ಮಂಡ್ಯ: ನೃತ್ಯ, ನಾಟಕ, ಫ್ಯಾಷನ್ ಷೋಗಳಲ್ಲಿ ಕನ್ನಡ ಸಂಸ್ಕೃತಿ, ಪರಂಪರೆಗಳ ಸುವರ್ಣ ಪ್ರದರ್ಶನ. ಪ್ರೇಕ್ಷಕ ಮನಸ್ಸುಗಳಿಗೆ ಆಳವಾದ ಭಾವನಾತ್ಮಕ ಸಂಪರ್ಕ ಉಂಟುಮಾಡಿದ ರಸಕ್ಷಣಗಳಿಗೆ ಅಮೇರಿಕಾದಲ್ಲಿ ಒಕ್ಕಲಿಗರ ಪರಿಷತ್ತಿನ ಸಮಾವೇಶ ಸಾಕ್ಷಿಯಾಯಿತು.
ಒಕ್ಕಲಿಗರ ಪರಿಷತ್ತಿನ 18ನೇ ಸಮಾವೇಶ ಹಾಗೂ ವಿಶ್ವ ಒಕ್ಕಲಿಗರ ಸಮ್ಮೇಳನ ಈಚೆಗೆ ಕ್ಯಾಲಿಫೋರ್ನಿಯಾದ ಸಾನ್ಹೋಸೆ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು. ಈ ಆಚರಣೆಯ ಭಾಗವಾಗಿ ಒಕ್ಕಲಿಗರ ಪರಿಷತ್ ವತಿಯಿಂದ 1967 ರಿಂದ 2000ನೇ ಇಸವಿಯವರೆಗೆ ಮಂಡ್ಯ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದವರಿಗಾಗಿ ಅಲ್ಯುಮ್ನಿ ಮೀಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಲೇಜಿನಲ್ಲಿ ಓದಿದ ಹಳೆಯ ಗೆಳೆಯರು ಒಂದಾಗಿ ಸೇರಿ ಒಂದೇ ವೇದಿಕೆಯಲ್ಲಿ ಸಂಗಮಗೊಂಡರು. ತಮ್ಮ ಸಾಧನೆಗಳು ಮತ್ತು ಅನುಭವಗಳನ್ನು ಹಂಚಿಕೊಂಡು ಅಮೂಲ್ಯ ನೆನಪುಗಳನ್ನು ಸೃಷ್ಟಿಸಿದರು. ಸಂತಸ, ಸಂಭ್ರಮದಿಂದ ಸಮಯ ಕಳೆದು ಆನಂದಿಸಿದರೆ, ಇನ್ನೂ ಕೆಲವರು ಹಲವು ದಶಕಗಳ ನಂತರ ಸಮಾಗಮಗೊಂಡಿದ್ದ ಸಂದರ್ಭವು ಆನಂದ ಬಾಷ್ಪ ತರಿಸಿ ಮತ್ತಷ್ಟು ಸಂಬಂಧ ಬೆಸೆಯಿತು.
ನಾಗಮಂಗಲ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಸಚಿವರಾದ ಡಾ.ಕೆ.ಸುಧಾಕರ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಸ್.ಟಿ.ಸೋಮಶೇಖರ್, ಸಿ.ಎಸ್.ಪುಟ್ಟರಾಜು, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ರವಿಶಂಕರ್‌ಗೌಡ, ಶ್ರೀಹರ್ಷ, ಹೇಮಂತ್‌ಕುಮಾರ್, ಹರಿಕೃಷ್ಣ, ಎಂ.ಡಿ.ಪಲ್ಲವಿ ಮೊದಲಾದ ಖ್ಯಾತ ನಟರು ಹಾಗೂ ಗಾಯಕರು ಸಂಗೀತ ರಸದೌತಣ ನೀಡಿದರು. ಪ್ರಕೃತಿ ಸ್ವಾಮಿಗೌಡ, ಭಾಗ್ಯ, ಚೇತನ ಕುಮಾರ್, ಸಂಧ್ಯಾ, ಸಿಂಧುಶಿವ, ಸಚಿನ್, ಎ.ಆರ್.ಮಮತಾ, ನಮಿತಾ, ಎಲ್.ಮಹೇಶ್, ಪ್ರವೀಣ್, ಮಾದೇಶ್, ಶಿವಾನಂದ ಅನುಭವದ ನೆನಪು ಬಿಚ್ಚಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.