ADVERTISEMENT

ಇಂಡುವಾಳು ಗ್ರಾಮ: 1881 ‘ಇ–ಖಾತಾ’ ನಿಯಮಬಾಹಿರ!

ಇಂಡುವಾಳು ಗ್ರಾಮ ಪಂಚಾಯಿತಿಯ ಕಡತಗಳ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು

ಸಿದ್ದು ಆರ್.ಜಿ.ಹಳ್ಳಿ
Published 28 ಜನವರಿ 2026, 6:14 IST
Last Updated 28 ಜನವರಿ 2026, 6:14 IST
ಮಂಡ್ಯ ತಾಲ್ಲೂಕಿನ ಇಂಡುವಾಳು ಗ್ರಾಮ ಪಂಚಾಯಿತಿ ಕಚೇರಿಯ ಹೊರನೋಟ 
ಮಂಡ್ಯ ತಾಲ್ಲೂಕಿನ ಇಂಡುವಾಳು ಗ್ರಾಮ ಪಂಚಾಯಿತಿ ಕಚೇರಿಯ ಹೊರನೋಟ    

ಮಂಡ್ಯ: ತಾಲ್ಲೂಕಿನ ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ 1281 ಇ–ಖಾತಾ (ಇ–ಸ್ವತ್ತು) ಕಡತಗಳು ನಾಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, 1881 ಇ–ಖಾತಾಗಳನ್ನು ನಿಯಮಬಾಹಿರವಾಗಿ ಮಾಡಿರುವುದು ಬೆಳಕಿಗೆ ಬಂದಿದೆ. 

2021–2025ರ ಅವಧಿಯಲ್ಲಿ ಸೃಷ್ಟಿಸಿದ 1929 ಇ–ಖಾತಾ ದಾಖಲೆಗಳಲ್ಲಿ ಕೇವಲ 48 ಮಾತ್ರ (ಶೇ 3ರಷ್ಟು) ನಿಯಮಬದ್ಧವಾಗಿವೆ. ಉಳಿದ 1881 ಇ–ಖಾತಾಗಳು ಅಕ್ರಮ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಮಂಡ್ಯ ತಹಶೀಲ್ದಾರ್‌ ಅವರು ಲೋಕಾಯುಕ್ತಕ್ಕೆ ಸಲ್ಲಿಸಿದ ವರದಿಯಲ್ಲೇ ಈ ಮಾಹಿತಿ ಬಹಿರಂಗಗೊಂಡಿದೆ.

ಇದಕ್ಕೂ ಮುನ್ನ, ಮಂಡ್ಯ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರ್‌ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರು (ಎ.ಡಿ.ಎಲ್‌.ಆರ್‌) ಅವರು ಲೋಕಾಯುಕ್ತಕ್ಕೆ ನವೆಂಬರ್‌ನಲ್ಲಿ ಸಲ್ಲಿಸಿದ ವರದಿಯಲ್ಲೂ 648 ಇ–ಖಾತಾಗಳಲ್ಲಿ 617 ಇ–ಖಾತಾಗಳು ನಿಯಮಬಾಹಿರವಾಗಿವೆ ಎಂಬ ಅಂಶವಿತ್ತು. 

ADVERTISEMENT

ಏನಿದು ಪ್ರಕರಣ:

ಇಂಡುವಾಳು ಗ್ರಾಮ ಪಂಚಾಯಿತಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮೇ ತಿಂಗಳಲ್ಲಿ ಭೇಟಿ ನೀಡಿ, ದಾಖಲೆ ಪರಿಶೀಲಿಸಿದಾಗ ಕಡತಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಸ್ವಯಂಪ್ರೇರಿತ ದೂರು ದಾಖಲಾಗಿತ್ತು. 

ಉಪಲೋಕಾಯುಕ್ತರ ಆದೇಶದಂತೆ, 1–4–2021ರಿಂದ 25–5–2025ರವರೆಗೆ ವಿತರಿಸಿರುವ ಒಟ್ಟು 1929 ಇ–ಸ್ವತ್ತು ಕಡತಗಳನ್ನು ಪರಿಶೀಲಿಸಿ, ವರದಿ ನೀಡಲು ಮಂಡ್ಯ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್‌ ಮೂರ್ತಿ ನೇತೃತ್ವದಲ್ಲಿ ಏಳು ಮಂದಿಯನ್ನು ಒಳಗೊಂಡ ತಂಡ ರಚಿಸಲಾಗಿತ್ತು. 

ಮಾರ್ಗಸೂಚಿ:

2013ರ ಸುತ್ತೋಲೆಯ ಮಾರ್ಗಸೂಚಿ ಪ್ರಕಾರ ಗ್ರಾಮ ಪಂಚಾಯಿತಿಗೆ ನೀಡುವ ಜೆ–ಸ್ಲಿಪ್‌ ಅನ್ನು ಪರಿಶೀಲಿಸಿ, ಸಂಬಂಧಿಸಿದ ಆಸ್ತಿಯನ್ನು ಅಧಿಕೃತವಾಗಿ ಗ್ರಾಮ ಪಂಚಾಯಿತಿಯಿಂದ ನೀಡಿರುವ ನಮೂನೆ–9 ಮತ್ತು 11 ಅನ್ನು ಆಧರಿಸಿ ನೋಂದಣಿ ಮಾಡಲಾಗಿದೆಯೇ ಎಂಬುದನ್ನು ದೃಢೀಕರಿಸಿಕೊಳ್ಳಬೇಕು. ನಕಲಿ ನಮೂನೆ ಬಳಸಿ ನೋಂದಣಿ ಮಾಡಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಉಪನೋಂದಣಾಧಿಕಾರಿಯ ಗಮನಕ್ಕೆ ತರಬೇಕು. ಈ ಮಾರ್ಗಸೂಚಿ ಪಾಲನೆಯಲ್ಲಿ ಲೋಪ ಉಂಟಾದಲ್ಲಿ ಪಂಚಾಯಿತಿ ಅಧಿಕಾರಿಗಳನ್ನೇ ನೇರವಾಗಿ ಜವಾಬ್ದಾರರನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸಬೇಕು ಎಂದು ತಿಳಿಸಲಾಗಿತ್ತು. 

ಫೆ.16ರಂದು ವರದಿ ನೀಡಿ: 

ಈ ಪ್ರಕರಣದಲ್ಲಿ ತಪ್ಪಿತಸ್ಥ ಪಿಡಿಒಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಸಮಗ್ರವಾದ ವರದಿಯನ್ನು ಫೆ.16ರಂದು ಸಲ್ಲಿಸಲು ಮಂಡ್ಯ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಆದೇಶಿಸಿದ್ದಾರೆ. ಈ ಪ್ರಕರಣದ ಬಗ್ಗೆ ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೂ ಸೂಚಿಸಲಾಗಿದೆ. 

ಕೆ.ಆರ್‌.ನಂದಿನಿ 
ಉಪಲೋಕಾಯುಕ್ತರ ಆದೇಶದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿರಂತರ ಅನುಸರಣೆ ಮಾಡಿ ಅನುಪಾಲನಾ ವರದಿ ಸಲ್ಲಿಸಲಾಗುವುದು
ಕೆ.ಆರ್‌.ನಂದಿನಿ ಸಿಇಒ ಮಂಡ್ಯ ಜಿಲ್ಲಾ ಪಂಚಾಯಿತಿ

‘ದಾಖಲೆಗಳಿಲ್ಲದೆ ಇ–ಖಾತಾ ಪ್ರಕ್ರಿಯೆ’

ಅಗತ್ಯ ದಾಖಲೆಗಳು ಇಲ್ಲದಿದ್ದರೂ ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ 1264 ಇ–ಖಾತಾಗಳನ್ನು ಸೃಷ್ಟಿಸಲಾಗಿದೆ. ನಂತರ ಇ–ಖಾತಾಗಳ 9 ಮತ್ತು 11 ‘ಎ’ ನಮೂನೆಗಳನ್ನು ಮಾತ್ರ ಕಡತದಲ್ಲಿ ಇಡಲಾಗಿದೆ. ಇದು ಕೂಡ ಅಕ್ರಮ ನಡೆದಿರುವ ಬಗ್ಗೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.  ಇ–ಖಾತಾ ಎಂಬುದು ಆಸ್ತಿ ಮಾಲೀಕತ್ವ ತೆರಿಗೆ ಪಾವತಿ ಮತ್ತು ವಿವರಗಳನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಲು ಸಹಾಯ ಮಾಡುವ ಸುರಕ್ಷಿತ ಡಿಜಿಟಲ್ ದಾಖಲೆ. ಹಸ್ತಚಾಲಿತ ವ್ಯವಸ್ಥೆಯಲ್ಲಿನ ದೋಷಗಳನ್ನು ಕಡಿಮೆ ಮಾಡಿ ಆಸ್ತಿ ವಹಿವಾಟುಗಳನ್ನು ಪಾರದರ್ಶಕಗೊಳಿಸಲು ಜಾರಿಗೆ ತಂದ ವ್ಯವಸ್ಥೆ. ಆದರೆ ಇದರ ಪ್ರಕ್ರಿಯೆಯಲ್ಲೂ ನಿಯಮಗಳನ್ನು ಉಲ್ಲಂಘಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.