ADVERTISEMENT

ಪರೀಕ್ಷೆ ಬರೆಯಲು 16,057 ವಿದ್ಯಾರ್ಥಿಗಳು ಸಿದ್ಧ

ದ್ವಿತೀಯ ಪಿಯುಸಿ ಪರೀಕ್ಷೆ, ಜಿಲ್ಲೆಯಾದ್ಯಂತ 27 ಪರೀಕ್ಷಾ ಕೇಂದ್ರಗಳು, ಕಟ್ಟುನಿಟ್ಟಿನ ಕ್ರಮ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 13:08 IST
Last Updated 21 ಏಪ್ರಿಲ್ 2022, 13:08 IST

ಮಂಡ್ಯ: ದ್ವಿತೀಯ ಪಿಯು ಪರೀಕ್ಷೆ ಶುಕ್ರವಾರ ಆರಂಭಗೊಳ್ಳಲಿದ್ದು ಜಿಲ್ಲೆಯಾದ್ಯಂತ 16,057 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. 27 ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಮೊದಲ ದಿನ ‘ವ್ಯವಹಾರ ಅಧ್ಯಯನ’ ವಿಷಯದ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳು ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಾದ್ಯಂತ 7,831 ಗಂಡುಮಕ್ಕಳು, 8 226 ಹೆಣ್ಣು ಮಕ್ಕಳು ಪರೀಕ್ಷೆ ಎದುರಿಸಲಿದ್ದಾರೆ.

ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಒಬ್ಬರು ಮುಖ್ಯ ಅಧೀಕ್ಷಕರು ಕರ್ತವ್ಯ ನಿರ್ವಹಿಸಲಿದ್ದಾರೆ. ಅವರ ಜೊತೆಗೆ ಸಹ ಮುಖ್ಯ ಅಧೀಕ್ಷಕರು ಪರೀಕ್ಷೆಯ ನೇತೃತ್ವ ವಹಿಸಿದ್ದಾರೆ. ಜಿಲ್ಲಾಧಿಕಾರಿಗಳು ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ವೀಕ್ಷಕರನ್ನು ನೇಮಕ ಮಾಡಿದ್ದಾರೆ. ಈ ಬಾರಿ ವಿಶೇಷವಾಗಿ ವಿಶೇಷ ವಿಚಕ್ಷಣ ದಳದ ಸಿಬ್ಬಂದಿ ಪರೀಕ್ಷಾ ಕೇಂದ್ರಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ.

ADVERTISEMENT

ಎಲ್ಲಾ ಕೇಂದ್ರಗಳಲ್ಲೂ ಸ್ಥಿರ ಪರಿಶೀಲನಾ ಸಿಬ್ಬಂದಿ (ಸಿಟ್ಟಿಂಗ್‌ ಸ್ಕ್ವ್ಯಾಡ್‌), ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ತಂಡ ಪರೀಕ್ಷಾ ಅಕ್ರಮಗಳ ಪರಿಶೀಲನೆ ನಡೆಸಲಿದ್ದಾರೆ. ಈ ಕುರಿತಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿ, ಪರಿಶೀಲನಾ ತಂಡದ ಸದಸ್ಯರಿಗೆ ತರಬೇತಿ ನೀಡಲಾಗಿದೆ.

ಜಿಲ್ಲಾ ಖಜಾನೆಯಲ್ಲಿ ಸ್ಟ್ರಾಂಗ್‌ರೂಂ ಸ್ಥಾಪನೆ ಮಾಡಲಾಗಿದ್ದು ಪ್ರಶ್ನೆಪತ್ರಿಕೆಗಳಿಗೆ ಕಟ್ಟುನಿಟ್ಟಿನ ಭದ್ರತೆ ವಹಿಸಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳು ವಿಶೇಷ ಭದ್ರತೆ ವಹಿಸಿದ್ದಾರೆ. 9 ಮಾರ್ಗಗಳಲ್ಲಿ ವಾಹನಗಳು ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆಗಳನ್ನು ಕೊಂಡೊಯ್ಯಲಿವೆ. ಪ್ರತಿ ಮಾರ್ಗಕ್ಕೂ ಮೂವರ ಸಮಿತಿ ರಚನೆ ಮಾಡಲಾಗಿದೆ.

ಹಿರಿಯ ಪ್ರಾಚಾರ್ಯರು, ತಹಶೀಲ್ದಾರ್‌, ಬಿಇಒ ನಿಗಾದಲ್ಲಿ ಪ್ರಶ್ನೆಪತ್ರಿಕೆ ಹಾಗೂ ಅಗತ್ಯ ವಸ್ತುಗಳು ಪರೀಕ್ಷಾ ಕೇಂದ್ರ ತಲುಪಲಿವೆ. ಪ್ರತಿ ವಾಹನಕ್ಕೂ ಜಿಪಿಎಸ್‌ ವ್ಯವಸ್ಥೆ ಅಳವಡಿಸಲಾಗಿದ್ದು ಅವುಗಳ ಮೇಲೆ ನಿಗಾ ಇಡಲಾಗಿದೆ. ಗನ್‌ಮ್ಯಾನ್‌ ಸೇರಿ ಭದ್ರತಾ ಸಿಬ್ಬಂದಿಯ ಕಣ್ಗಾವಲಿನಲ್ಲಿ ವಾಹನಗಳು ಸಂಚಾರ ಮಾಡಲಿವೆ.

ಸಿ.ಸಿ.ಟಿ.ವಿ. ಕ್ಯಾಮೆರಾ ಕಣ್ಗಾವಲು: ಪರೀಕ್ಷೆ ನಡೆಯುವ ಕೇಂದ್ರಗಳ ಕಚೇರಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಎಲೆಕ್ಟ್ರಾನಿಕ್‌ ಉಪಕರಣ ಕೊಂಡೊಯ್ಯದಂತೆ ನಿಗಾ ವಹಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್‌ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಎಸ್‌.ಅಶ್ವತಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಎಲೆಕ್ಟ್ರಾನಿಕ್ ಉಪಕರಣ, ಸ್ಮಾರ್ಟ್‌ ವಾಚ್ ಹಾಗೂ ಮೊಬೈಲ್ ಫೋನ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರಶ್ನೆಗಳನ್ನು ಹಂಚಿಕೊಳ್ಳುವುದು ಕಂಡು ಬಂದಲ್ಲಿ ಅವರನ್ನು ಬಂಧಿಸಲು ಕ್ರಮ ವಹಿಸಲಾಗಿದೆ. ಪ್ರತಿಯೊಂದು ಕೇಂದ್ರಗಳಲ್ಲೂ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.

ಸರ್ಕಾರದ ನಿರ್ದೇಶನದಂತೆ ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್‌ ಕಾರ್ಯಸೂಚಿಗಳನ್ನು ಅನುಸರಿಸಲಾಗುತ್ತಿದೆ. ಕೋವಿಡ್‌ ಲಕ್ಷಣವಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಪರೀಕ್ಷೆ ಬರೆಸಲು ಪ್ರತಿ ಕೇಂದ್ರದಲ್ಲೂ ತಲಾ 1 ಕೊಠಡಿಯನ್ನು ಮೀಸಲಿಡಲಾಗಿದೆ. ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರೆಡ್‌ಕ್ರಾಸ್‌ ಸಂಸ್ಥೆ ವತಿಯಿಂದ 30 ಸಾವಿರ ಮಾಸ್ಕ್‌ಗಳನ್ನು ವಿತರಣೆ ಮಾಡಿದ್ದಾರೆ.

*****

ಹಿಜಾಬ್‌ಗೆ ಅವಕಾಶ ಇಲ್ಲ

‘ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ನಿರ್ದೇಶನದಂತೆ ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ. ಕೇಂದ್ರಗಳ ಹೊರಗೆ ಹಿಜಾಬ್‌ ತೆಗೆದು ಪರೀಕ್ಷೆಗೆ ಹಾಜರಾಗಬೇಕು. ಈ ಕುರಿತು ಪರಿಶೀಲನೆ ನಡೆಸಲು ಸಿಬ್ಬಂದಿ ನೇಮಕ ಮಾಡಲಾಗಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶನ ಎಸ್‌.ಉಮೇಶ್‌ ತಿಳಿಸಿದರು.

‘ನಮ್ಮ ಜಿಲ್ಲೆಯಲ್ಲಿ ಹಿಜಾಬ್‌ ಸಮಸ್ಯೆ ಇಲ್ಲ, ಹೀಗಾಗಿ ಪರೀಕ್ಷೆಗೆ ಹಿಜಾಬ್‌ ಯಾವುದೇ ಅಡ್ಡಿಯಾಗುವುದಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಸಿಬ್ಬಂದಿ ಪರಿಶೀಲನೆ ನಡೆಸಲಿದ್ದಾರೆ. ಪರೀಕ್ಷೆ ಸುಸೂತ್ರವಾಗಿ ನಡೆಯಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.