ADVERTISEMENT

ಮಂಡ್ಯ: ಕಾಯಕಲ್ಪಕ್ಕೆ ಕಾದಿರುವ ‘ಕಲಾಮಂದಿರ’

ಹಾಳಾಗಿರುವ ವೇದಿಕೆಯ ಮರದ ನೆಲಹಾಸು: ಆಧುನೀಕರಣಗೊಳ್ಳದ ಸೌಂಡ್‌–ಲೈಟಿಂಗ್‌ ವ್ಯವಸ್ಥೆ

ಸಿದ್ದು ಆರ್.ಜಿ.ಹಳ್ಳಿ
Published 25 ಸೆಪ್ಟೆಂಬರ್ 2025, 4:33 IST
Last Updated 25 ಸೆಪ್ಟೆಂಬರ್ 2025, 4:33 IST
ಮಂಡ್ಯ ನಗರದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದ ಹೊರನೋಟ 
ಮಂಡ್ಯ ನಗರದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದ ಹೊರನೋಟ    

ಮಂಡ್ಯ: ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಮುಖ ವೇದಿಕೆಯಾದ ನಗರದ ‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರ’ವು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಕಾಯಕಲ್ಪಕ್ಕೆ ಕಾಯುತ್ತಿದೆ. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಸೇರಿದ ಈ ಕಲಾಮಂದಿರವನ್ನು 2003ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಉದ್ಘಾಟಿಸಿದ್ದರು. ಇಲ್ಲಿ ಪ್ರಸ್ತುತ 606 ಸಭಿಕರ ಆಸನಗಳಿವೆ. ಈ ಕಲಾಮಂದಿರದ ನಿರ್ವಹಣಾ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ. 

ಸೌಂಡ್‌ ಮತ್ತು ಲೈಟಿಂಗ್‌ ವ್ಯವಸ್ಥೆ ತೀರಾ ಹಳೆಯದಾಗಿದ್ದು, ಕಾಲಕ್ಕೆ ತಕ್ಕಂತೆ ಆಧುನೀಕರಣಗೊಂಡಿಲ್ಲ. ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಪ್ರತಿಧ್ವನಿ (ಎಕೋ) ಬರುತ್ತಿರುವ ಕಾರಣ ಕಲಾರಸಿಕರಿಗೆ ಗಾಯನ, ಸಂಗೀತ ಆಸ್ವಾದಿಸುವುದಕ್ಕೆ ತೊಡಕಾಗಿದೆ. ಹೀಗಾಗಿ ‘ಸೌಂಡ್‌ ಪ್ರೂಫ್‌’ ಅಳವಡಿಸುವುದು ಅತ್ಯಗತ್ಯವಾಗಿದೆ.   

ADVERTISEMENT

ವೇದಿಕೆಯ ಮರದ ನೆಲಹಾಸು ಕಿತ್ತು ಹೋಗಿದ್ದು, ಅತಿಥಿ ಮತ್ತು ಪಾತ್ರಧಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ವೇದಿಕೆಯ ‘ವಾಲ್‌ ಪ್ಯಾನಲಿಂಗ್‌’ ಹಾಳಾಗಿದೆ. ಹಿಂಭಾಗದಲ್ಲಿ ‘ರೋಲಿಂಗ್‌ ಶೆಟರ್‌’ ಇಲ್ಲದ ಕಾರಣ ನಾಟಕ ಪ್ರದರ್ಶನಕ್ಕೆ ಪರಿಕರಗಳನ್ನು ತರುವುದು ಸಮಸ್ಯೆಯಾಗಿದೆ.

‘ಜನರೇಟರ್‌ ಹಳೆಯದಾಗಿದ್ದು, ಪದೇ ಪದೇ ಕೈಕೊಡುತ್ತಿದೆ. ಹೊಸ ಜನರೇಟರ್‌ ವ್ಯವಸ್ಥೆ ಆಗಬೇಕು. ಕಲಾಮಂದಿರದ ಆವರಣದಲ್ಲಿ ಕ್ಯಾಂಟೀನ್‌ ಆರಂಭಿಸಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ಉದ್ಯಾನ ಅಭಿವೃದ್ಧಿಪಡಿಸಬೇಕು’ ಎಂದು ರಂಗಭೂಮಿ ಕಲಾವಿದರು ಒತ್ತಾಯಿಸಿದ್ದಾರೆ. 

ಆಸನಗಳ ಬದಲಾವಣೆ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ (2024ರ ಡಿ.20ರಿಂದ 22ರವರೆಗೆ) ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲಾಮಂದಿರದಲ್ಲಿ ನಡೆಸಬೇಕು ಎಂಬ ಉದ್ದೇಶದಿಂದ ಹಾಗೂ ಕಲಾವಿದರ ಒತ್ತಾಯದ ಮೇರೆಗೆ ₹1.08 ಕೋಟಿ ವೆಚ್ಚದಲ್ಲಿ ನವೀಕರಣ ಕಾರ್ಯ ನಡೆಯಿತು. ಹಾಳಾಗಿದ್ದ 755 ಕಬ್ಬಿಣದ ಚೇರುಗಳನ್ನು ತೆರವುಗೊಳಿಸಿ, ₹53 ಲಕ್ಷ ವೆಚ್ಚದಲ್ಲಿ 606 ‘ಕುಶನ್‌ ಚೇರ್‌‘ಗಳನ್ನು ಅಳವಡಿಸಲಾಯಿತು. 

‘ಮಳೆ ಬಂದಾಗ ಸೋರುತ್ತಿದ್ದ ಕಾರಣ, ಶಿಥಿಲವಾಗಿದ್ದ ಸಿಮೆಂಟ್‌ ಶೀಟುಗಳನ್ನು ತೆಗೆದು, ಹೊಸ ತಗಡಿನ ಶೀಟುಗಳನ್ನು ಅಳವಡಿಸಲಾಗಿದೆ. ಚಾವಣಿಯ ಒಳಭಾಗದಲ್ಲಿ ‘ಪಿಒಪಿ ವರ್ಕ್‌’ ಮಾಡಲಾಗಿದೆ. ಪಾಳುಬಿದ್ದಿದ್ದ ಶೌಚಾಲಯ ಮತ್ತು ಗ್ರೀನ್‌ ರೂಂಗಳನ್ನು ನವೀಕರಣ ಮಾಡಲಾಗಿದೆ. ಸೌಂಡ್‌ ಮತ್ತು ಲೈಟಿಂಗ್‌ ರಿಪೇರಿ ಕಾರ್ಯವನ್ನೂ ನಡೆಸಲಾಗಿದೆ’ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. 

ಮರದ ನೆಲಹಾಸು

ವಾಲ್‌ ಪ್ಯಾನಲಿಂಗ್‌ ರೋಲಿಂಗ್‌ ಶೆಟರ್‌ ಕಾಮಗಾರಿಗೆ ₹18.50 ಲಕ್ಷದ ಪ್ರಸ್ತಾವವನ್ನು ಜಿಲ್ಲಾಧಿಕಾರಿಯವರ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಸಲ್ಲಿಸಲಾಗಿದೆ

– ಬಿ.ವಿ. ನಂದೀಶ್‌ ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ

ನಾಟಕ ಪ್ರದರ್ಶನಕ್ಕೆ ಹೊರಗಡೆಯಿಂದ ಧ್ವನಿ ಮತ್ತು ಬೆಳಕಿನ ಪರಿಕರಗಳನ್ನು ಬಾಡಿಗೆಗೆ ತರಬೇಕಿದೆ. ಫ್ಯಾನ್‌ಗಳು ಹಾಳಾಗಿದ್ದು ಕರ್ಕಶ ಶಬ್ದ ಮಾಡುತ್ತಿವೆ. ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಬೇಕು

– ಎಂ.ಸಿ. ಲಂಕೇಶ್‌ ಅಧ್ಯಕ್ಷ ನೆಲದನಿ ಬಳಗ ಮಂಡ್ಯ

‘ಸಂಪೂರ್ಣ ನವೀಕರಣದ ಅಗತ್ಯವಿದೆ’

‘ಪ್ರಸಾಧನ ಕೊಠಡಿ ಅತಿಥಿಗಳ ಕೊಠಡಿ ನವೀಕರಣಗೊಳ್ಳಬೇಕು. ಕ್ಯಾಂಟಿನ್‌ ಸೌಲಭ್ಯ ಕಲ್ಪಿಸಬೇಕು. ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತಮ ವೇದಿಕೆ ಒದಗಿಸಲು ಕಲಾಮಂದಿರವನ್ನು ಸಂಪೂರ್ಣ ನವೀಕರಣಗೊಳಿಸುವ ಅಗತ್ಯವಿದೆ’ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶಗೌಡ ಅಭಿಪ್ರಾಯಪಟ್ಟಿದ್ದಾರೆ.  ‘ಪೌರಾಣಿಕ ನಾಟಕಗಳ ಪ್ರದರ್ಶನಕ್ಕೆ ಸೀಮಿತವಾಗಿರುವ ಕಲಾಮಂದಿರವನ್ನು ವಿಚಾರ ಸಂಕಿರಣ ಕೃತಿ ಬಿಡುಗಡೆ ಸಂಗೀತ ಕಾರ್ಯಕ್ರಮ ಸಾಮಾಜಿಕ ನಾಟಕ ಕಾರ್ಯಾಗಾರಗಳಿಗೂ ಸ್ಥಳಾವಕಾಶ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.