ADVERTISEMENT

ಮಂಡ್ಯ| ಕಾವೇರಿ ಆರತಿ ಬಗ್ಗೆ ಚರ್ಚೆ: ಸಚಿವರ ಸಭೆಗೆ ಹೋಗದಿರಲು ರೈತ ಮುಖಂಡರ ನಿರ್ಣಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 11:39 IST
Last Updated 24 ಜೂನ್ 2025, 11:39 IST
   

ಮಂಡ್ಯ: ‘ಅಮ್ಯೂಸ್‌ಮೆಂಟ್ ಪಾರ್ಕ್‌ ಮತ್ತು ಕಾವೇರಿ ಆರತಿ ಕಾರ್ಯಕ್ರಮದ ಬಗ್ಗೆ ಚರ್ಚಿಸಲು, ಬೆಂಗಳೂರಿನಲ್ಲಿ ಜೂನ್‌ 25ರಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಕರೆದಿರುವ ರೈತರ ಸಭೆಯಲ್ಲಿ ನಾವು ಭಾಗವಹಿಸುವುದಿಲ್ಲ’ ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಮ್‌ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ನಿರ್ಣಯ ಕೈಗೊಂಡರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಭೆ ನಡೆಸಿ, ‘ಬೆಂಗಳೂರಿನಲ್ಲಿ ಸಭೆ ಆಯೋಜಿಸಿರುವ ಕ್ರಮ ಸಮಂಜಸವಲ್ಲ. ಮಂಡ್ಯದಲ್ಲಿ ನಡೆದ ಸಭೆಯ ನಿರ್ಣಯಕ್ಕೆ ಸರ್ಕಾರ ಬದ್ಧವಾಗಿರಬೇಕು ಎಂದು ರೈತ, ದಲಿತ, ಕಾರ್ಮಿಕ, ಮಹಿಳಾ, ಕನ್ನಡ ಪರ, ಪ್ರಗತಿಪರ ಸಂಘಟನೆಗಳು ಒತ್ತಾಯಿಸಿವೆ.

ಮಂಡ್ಯದಲ್ಲಿ ಜೂನ್‌ 6ರಂದು ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು, ಆ ಸಭೆಯಲ್ಲಿ ಈ ಎರಡೂ ಯೋಜನೆಗಳಿಂದ ಆಗುವ ತೊಂದರೆಗಳು ಹಾಗೂ ಅಪಾಯಗಳನ್ನು ಕುರಿತು ರೈತರು, ಪ್ರಗತಿಪರ ಸಂಘಟನೆಗಳು, ನಾಗರಿಕರು ವಿವರಿಸಿ, ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದರು.

ADVERTISEMENT

ಇದಕ್ಕೆ ಸ್ಪಂದಿಸಿದ ಸಚಿವ ಚಲುವರಾಯಸ್ವಾಮಿ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಗಮನಕ್ಕೆ ತಂದು ಅವರ ಅಭಿಪ್ರಾಯವನ್ನು ರೈತರಿಗೆ ತಿಳಿಸುವುದಾಗಿ ಹೇಳಿದ್ದರು. ಈಗ ಮತ್ತೆ ಸಭೆ ಕರೆದಿರುವುದು ಸರಿಯಲ್ಲ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಸಂಘದ ಮುಖಂಡರಾದ ಇಂಡವಾಳು ಚಂದ್ರಶೇಖರ್, ಬೋರಯ್ಯ, ಕೆ.ಎಸ್. ಸುಧೀರ್ ಕುಮಾರ್, ಕರುನಾಡ ಸೇವಕ ಸಂಘಟನೆಯ ಎಂ.ಬಿ. ನಾಗಣ್ಣಗೌಡ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಡಿ. ಜಯರಾಮ್, ರೈತ ಸಂಘ ಮುದ್ದೇಗೌಡ ಮುಂತಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.