ ಅವರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.

ತನಿಖಾ ಸಮಿತಿ ರಚನೆ: 

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ನೇತೃತ್ವದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್‌ ಪ್ರತಾಪ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಘವೇಂದ್ರ ಈ ಮೂವರನ್ನು ಒಳಗೊಂಡ ಸಮಿತಿಯನ್ನು ರಚಿಸಿ, ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಕುಮಾರ ಅವರು ಮಾರ್ಚ್‌ 7ರಂದು ಆದೇಶಿಸಿದ್ದರು.

ಸೈಟ್‌ ಎಂಜಿನಿಯರ್‌ಗಳಾದ ಬಿ.ಎಲ್‌. ವೇಣುಗೋಪಾಲ್‌, ಪ್ರಶಾಂತ್‌, ಶ್ರೀಧರ್‌ ಈ ಮೂವರ ವಿರುದ್ಧ ಆರೋಪ ಕೇಳಿಬಂದಿತ್ತು. ಈ ಮೂವರು ಆಪಾದಿತ ನೌಕರರ ನೇಮಕಾತಿ ಅಧಿಸೂಚನೆ, ಅಧಿಸೂಚನೆಗೆ ಪೂರಕವಾಗಿ ನಿಗದಿಪಡಿಸಿರುವ ಮಾನದಂಡಗಳು ಹಾಗೂ ನಿಗದಿತ ಮಾನದಂಡಗಳಿಗೆ ಪೂರಕವಾಗಿ ಸಲ್ಲಿಸಿರುವ ದಾಖಲೆಗಳು ಎಲ್ಲವನ್ನೂ ತನಿಖಾ ಸಮಿತಿಯು ಸಮಗ್ರವಾಗಿ ಪರಿಶೀಲಿಸಿದೆ. ನಿಗದಿತ ವಿದ್ಯಾರ್ಹತೆ ಇಲ್ಲದಿದ್ದರೂ ನೇಮಕಾತಿ ಮಾಡಿಕೊಂಡಿರುವುದು ನಿಯಮಬಾಹಿರವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಮೊದಲು ಉದ್ಯೋಗ, ನಂತರ ವಿದ್ಯಾರ್ಹತೆ:

ಪ್ರಶಾಂತ್‌ ಕೆ. ಅವರು 2017ರಿಂದ ಸೈಟ್‌ ಎಂಜಿನಿಯರ್‌ ಆಗಿ ನೇಮಕಗೊಂಡಿದ್ದು, ಕಾರ್ನಿಕ್‌ ಸಂಸ್ಥೆಗೆ ಸಲ್ಲಿಸಿರುವ ಮಾಹಿತಿಯಲ್ಲಿ ‘ಡಿಪ್ಲೊಮಾ ಇನ್‌ ಸಿವಿಲ್‌’ ಎಂದು ನಮೂದಾಗಿದೆ. ವಾಸ್ತವವಾಗಿ 2020ರಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಪೂರ್ಣಗೊಳಿಸಿದ್ದು, ಪ್ರಮಾಣಪತ್ರವನ್ನು 2023ರಲ್ಲಿ ಪಡೆದಿದ್ದಾರೆ.

ಶ್ರೀಧರ್‌ ಕೆ.ಪಿ. ಅವರು 2013ರಿಂದ ಸೈಟ್‌ ಎಂಜಿನಿಯರ್‌ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ, ಇವರು ಡಿಪ್ಲೊಮಾ ವಿದ್ಯಾರ್ಹತೆಯಲ್ಲಿ ತೇರ್ಗಡೆಯಾಗಿರುವುದು 2023ರಲ್ಲಿ. ಅಂದರೆ, ಇವರು ಹುದ್ದೆಯ ನಿರ್ವಹಣೆಗೆ ಅಗತ್ಯವಿರುವ ಕನಿಷ್ಠ ವಿದ್ಯಾರ್ಹತೆ ಹೊಂದದೇ ನಿರ್ಮಿತಿ ಕೇಂದ್ರದಲ್ಲಿ ನಿಯಮಬಾಹಿರವಾಗಿ ಸುಮಾರು 10 ವರ್ಷ ಕರ್ತವ್ಯ ನಿರ್ವಹಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. 2023ರ ಜುಲೈನಲ್ಲಿ ಕೆಲಸ ಬಿಟ್ಟಿದ್ದಾರೆ.

ಕುಮಾರ ಜಿಲ್ಲಾಧಿಕಾರಿ ಮಂಡ್ಯ
ನಿಗದಿತ ವಿದ್ಯಾರ್ಹತೆ ಇಲ್ಲದಿದ್ದರೂ ನೇಮಕಾತಿ ಮಾಡಿಕೊಂಡಿರುವುದು ನಿಯಮಬಾಹಿರ. ಆದ್ದರಿಂದ ಈ ಮೂವರನ್ನು ಸೈಟ್‌ ಎಂಜಿನಿಯರ್‌ ಹುದ್ದೆಯಿಂದ ಕೈಬಿಡುವ ಬಗ್ಗೆ ಕ್ರಮವಹಿಸಬಹುದು
– ಎಡಿಸಿ ನೇತೃತ್ವದ ತನಿಖಾ ಸಮಿತಿ
ತನಿಖಾ ಸಮಿತಿ ವರದಿ ಸಲ್ಲಿಕೆಯಾಗಿದೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ಸಭೆಯ ಅನುಮೋದನೆ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು
– ಕುಮಾರ ಜಿಲ್ಲಾಧಿಕಾರಿ ಮತ್ತು ಅಧ್ಯಕ್ಷರು ಜಿಲ್ಲಾ ನಿರ್ಮಿತಿ ಕೇಂದ್ರ

ದಕ್ಷ ವಿವಿಗೆ ಮಾನ್ಯತೆ ಇಲ್ಲ!

ಬಿ.ಎಲ್‌. ವೇಣುಗೋಪಾಲ್‌ ಅವರು 2023ರಿಂದ ಸೈಟ್‌ ಎಂಜಿನಿಯರ್‌ ಆಗಿ ನೇಮಕಗೊಂಡಿದ್ದು ಕಾರ್ನಿಕ್‌ ಸಂಸ್ಥೆಗೆ ಸಲ್ಲಿಸಿರುವ ಮಾಹಿತಿಯಲ್ಲಿ ‘ಡಿಪ್ಲೊಮಾ ಅಂಡ್‌ ಬಿ.ಟೆಕ್‌ ಇನ್‌ ಸಿವಿಲ್‌’ ಎಂದು ನಮೂದಾಗಿದೆ. ಇವರು 2012ರಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಪೂರ್ಣಗೊಳಿಸಿದ್ದು ಸದರಿ ಪ್ರಮಾಣಪತ್ರವನ್ನು ತಾಂತ್ರಿಕ ಪರೀಕ್ಷಾ ಮಂಡಳಿಯಿಂದ 2025ರ ಮಾರ್ಚ್‌ನಲ್ಲಿ ಪಡೆದಿರುವುದು ಕಂಡುಬಂದಿದೆ.  ದಕ್ಷ ವಿಶ್ವವಿದ್ಯಾಲಯದಿಂದ 2015ರಿಂದ 2018ರ ಅವಧಿಯಲ್ಲಿ  ಬಿ.ಟೆಕ್‌– ಸಿವಿಲ್‌ ಎಂಜಿನಿಯರಿಂಗ್‌ ಪ್ರೋಗ್ರಾಂನಲ್ಲಿ ಉತ್ತೀರ್ಣರಾಗಿರುವ ಪ್ರಮಾಣಪತ್ರ ಪಡೆದಿದ್ದಾರೆ. ಈ ಪ್ರಮಾಣಪತ್ರದ ನೈಜತೆ ಪರಿಶೀಲಿಸಲು 2023ರಲ್ಲಿ ಆಲ್‌ ಇಂಡಿಯಾ ಕೌನ್ಸಿಲ್‌ ಫಾರ್‌ ಟೆಕ್ನಿಕಲ್‌ ಎಜುಕೇಷನ್‌ಗೆ ಪ‍ತ್ರ ಬರೆಯಲಾಗಿತ್ತು. 2024ರ ಜನವರಿಯಲ್ಲಿ ಯುಜಿಸಿ ಅಧೀನ ಕಾರ್ಯದರ್ಶಿ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಪತ್ರ ಬರೆದು ‘ಯುಜಿಸಿ ಕಾಯ್ದೆ 1956ರ ಸೆಕ್ಷನ್ 2 (ಎಫ್) ಅಡಿಯಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾಲಯಗಳ ಯುಜಿಸಿ ಪಟ್ಟಿಯಲ್ಲಿ ದಕ್ಷ ವಿಶ್ವವಿದ್ಯಾಲಯ ವೃತ್ತಿಪರ ಮತ್ತು ಜೀವನ ಕೌಶಲ ಜಾರ್ಖಂಡ್ ಎಂಬ ಹೆಸರು ಇಲ್ಲ ಮತ್ತು ಯುಜಿಸಿ ನಿರ್ದಿಷ್ಟ ಪದವಿಗಳನ್ನು ನೀಡುವ ಅಧಿಕಾರವೂ ಇಲ್ಲ’ ಎಂದು ತಿಳಿಸಿದ್ದಾರೆ.

ಅನುಮೋದನೆಯಿಲ್ಲದೆ ನೇಮಕಾತಿ

ಹೆಚ್ಚುವರಿ ಹುದ್ದೆಗಳ ಅಗತ್ಯ ಅಥವಾ ಖಾಲಿ ಹುದ್ದೆಗಳ ನೇಮಕಾತಿಗಾಗಿ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಂಡಿಸಬೇಕು. ಅನುಮೋದನೆ ಪಡೆದ ನಂತರ ವಿದ್ಯಾರ್ಹತೆ ವೇತನ ಅನುಭವ ಹಾಗೂ ಷರತ್ತುಗಳನ್ನು ಒಳಗೊಂಡ ಪ್ರಕಟಣೆ ಅಥವಾ ಅಧಿಸೂಚನೆ ಹೊರಡಿಸಬೇಕು. ಸ್ವೀಕೃತಗೊಂಡ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಸಭೆಯಲ್ಲಿ ಮಂಡಿಸಬೇಕಿತ್ತು. ಆದರೆ ಸಭೆಯ ಅನುಮೋದನೆ ಪಡೆದು ನೇಮಕಾತಿ ಪ್ರಕ್ರಿಯೆ ನಡೆಸಿಲ್ಲ ಎಂದು ತನಿಖಾ ಸಮಿತಿ ವರದಿಯಲ್ಲಿ ತಿಳಿಸಲಾಗಿದೆ. ವಿವಾದಿತ ನೌಕರರನ್ನು ಸೈಟ್‌ ಎಂಜಿನಿಯರ್‌ ಹುದ್ದೆಗೆ ನಿಯಮಬಾಹಿರವಾಗಿ ನೇಮಕ ಮಾಡಿಕೊಳ್ಳಲು ಹಿಂದಿನ ಯೋಜನಾ ವ್ಯವಸ್ಥಾಪಕ ನರೇಶ್‌ ಅವರೇ ನೇರ ಕಾರಣಕರ್ತರಾಗಿರುತ್ತಾರೆ ಎಂದು ತನಿಖಾ ತಂಡ ಬೊಟ್ಟು ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.