ADVERTISEMENT

ಮಂಡ್ಯ | ಮತ್ಸ್ಯ ಸಂಪದ: 742 ಫಲಾನುಭವಿಗಳು

ಮೀನುಗಾರರಿಗೆ ಕೌಶಲ ತರಬೇತಿ ನೀಡಿ: ಜಿಲ್ಲಾಧಿಕಾರಿ ಕುಮಾರ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 2:24 IST
Last Updated 29 ಆಗಸ್ಟ್ 2025, 2:24 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಮಂಡ್ಯ: ‘ಜಿಲ್ಲೆಯಲ್ಲಿ 45 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರರಿದ್ದು ಅವರ ಆರ್ಥಿಕ ಮಟ್ಟದ ಸುಧಾರಣೆಗಾಗಿ ಮೀನು ಸಾಕಣೆ ಕೌಶಲದ ಕುರಿತಾಗಿ ತರಬೇತಿ ನೀಡಿ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.

ಮೀನುಗಾರಿಕೆ ಇಲಾಖೆಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ 2025-26ನೇ ಸಾಲಿನ ‘ಪ್ರಧಾನ ಮಂತ್ರಿ ಮತ್ಸ್ಯ ಸಂಪದ’ ಯೋಜನೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಯ 177 ಕೆರೆಗಳು ಹಾಗೂ ಗ್ರಾಮ ಪಂಚಾಯಿತಿಯ 688 ಕೆರೆಗಳು ಒಟ್ಟು 865 ಕೆರೆಗಳು ಹಾಗೂ 26 ನದಿ ಭಾಗಗಳಲ್ಲಿ ಮೀನು ಸಾಕಾಣಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ 2024-25ನೇ ಸಾಲಿನ 383 ಲಕ್ಷ ಮೀನು ಮರಿಗಳನ್ನು ಬಿತ್ತನೆ ಮಾಡಿ 30.579 ಟನ್ ಮೀನು ಉತ್ಪಾದನೆ ಮಾಡಲಾಗಿದೆ. ಜಿಲ್ಲೆಯಲ್ಲಿ 47 ಮೀನುಗಾರರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು ಜಿಲ್ಲೆಯ ಎಲ್ಲಾ ಮೀನುಗಾರರಿಗೆ ಮೀನುಗಾರಿಕೆ ಕುರಿತು ಹೆಚ್ಚಿನ ತರಬೇತಿ ನೀಡಬೇಕು ಎಂದರು

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಕಳೆದ ಐದು ವರ್ಷಗಳಿಂದ 742 ಫಲಾನುಭವಿಗಳಿದ್ದಾರೆ. ಈವರೆಗೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 150 ಫಲಾನುಭವಿಗಳಿಗೆ ಸುಮಾರು ₹5.13 ಕೋಟಿ ಸಹಾಯಧನ ನೀಡಲಾಗಿದೆ ಎಂದರು.

ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಾಬಾ ಸಾಬ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಲೋಕೇಶ್‌ ಕೆ.ಎಂ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್ ಪಾಲ್ಗೊಂಡಿದ್ದರು. 

‘ಕೆಆರ್‌ಎಸ್‌ ಫಿಶ್‌’ ಬ್ರ್ಯಾಂಡ್‌ ಬೆಳೆಸಿ: ಸಿಇಒ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಮಾತನಾಡಿ ‘ಮೀನು ಮಾರಾಟ ಕಿಯೋಸ್ಕ್ ಗಳನ್ನು ಹೆಚ್ಚಿಸಿ ಮೀನು ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಿ’ ಎಂದರು.

ಎಫ್.ಪಿ.ಒ.ಗಳೊಂದಿಗೆ ಜೊತೆಗೂಡಿ ನಮ್ಮದೇ ಆದ ಸ್ಥಳೀಯ ‘ಕೆ.ಆರ್.ಎಸ್ ಫಿಶ್ಸ್’ ಎಂದು ಬ್ರ್ಯಾಂಡಿಂಗ್ ಮಾಡಿ ತಾಜಾ ಮೀನುಗಳನ್ನು ಕ್ಲೀನ್ ಮತ್ತು ಕಟ್ ಮಾಡಿ ಉತ್ತಮವಾಗಿ ಪ್ಯಾಕಿಂಗ್ ಮಾಡಿ ಮಾರಾಟ ಮಾಡಿದರೆ ಶೇ 30ರಷ್ಟು ಆದಾಯ ಹೆಚ್ಚಿಸಬಹುದು. ಜಿಲ್ಲೆಯಲ್ಲಿ 3ರಿಂದ 4 ಲೈವ್ ಫಿಶ್ ವೆಂಡಿಂಗ್ ಸೆಂಟರ್ ಸ್ಥಾಪನೆ ಮಾಡಿ ಮಂಗಳೂರು ಉಡುಪಿಯಿಂದ ಮೀನುಗಳನ್ನು ಆಮದು ಮಾಡಿಕೊಳ್ಳಿ ಎಂದು ಹೇಳಿದರು. ಮೀನು ಸಾಕಾಣಿಕೆಯ ಹೊಂಡ ಕೆರೆ ಕಟ್ಟೆ ಜಲಾಶಯಗಳಲ್ಲಿ ಕುಲುಷಿತ ನೀರು ಡ್ರೈನೇಜ್ ನೀರು ಬಾರದಂತೆ ಸೂಕ್ತ ಕ್ರಮ ವಹಿಸಿ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.