ADVERTISEMENT

ಜಿಲ್ಲೆಯ ಕೆರೆ– ಕಟ್ಟೆ ತುಂಬಿಸಿ: ‘ಪ್ರಜಾವಾಣಿ’ ವರದಿಗೆ ಕೇಂದ್ರ ಸಚಿವರ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 2:33 IST
Last Updated 19 ಆಗಸ್ಟ್ 2025, 2:33 IST
‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ 
‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ    

ಮಂಡ್ಯ: ಐತಿಹಾಸಿಕ ಕೃಷ್ಣರಾಜಸಾಗರ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು (ಒಳಹರಿವು) ಬರುತ್ತಿದ್ದು, ಹೊರಕ್ಕೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಅದಷ್ಟು ಬೇಗ ಮಂಡ್ಯ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವಂತೆ ಕೇಂದ್ರ ಸಚಿವ, ಮಂಡ್ಯ ಸಂಸದರೂ ಆಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಜಾವಾಣಿಯಲ್ಲಿ ‘ಮಂಡ್ಯಕ್ಕೆ ಕೊರತೆ ತಮಿಳುನಾಡಿಗೆ ಹೆಚ್ಚುವರಿ’ ಶೀರ್ಷಿಕೆಯಡಿ ಜಿಲ್ಲೆಯ ಕೆರೆ–ಕಟ್ಟೆಗಳು ತುಂಬದ ಬಗ್ಗೆ ವಿಶೇಷ ವರದಿಯಲ್ಲಿ ಬೆಳಕು ಚೆಲ್ಲಲಾಗಿತ್ತು. ವರದಿಗೆ ಸ್ಪಂದಿಸಿದ ಕೇಂದ್ರ ಸಚಿವರು, ಜಿಲ್ಲಾಧಿಕಾರಿ ಕುಮಾರ ಅವರೊಂದಿಗೆ ದೆಹಲಿಯಿಂದ ದೂರವಾಣಿ ಕರೆ ಮಾಡಿ ಮಾತನಾಡಿ ತಕ್ಷಣವೇ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವಂತೆ ನಿರ್ದೇಶನ ನೀಡಿದರು.

‘ಉತ್ತಮ ಮಳೆಯಾಗಿರುವ ಕಾರಣ ಅಣೆಕಟ್ಟೆಯ 94 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೂನ್‌ ತಿಂಗಳಲ್ಲೇ ಜಲಾಶಯ ಭರ್ತಿ ಆಗಿತ್ತು. ಆಗ ಕೆರೆಗಳಿಗೆ ನೀರು ತುಂಬಿಸುವಂತೆ ತಿಳಿಸಲಾಗಿತ್ತು. ಮಂಡ್ಯದಲ್ಲಿ ನಡೆದ ದಿಶಾ ಸಭೆಯಲ್ಲಿಯೂ ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿತ್ತು. ಆದರೆ, ತಮ್ಮ ಭಾಗದ ಕೆರೆಗಳನ್ನು ತುಂಬಿಸಿಲ್ಲ ಎಂದು ಹಲವಾರು ರೈತರು ತಮ್ಮ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಈವರೆಗೆ ಯಾವ ಯಾವ ಕೆರೆಗಳನ್ನು ತುಂಬಿಸಿಲ್ಲವೋ ಆ ಕೆರೆಗಳಿಗೆ ತಕ್ಷಣವೇ ನೀರು ತುಂಬಿಸಲು ಕ್ರಮ ವಹಿಸಿ’ ಎಂದು ಕೇಂದ್ರ ಸಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.