ADVERTISEMENT

ಮಂಡ್ಯ ಜಿಲ್ಲೆಯಲ್ಲಿ ಅತಿಯಾದ ರಸಗೊಬ್ಬರ ಬಳಕೆ: ವಿ.ಎಸ್‌. ಅಶೋಕ್‌

ರೈತ ದಸರಾದಲ್ಲಿ ಜಿಲ್ಲೆಯ ಪ್ರಗತಿ ಪರ ರೈತರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 4:28 IST
Last Updated 27 ಸೆಪ್ಟೆಂಬರ್ 2025, 4:28 IST
ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿರುವ ದಸರಾ ಉತ್ಸವದ ಪ್ರಧಾನ ವೇದಿಕೆಯಲ್ಲಿ ಶುಕ್ರವಾರ ನಡೆದ ‘ರೈತ ದಸರಾ’ದಲ್ಲಿ ಜಿಲ್ಲೆಯ ಪ್ರಗತಿ ಪರ ರೈತರನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್‌. ಅಶೋಕ್‌ ಅಭಿನಂದಿಸಿದರು
ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿರುವ ದಸರಾ ಉತ್ಸವದ ಪ್ರಧಾನ ವೇದಿಕೆಯಲ್ಲಿ ಶುಕ್ರವಾರ ನಡೆದ ‘ರೈತ ದಸರಾ’ದಲ್ಲಿ ಜಿಲ್ಲೆಯ ಪ್ರಗತಿ ಪರ ರೈತರನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್‌. ಅಶೋಕ್‌ ಅಭಿನಂದಿಸಿದರು   

ಶ್ರೀರಂಗಪಟ್ಟಣ: ‘ಜಿಲ್ಲೆಯ ರೈತರು ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರ ಬಳಸುತ್ತಿರುವುದರಿಂದ ಕೃಷಿ ಭೂಮಿ ಫಲವತ್ತತೆ ಕಳೆದುಕೊಂಡು ಕೃಷಿ ಉತ್ಪನ್ನಗಳ ಇಳುವರಿ ಕೂಡ ಕುಸಿಯುತ್ತಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್‌. ಅಶೋಕ್‌ ಹೇಳಿದರು.

ಪಟ್ಟಣದಲ್ಲಿ ನಡೆಯುತ್ತಿರುವ ದಸರಾ ಉತ್ಸವದ ಪ್ರಧಾನ ವೇದಿಕೆಯಲ್ಲಿ ಶುಕ್ರವಾರ ನಡೆದ ರೈತ ದಸರಾದಲ್ಲಿ ಜಿಲ್ಲೆಯ ಪ್ರಗತಿ ಪರ ರೈತರನ್ನು ಅಭಿನಂದಿಸಿ ಅವರು ಮಾತನಾಡಿದರು.

‘ರೈತರು ಯೂರಿಯಾ ರಸಗೊಬ್ಬರವನ್ನು ಅತಿಯಾಗಿ ಬಳಸುತ್ತಿದ್ದಾರೆ. ಜಿಲ್ಲೆಯಲ್ಲಿ 5 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದ್ದು, 1.70 ಲಕ್ಷ ಮೆಟ್ರಿಕ್ ಟನ್‌ ರಸಗೊಬ್ಬರ ಬಳಕೆಯಾಗಿದೆ. ಇದರಿಂದ ಮಣ್ಣಿನ ಸತ್ವ ಹಾಳಾಗುತ್ತಿದೆ. ಕೃಷಿ ಉತ್ಪನ್ನಗಳ ಗುಣಮಟ್ಟವೂ ಕಡಿಮೆಯಾಗುತ್ತಿದೆ. ಕಳೆದ 15 ವರ್ಷಗಳ ಈಚೆಗೆ ಶೇ 10ರಷ್ಟು ಕೃಷಿ ಉತ್ಪನ್ನ ಕುಸಿದಿದೆ. ರೈತರು ಕೊಟ್ಟಿಗೆ ಗೊಬ್ಬರವನ್ನು ಹೆಚ್ಚು ಬಳಸಬೇಕು. ಪ್ರಸಕ್ತ ವರ್ಷದಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಯೋಜನೆ ಜಾರಿಯಾಗಿದ್ದು, ಮಣ್ಣಿನ ಫಲವತ್ತತೆ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ನೇಸರ ಅಗ್ರಿ ಸಂಸ್ಥೆ ಸಂಸ್ಥಾಪಕಿ ರೇಷ್ಮಾರಾಣಿ ಮಾತನಾಡಿ ‘ರೈತರು ಗ್ಯಾಪ್‌ (ಗ್ಲೋಬಲ್‌ ಅಗ್ರಿಕಲ್ಚರಲ್‌ ಪ್ರಾಕ್ಟೀಸಸ್) ಸಂಸ್ಥೆಯಲ್ಲಿ ತಮ್ಮ ಕೃಷಿ ಉತ್ಪನ್ನಗಳನ್ನು ಪ್ರಾಮಾಣೀಕರಿಸಿದರೆ ಉತ್ತಮ ಬೆಲೆ ಸಿಗದಲಿದೆ’ ಎಂದರು. ‘ರೈತರು ಕೃಷಿಯ ಜತೆಗೆ ಪಶುಪಾಲನೆ ಕೈಗೊಳ್ಳುವುದರಿಂದ ನಿರಂತರ ಆದಾಯ ಪಡೆಯಬಹುದು’ ಎಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಎಚ್.ಎಸ್‌. ಮಧುಸೂದನ್‌ ಹೇಳಿದರು.

ತಹಶೀಲ್ದಾರ್‌ ಚೇತನಾ ಯಾದವ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ, ಕೃಷಿ ಅಧಿಕಾರಿಗಳು ಹಾಗೂ ರೈತ ಉತ್ಪಾದಕ ಕಂಪೆನಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸಾವಯವ ಕೃಷಿ ಪದ್ಧತಿ ಅನುಸರಿಸಿ

ಬೆಲ್ಲದ ನಾಡು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಕಾರಸವಾಡಿ ಮಹದೇವು ಮಾತನಾಡಿ ‘ಬಸರಾಳು ರೈತ ಉತ್ಪಾದಕ ಕಂಪೆನಿ ರೂ.6 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ. ಸಾವಯವ ಪದ್ದತಿಯಲ್ಲಿ ಬೆಳೆದ ಆಹಾರ ಮತ್ತು ವಾಣಿಜ್ಯ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಸಿಗುತ್ತಿದೆ. ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ರೈತರೇ ಮಾರಾಟ ಮಾಡಿದರೆ ಪ್ರೋತ್ಸಾಹ ಧನ ಕೂಡ ಸಿಗಲಿದೆ. ಹಾಗಾಗಿ ರೈತರು ನೈಸರ್ಗಿಕ ಮತ್ತು ಸಾವಯವ ಕೃಷಿ ಪದ್ದತಿ ಅನುಸರಿಸಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.