ADVERTISEMENT

ಜೆಡಿಎಸ್ ಕರಪತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಲ್‌.ಆರ್‌.ಶಿವರಾಮೇಗೌಡ ಹೆಸರು!

ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡರು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 9:34 IST
Last Updated 30 ಅಕ್ಟೋಬರ್ 2018, 9:34 IST
   

ಮಂಡ್ಯ: ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ಘೋಷಣೆ ಮಾಡಿರುವ ಸಾಮಾಜಿಕ ನ್ಯಾಯ ಪರಿಷತ್‌, ಕರ ಪತ್ರದಲ್ಲಿ ‘ಬಿಜೆಪಿ ಅಭ್ಯರ್ಥಿ ಎಲ್‌.ಆರ್‌.ಶಿವರಾಮೇಗೌಡ’ ಎಂದು ಮುದ್ರಿಸಿರುವುದು ಬಿಜೆಪಿ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ.

ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ ಅನಂತರಾಯಪ್ಪ ಕರಪತ್ರ ಮುದ್ರಿಸಿ ಹಂಚಿಕೆ ಮಾಡಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜನಪರ ಆಡಳಿತ ಮೆಚ್ಚಿ ಜೆಡಿಎಸ್‌ ಬೆಂಬಲಿಸುತ್ತಿರುವಾಗಿ ಕರಪತ್ರದಲ್ಲಿ ಮುದ್ರಿಸಿದ್ದಾರೆ. ಎಲ್‌.ಆರ್‌.ಶಿವರಾಮೇಗೌಡರಿಗೆ ಮತ ನೀಡಲು ಮನವಿ ಎನ್ನುವಲ್ಲಿ ಬಿಜೆಪಿ ಅಭ್ಯರ್ಥಿ ಎಲ್‌.ಆರ್‌.ಶಿವರಾಮೇಗೌಡಗೆ ಎಂದಿದೆ. ಕರಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡರು, ಜನರಲ್ಲಿ ತಪ್ಪು ಭಾವನೆ ಮೂಡಿಸಲು, ಬಿಜೆಪಿ ಮತಗಳನ್ನು ಸೆಳೆಯಲು ಜೆಡಿಎಸ್‌ ಮುಖಂಡರು ಈ ರೀತಿ ಷಡ್ಯಂತ್ರ ರೂಪಿಸಿದ್ದಾರೆ. ಚುನಾವಣಾ ಆಯೋಗ ತಕ್ಷಣ ಎಲ್‌.ಆರ್‌.ಶಿವರಾಮೇಗೌಡರ ಉಮೇದುವಾರಿಕೆಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಕಣ್ತಪ್ಪಿನಿಂದ ತಪ್ಪಾಗಿ ಮುದ್ರಣಗೊಂಡಿದೆ. ಇದು ನನ್ನ ಗಮನಕ್ಕೆ ಬಂದ ತಕ್ಷಣ ಕರಪತ್ರ ಹಂಚಿಕೆ ತಡೆದಿದ್ದೇನೆ. ತಪ್ಪಿಗೆ ಕ್ಷಮೆ ಯಾಚನೆ ಮಾಡುತ್ತೇನೆ. ಈ ಕುರಿತು ಯಾವುದೇ ಗೊಂದಲ ಉಂಟಾಗದಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಒಂದು ಪತ್ರ ಸಲ್ಲಿಸಿದ್ದೇನೆ’ ಎಂದು ಪರಿಷತ್‌ ಅಧ್ಯಕ್ಷ ಅನಂತರಾಯಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.