ADVERTISEMENT

ಮಂಡ್ಯ: ಮಕ್ಕಳಂತೆ ಬೆಳೆಸಿದ್ದ ಹೂವಿನ ಗಿಡಕ್ಕೆ ಕುಡುಗೋಲು!

ಹೂವು ಕೇಳುವವರೇ ಇಲ್ಲ, 1,120 ಎಕರೆ ಭೂಮಿಯಲ್ಲಿ ಬೆಳೆ ಹಾನಿ, ಕಣ್ಣೀರು ಹಾಕುತ್ತಿರುವ ಬೆಳೆಗಾರ

ಎಂ.ಎನ್.ಯೋಗೇಶ್‌
Published 14 ಏಪ್ರಿಲ್ 2020, 19:30 IST
Last Updated 14 ಏಪ್ರಿಲ್ 2020, 19:30 IST
ಪಾಂಡವಪುರ ತಾಲ್ಲೂಕು ಮೇನಾಗರ ಗ್ರಾಮದ ರೈತರು ಸೇವಂತಿಗೆ ಹೂವಿನ ಗಿಡ ಕತ್ತರಿಸುತ್ತಿರುವುದು
ಪಾಂಡವಪುರ ತಾಲ್ಲೂಕು ಮೇನಾಗರ ಗ್ರಾಮದ ರೈತರು ಸೇವಂತಿಗೆ ಹೂವಿನ ಗಿಡ ಕತ್ತರಿಸುತ್ತಿರುವುದು   

ಮಂಡ್ಯ: ಜಿಲ್ಲೆಯ ಹೂವಿನ ಹಳ್ಳಿಗಳಲ್ಲಿ ಈಗ ಸೇವಂತಿಗೆ, ಗುಲಾಬಿ, ಮಲ್ಲಿಗೆಯ ಪರಿಮಳವಿಲ್ಲ. ವಿವಾಹ, ಹಬ್ಬ, ಜಾತ್ರೆ, ರಥೋತ್ಸವಗಳಿಗೆ ಹೂವು ಪೂರೈಸುತ್ತಿದ್ದ ಬೆಳಗಾರರ ಕೈಗಳಿಗೆ ಕೆಸಲವಿಲ್ಲ. ಹೂವು ಬಿಡಿಸಬೇಕಾದ ಕೈಯಲ್ಲಿ ಗಿಡಗಳನ್ನೇ ಕತ್ತರಿಸುವಾಗ ರೈತರ ಕಣ್ಣಲ್ಲಿ ಜಿನುಗುವ ನೀರು ಒರೆಸುವವರು ಯಾರೂ ಇಲ್ಲ.

ಕೊರೊನಾ ಸೋಂಕು ಹೂವು ಬೆಳೆಗಾರರಿಗೆ ತಂದಿಟ್ಟಿರುವ ಶೋಚನೀಯ ಸ್ಥಿತಿ ಇದು. ಯುಗಾದಿ ಮುಗಿದು ಮೇಲುಕೋಟೆ ಚೆಲುವರಾಯಸ್ವಾಮಿ ವೈರಮುಡಿ, ನಂಜನಗೂಡು ನಂಜುಂಡೇಶ್ವರನ ರಥೋತ್ಸವ ಆರಂಭವಾಗುವ ಹೊತ್ತಿಗೆ ರಾಶಿರಾಶಿ ಹೂವು ಬಿಡಿಸಿ ದೇವಾಲಯಗಳಿಗೆ ಕಳುಹಿಸಬೇಕಾಗಿತ್ತು. ಪ್ರತಿ ಗ್ರಾಮದ ಮನೆಯ ಜಗುಲಿಯ ಮೇಲೆ, ಹಜಾರದಲ್ಲಿ ಹೂವಿನ ರಾಶಿಯೇ ತುಂಬಿರುತ್ತಿತ್ತು. ನೂಲಿನೊಂದಿಗೆ ಹೂವಿನ ದಳ ಬೆಸೆಯುವ ಕೈಗಳಿಗೂ ಕೆಲಸ ಸಿಗುತ್ತಿತ್ತು.

ಆದರೆ, ಕೊರೊನಾ ಸೋಂಕಿನ ಕಾರಣದಿಂದಾಗಿ ಮದುವೆ, ಉತ್ಸವ, ಜಾತ್ರೆಗಳೆಲ್ಲವೂ ಸ್ಥಗಿತಗೊಂಡಿದೆ. ದೇವಾಲಯಗಳ ಬಾಗಿಲನ್ನೂ ಮುಚ್ಚಲಾಗಿದೆ. ಹೂವು ಕೇಳುವವರೇ ಇಲ್ಲವಾಗಿದ್ದಾರೆ. ಪಾಂಡವಪುರ ತಾಲ್ಲೂಕಿನ ಮೇನಾಗರ ಗ್ರಾಮದಲ್ಲಿ ಅತೀ ಹೆಚ್ಚು ಹೂವು ಬೆಳೆಯುತ್ತಾರೆ. ಇದು ಹೂವಿನ ಊರು ಎಂದೇ ಪ್ರಸಿದ್ಧಿ ಪಡೆದಿದೆ.

ADVERTISEMENT

ಜೊತೆಗೆ ಹೊಸ ಕನ್ನಂಬಾಡಿ, ಬನ್ನಂಗಾಡಿ, ಕೆಂಪೇಗೌಡನಕೊಪ್ಪಲು, ಕೆ.ಆರ್‌.ಪೇಟೆ ತಾಲ್ಲೂಕಿನ ಬೂಕನಕೆರೆ ಸುತ್ತಮುತ್ತಲ ಹಳ್ಳಿಗಳು, ನಾಗಮಂಗಲ ತಾಲ್ಲೂಕಿನ ಗ್ರಾಮಗಳಲ್ಲಿ ಈಗ ಅಪಾರ ಪ್ರಮಾಣದ ಹೂವಿನ ಬೆಳೆ ನಾಶ ಹೊಂದಿದೆ. ಮೂರು ತಿಂಗಳುಗಳಿಂದ ಕಷ್ಟಪಟ್ಟು ಬೆಳದ ಹೂಗಿಡಗಳನ್ನು ಕತ್ತರಿಸಿ ಹಾಕುತ್ತಿದ್ದಾರೆ. ಕೆಲವರು ಗಿಡಗಳನ್ನು ಹೊಲದಲ್ಲೇ ಕೊಳೆಸುತ್ತಿದ್ದಾರೆ.

ಮದುವೆ, ಹಬ್ಬಗಳ ವೇಳೆಗೆ ಸರಿಯಾಗಿ ಫಸಲು ಬರುವಂತೆ ರೈತರು ಹೂವಿನ ಕೃಷಿ ಮಾಡುತ್ತಾರೆ. ಕಳೆದ ಜನವರಿ– ಫೆಬ್ರುವರಿಯಲ್ಲಿ ನೆಟ್ಟ ಸೇವಂತಿಗೆ (ಪೇಪರ್‌ ಯೆಲ್ಲೊ) ಯುಗಾದಿಗೆ ಕಟಾವಿಗೆ ಬಂದಿತ್ತು. ಯುಗಾದಿ ಹಬ್ಬದಲ್ಲಿ ಅಪಾರ ಬೇಡಿಕೆ ಇದ್ದ ಕಾರಣ ರೈತರು ಕೊಯ್ಲು ಆರಂಭಿಸಿ ಮಾರುಕಟ್ಟೆಗಳಿಗೆ ತರಲಾರಂಭಿಸಿದ್ದರು. ಆದರೆ ಹಬ್ಬದ ಹಿಂದಿನ ದಿನವೇ ಲಾಕ್‌ಡೌನ್‌ ಘೋಷಣೆಯಾದ ಕಾರಣ ಹೂವು ಮಾರಾಟವಾಗಲಿಲ್ಲ. ₹ 5ಕ್ಕೆ ಮಾರು ಹೂವು ಮಾರಾಟ ಮಾಡಿದರು. ಹೂವು ಕಟ್ಟಿಸಿದ ಹಣವೂ ರೈತರಿಗೆ ಬರಲಿಲ್ಲ. ಕೆಲವರಂತೂ ಮಾರುಕಟ್ಟೆಯಲ್ಲೇ ಹೂವು ಚೆಲ್ಲಿ ಹೋದರು.

ವಿವಿಧೆಡೆ ಸರಬರಾಜು: ಜಿಲ್ಲೆಯಲ್ಲಿ ಬೆಳೆಯುವ ಉತ್ತಮ ಗುಣಮಟ್ಟದ ಸೇವಂತಿಗೆ ಹೂವು ಬೆಂಗಳೂರು, ಮೈಸೂರು, ರಾಮನಗರ, ತುಮಕೂರುವರೆಗೂ ಸರಬರಾಜಾಗುತ್ತದೆ. ತಮಿಳುನಾಡಿನ ಕೃಷ್ಣಗಿರಿ, ಹೊಸೂರಿಗೆ ತೆರಳಿ ರೈತರು ಹೂವಿನ ಸಸಿ ತಂದು ನಾಟಿ ಮಾಡುತ್ತಾರೆ. ಕೆಲವರು ಸ್ಥಳೀಯವಾಗಿ ಬೆಳೆಸಿದ ಸಸಿಗಳನ್ನೂ ನಾಟಿ ಮಾಡುತ್ತಾರೆ. ಕೃಷ್ಣಗಿರಿಯ ಸಸಿ ಉತ್ತಮ ಇಳುವರಿ ಬರುವ ಕಾರಣ ಅಲ್ಲಿಯ ಸಸಿಯನ್ನೇ ಹೆಚ್ಚಿನವರು ನಾಟಿ ಮಾಡುತ್ತಾರೆ.

‘ಹೂವಿನ ಕೃಷಿ ಈಗ ದುಬಾರಿಯಗಿದೆ. ಪ್ಲಾಸ್ಟಿಕ್‌ ಹೊದಿಕೆ ಹಾಕಿ (ಮಂಚಿಂಗ್‌) ನಾಟಿ ಮಾಡಬೇಕು. ಮೂರು ತಿಂಗಳವರೆಗೆ ನಿಯಮಿತವಾಗಿ ನೀರು, ರಸಗೊಬ್ಬರ, ಕೀಟನಾಶಕ ಸಿಂಪಡಿಸಿ ಪೋಷಣೆ ಮಾಡುತ್ತಾರೆ. ಎಕರೆಗೆ ₹ 80 ಸಾವಿರದಿಂದ ₹ 1 ಲಕ್ಷದವರೆಗೆ ಖರ್ಚು ಬರುತ್ತದೆ. ಸಾಲ ಮಾಡಿ ಖರ್ಚು ಮಾಡಿ ಬೆಳೆದ ಹೂವು ಕೃಷಿ ಈ ಬಾರಿ ನಮ್ಮ ಕೈಹಿಡಿಯಲಿಲ್ಲ. ಮುಂದೇನು ಮಾಡಬೇಕು ಎಂದು ದಿಕ್ಕೇ ತೋಚುತ್ತಿಲ್ಲ’ ಎಂದು ಮೇನಾಗರ ಗ್ರಾಮದ ಹೂವಿನ ಬೆಳೆಗಾರ ಶಿವರಾಜ್‌ ಹೇಳಿದರು.

ಮುಂದಿನ ಬೆಳೆಯೂ ಇಲ್ಲ: ಏಪ್ರಿಲ್‌ ವೇಳೆಗೆ ನಾಟಿ ಮಾಡಿದ ಹೂವು ವರಲಕ್ಷ್ಮಿ ಹಬ್ಬದ ಹೊತ್ತಿಗೆ ಕಟಾವಿಗೆ ಬರುತ್ತದೆ. ಈ ವೇಳೆಗಾಗಲೇ ರೈತರು ಹೊಲ ಸಿದ್ಧಗೊಳಿಸಬೇಕಾಗಿತ್ತು. ಆದರೆ ಬಹುಭಾಗ ಕಟಾವು ಆಗದ ಕಾರಣ ಹೊಲ ಸಿದ್ಧಗೊಂಡಿಲ್ಲ. ಈಗಾಗಿ ಮುಂದಿನ ಫಸಲೂ ಕೂಡ ನಷ್ಟವಾಗುವ ಭೀತಿ ರೈತರಲ್ಲಿ ಇದೆ.

‘ಕೊರೊನಾ ಹಾವಳಿಯಲ್ಲಿ ತಮಿಳುನಾಡಿಗೆ ತೆರಳಿ ಸಸಿ ತರುವ ಪರಿಸ್ಥಿತಿ ಇಲ್ಲ. ಎರಡು ಬೆಳೆ ಹೋದರೆ ನಾವು ಸಾಲಗಾರರಾಗುತ್ತೇವೆ’ ಬೆಳೆಗಾರ ಮಲ್ಲೇಗೌಡ ಆತಂಕ ವ್ಯಕ್ತಪಡಿಸಿದರು.

₹ 26 ಕೋಟಿ ನಷ್ಟ

‘ಜಿಲ್ಲೆಯ ವಿವಿಧೆಡೆ 1,120 ಎಕರೆ ಭೂಮಿಯಲ್ಲಿ ಹೂವಿನ ಬೆಳೆ ನಾಶವಾಗಿದೆ. ರೈತರು ₹ 26 ಕೋಟಿ ನಷ್ಟ ಅನುಭವಿಸಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದು ಬೆಳೆಗಾರರಿಗೆ ಪರಿಹಾರ ನೀಡುವಂತೆ ಕೋರಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ.ಎಸ್‌.ರಾಜು ಹೇಳಿದರು.

ಈಡೇರದ ಶೈತ್ಯಾಗಾರ ಬೇಡಿಕೆ

ಕೆ.ಆರ್‌.ಪೇಟೆ ತಾಲ್ಲೂಕು ಬಲ್ಲೇನಹಳ್ಳಿ ಗ್ರಾಮದಲ್ಲಿ ಹೂವಿಗಾಗಿಯೇ ಪತ್ರ್ಯೇಕ ಮಾರುಕಟ್ಟೆ ರೂಪಿಸಲಾಗಿದೆ. ಎಪಿಎಂಸಿ ವತಿಯಿಂದ 6 ಎಕರೆ ಜಾಗ ಮೀಸಲಿಡಲಾಗಿದೆ. ಬೆಲೆ ಕುಸಿತ ಸಂದರ್ಭದಲ್ಲಿ ಹೂವು ಸಂಗ್ರಹಿಸುವುದಕ್ಕಾಗಿ ಶೈತ್ಯಾಗಾರ ನಿರ್ಮಿಸಬೇಕು ಎಂದು ದಶಕದಿಂದಲೂ ಬೆಳೆಗಾರರು ಒತ್ತಾಯಿಸುತ್ತಿದ್ದಾರೆ. ಆದರೆ ರೈತರ ಬೇಡಿಕೆ ಈಡೇರಿಲ್ಲ. ಈಗಿನ ಕೊರೊನಾ ಸೋಂಕಿನ ಪರಿಸ್ಥಿತಿಯಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ಹೂವಿನ ಇರುತ್ತಿದ್ದರೆ ಬೆಳೆ ರಕ್ಷಣೆ ಮಾಡಬಹುದಾಗಿತ್ತು ಎಂದು ರೈತ ಮುಖಂಡರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.