ADVERTISEMENT

ಮಂಡ್ಯ | ವಿ.ಸಿ. ಫಾರಂ: ನ.28ರಿಂದ ಮೂರು ದಿನ ಕೃಷಿ ಮೇಳ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 13:38 IST
Last Updated 8 ಅಕ್ಟೋಬರ್ 2025, 13:38 IST
<div class="paragraphs"><p>ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿಕಾರಿಗಳು ಕೃಷಿ–ಮೇಳ–2025ರ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದರು</p></div>

ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿಕಾರಿಗಳು ಕೃಷಿ–ಮೇಳ–2025ರ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದರು

   

ಮಂಡ್ಯ: ‘ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ನ.28ರಿಂದ ನ.30ರವರೆಗೆ ತಾಲ್ಲೂಕಿನ ವಿ.ಸಿ.ಫಾರಂನಲ್ಲಿ ‘ಸಮಗ್ರ ಕೃಷಿಯಿಂದ ಸುಸ್ಥಿರತೆ’ ಘೋಷ ವಾಕ್ಯದಡಿ ‘ಕೃಷಿ ಮೇಳ-2025’ ಆಯೋಜಿಸಲಾಗಿದೆ’ ಎಂದು ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಕೆ.ಎಂ. ಹರಿಣಿಕುಮಾರ್ ತಿಳಿಸಿದರು.‌

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರತಿ ವರ್ಷ ಬೆಂಗಳೂರು ಕೃಷಿ ಮಹಾವಿದ್ಯಾಲಯ, ವಲಯ ಕೃಷಿ ಸಂಶೋಧನಾ ಕೇಂದ್ರದಿಂದ ‘ಕೃಷಿ ಮೇಳ’ ನಡೆಯುತ್ತಿತ್ತು. ಮಂಡ್ಯದಲ್ಲಿ ಕೃಷಿ ವಿವಿ ಸ್ಥಾಪನೆಯಾದ ನಂತರ ಇದೇ ಮೊದಲ ಬಾರಿಗೆ ಕೃಷಿ ಮೇಳ ಆಯೋಜಿಸಲಾಗಿದೆ. ಈ ಬಾರಿ 3 ದಿನ ನಡೆಯುತ್ತಿರುವುದು ಮತ್ತೊಂದು ವಿಶೇಷ. ಕೃಷಿ ವಿವಿಯು ಮಂಡ್ಯ, ಮೈಸೂರು, ಹಾಸನ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ರೈತರ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿದೆ ಎಂದರು.

ADVERTISEMENT

ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ, ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ, ಕೃಷಿ ಪರಿಕರಗಳ ಹಾಗೂ ಪ್ರಕಟಣೆಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ. ವಿನೂತನ ತಂತ್ರಜ್ಞಾನ, ಹೊಸ ತಳಿಗಳು ಹಾಗೂ ಹೊಸ ಆವಿಷ್ಕಾರಗಳ ಪರಿಚಯ ಮಾಡಿಕೊಡಲಾಗುವುದು ಎಂದರು.

350 ಮಳಿಗೆಗಳಿಗೆ ಅವಕಾಶ

ಕೃಷಿ ಮೇಳದ ವಸ್ತುಪ್ರದರ್ಶನದಲ್ಲಿ ಒಟ್ಟು 350 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ 100 ಹೈಟೆಕ್‌ ಮಳಿಗೆಗಳು, 220 ಸಾಮಾನ್ಯ ಮಳಿಗೆಗಳು, 30 ಸ್ವ–ಸಹಾಯ ಸಂಘ, ರೈತ ಉತ್ಪಾದಕರ ಕಂಪನಿ ಮತ್ತು ನರ್ಸರಿ ಅವರಿಗೆ ಮಳಿಗೆಗಳನ್ನು ಮೀಸಲಿರಿಸಲಾಗಿದೆ.

ಕೃಷಿಯಿಂದ ವಿಮುಖರಾಗುತ್ತಿರುವ ಯುವ ಪೀಳಿಗೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ನವೋದ್ಯಮಗಳ ಪರಿಚಯ ಮಾಡಲಾಗುತ್ತಿದೆ. ಬಿತ್ತನೆ ಬೀಜ ಉತ್ಪಾದನೆ, ಸಂಸ್ಕರಣೆ, ಸುಧಾರಿತ ಬೆಳೆಗಳ ಬಿತ್ತನೆ ಬೀಜ ಲಭ್ಯತೆ ಮತ್ತು ಅವುಗಳ ಬೇಸಾಯದ ಕುರಿತ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ತಾಕುಗಳನ್ನು ನಿದರ್ಶಿಸಲಾಗುವುದು ಎಂದರು.

ಪ್ರಮುಖ ಆಕ‌ರ್ಷಣೆಗಳು

ಸಮಗ್ರ ಕೃಷಿ, ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳು, ನೂತನ ತಳಿಗಳು ಮತ್ತು ತಂತ್ರಜ್ಞಾನಗಳು, ಮಣ್ಣು ಮತ್ತು ನೀರು ಸಂರಕ್ಷಣಾ ವಿಧಾನಗಳು, ಕಾಫಿ ಮತ್ತು ಸಾಂಬಾರು ಬೆಳೆಗಳ ತಂತ್ರಜ್ಞಾನಗಳು, ಹೈಟೆಕ್‌–ತೋಟಗಾರಿಕೆ ಪ್ರಾತ್ಯಕ್ಷಿಕೆಗಳು, ಸುಧಾರಿತ ಮೇವಿನ ತಳಿಗಳು ಮತ್ತು ತಾಂತ್ರಿಕತೆಗಳು, ಕೃಷಿಯಲ್ಲಿ ಡ್ರೋನ್‌ ತಂತ್ರಜ್ಞಾನ, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೃಷಿ ಅರಣ್ಯ ಉತ್ಪನ್ನಗಳು, ರೇಷ್ಮೆ, ಪಶು ಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಣೆ ಕುರಿತು ಪ್ರಾತ್ಯಕ್ಷಿಕೆ ಕೃಷಿ ಮೇಳದಲ್ಲಿ ಇರಲಿದೆ.

ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ, ಔಷಧ ಸಸ್ಯಗಳ ಪ್ರಾತ್ಯಕ್ಷಿಕೆ, ದೇಸಿ ರಾಸುಗಳ ಪ್ರದರ್ಶನ, ಉಷ್ಣವಲಯ ಮತ್ತು ಅರೆ ಉಷ್ಣವಲಯ ಬೆಳೆಗಳು ಈ ಬಾರಿಯ ಪ್ರಮುಖ ಆಕರ್ಷಣೆಗಳಾಗಿವೆ.

ಗೋಷ್ಠಿಯಲ್ಲಿ ಕೃಷಿ ವಿವಿಯ ಸಂಶೋಧನಾ ನಿರ್ದೇಶಕ ಜಿ.ಎಂ. ದೇವಗಿರಿ, ವಿಸ್ತರಣಾ ನಿರ್ದೇಶಕ ರಾಮಚಂದ್ರ, ಸಹ ನಿರ್ದೇಶಕ ಎ.ಡಿ. ರಂಗನಾಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.