ADVERTISEMENT

ಮನ್‌ಮುಲ್‌ ಗದ್ದುಗೆ; ಸೂಪರ್‌ಸೀಡ್‌ ತಪ್ಪಿಸಿಕೊಳ್ಳಲು ಶತಪ್ರಯತ್ನ

ಮನ್‌ಮುಲ್‌ ಗದ್ದುಗೆ; ಚಿಗುರೊಡೆದ ಬಿಜೆಪಿ ಮುಖಂಡರ ಆಸೆ, ಜೆಡಿಎಸ್‌ ಮುಖಂಡರ ಪ್ರತ್ಯಸ್ತ್ರ

ಎಂ.ಎನ್.ಯೋಗೇಶ್‌
Published 8 ಜೂನ್ 2021, 14:49 IST
Last Updated 8 ಜೂನ್ 2021, 14:49 IST
ಮನ್‌ಮುಲ್‌ ಆಡಳಿತ ಮಂಡಳಿ ಕಚೇರಿ ಕಟ್ಟಡ (ಸಂಗ್ರಹ ಚಿತ್ರ)
ಮನ್‌ಮುಲ್‌ ಆಡಳಿತ ಮಂಡಳಿ ಕಚೇರಿ ಕಟ್ಟಡ (ಸಂಗ್ರಹ ಚಿತ್ರ)   

ಮಂಡ್ಯ: ಮನ್‌ಮುಲ್‌ ನೀರು ಮಿಶ್ರಿತ ಹಾಲು ಸರಬರಾಜು ಪ್ರಕರಣ ರಾಜ್ಯ ಸರ್ಕಾರದ ಗಮನ ಸೆಳೆದಿದ್ದು ಆಡಳಿತ ಮಂಡಳಿಯ ಸೂಪರ್‌ಸೀಡ್‌ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಧಿಕಾರ ಉಳಿಸಿಕೊಳ್ಳಲು ಶತಪ್ರಯತ್ನ ನಡೆಸುತ್ತಿರುವ ಪದಾಧಿಕಾರಿಗಳು ಎಲ್ಲಾ ಪ್ರಯತ್ನ ನಡೆಸಲು ಮುಂದಾಗಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆರೋಪ ಸಾಬೀತಾದರೆ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್‌ ಮಾಡಲು ಹಿಂಜರಿಯುವುದಿಲ್ಲ ಎಂದು ತಿಳಿಸಿದ್ದಾರೆ. ಇದು ಮನ್‌ಮುಲ್‌ ಅಧಿಕಾರ ಹಿಡಿದಿರುವ ಜೆಡಿಎಸ್‌ ಪದಾಧಿಕಾರಿಗಳಲ್ಲಿ ನಡುಕ ಸೃಷ್ಟಿಸಿದೆ.

ಮನ್‌ಮುಲ್‌ ಆಡಳಿತ ಮಂಡಳಿ ರಚನೆಯಾಗಿ ಇನ್ನೂ 20 ತಿಂಗಳು ಕಳೆದಿಲ್ಲ. ಇಂತಹ ಸಂದರ್ಭದಲ್ಲಿ ಅಧಿಕಾರ ಬಿಟ್ಟುಕೊಡಲು ಸಿದ್ಧರಿಲ್ಲದ ಅಧ್ಯಕ್ಷ– ಉಪಾಧ್ಯಕ್ಷರು ಪ್ರತ್ಯಸ್ತ್ರ ಹೂಡಲು ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿ ಮನ್‌ಮುಲ್‌ ಅಂಗಳದಲ್ಲಿ ಹರಿದಾಡುತ್ತಿದೆ.

ADVERTISEMENT

ಮನ್‌ಮುಲ್‌ ಆಡಳಿತ ಮಂಡಳಿಯಲ್ಲಿ 16 ಮಂದಿ ಸದಸ್ಯರಿದ್ದಾರೆ. ಸಹಕಾರ ಸಂಘಗಳಿಂದ 12 ಮಂದಿ ನಿರ್ದೇಶಕರು, ಮೂವರು ಅಧಿಕಾರಿಗಳು, ಒಬ್ಬರು ಸರ್ಕಾರದ ನಾಮನಿರ್ದೇಶಿತ ಸದಸ್ಯರು ಇದ್ದಾರೆ. 12 ಚುನಾಯಿತ ಪ್ರತಿನಿಧಿಗಳಲ್ಲಿ ಇಬ್ಬರು ಕಾಂಗ್ರೆಸ್‌ ಬೆಂಬಲಿತರು, ಇಬ್ಬರು ಬಿಜೆಪಿ ಬೆಂಬಲಿತರು, 8 ಮಂದಿ ಜೆಡಿಎಸ್‌ ಬೆಂಬಲಿತರಿದ್ದಾರೆ.

ಜೆಡಿಎಸ್‌ ಬೆಂಬಲಿತರಿಗೆ ಬಹುಮತವಿದ್ದರೂ ಆಡಳಿತ ಮಂಡಳಿ ರಚನೆ ವೇಳೆ ತಿಣುಕಾಡಬೇಕಾಯಿತು. ಅಧಿಕಾರಿಗಳು, ನಾಮ ನಿರ್ದೇಶಿತ ಸದಸ್ಯರೊಂದಿಗೆ ಅಧಿಕಾರ ಹಿಡಿಯಲು ಬಿಜೆಪಿ ಸಕಲ ಸಿದ್ಧತೆ ನಡೆಸಿತ್ತು. ಬಿಜೆಪಿ ಬೆಂಬಲಿತ ನಿರ್ದೇಶಕ ಎಸ್‌.ಪಿ.ಸ್ವಾಮಿ ಅಧ್ಯಕ್ಷರಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ನಂತರ ನಡೆದ ಬೆಳವಣಿಗೆಯಲ್ಲಿ ಅಧಿಕಾರ ಜೆಡಿಎಸ್‌ ಪಾಲಾಯಿತು.

ಆಗ ಬಿಜೆಪಿಯ ಎಸ್‌.ಪಿ.ಸ್ವಾಮಿಯವರ ಕನಸು ಕೈಗೂಡಲಿಲ್ಲ. ಆದರೆ ಈಗ ಹಾಲು ಮಿಶ್ರಿತ ಹಾಲು ಸರಬರಾಜು ಪ್ರಕರಣ ಮುನ್ನೆಲೆಗೆ ಬಂದಿದ್ದು ಇದನ್ನೇ ಬಳಸಿಕೊಂಡು ಸೂಪರ್‌ಸೀಡ್‌ ಅಸ್ತ್ರ ಹೂಡಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಾಧ್ಯತೆಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಅದಕ್ಕಾಗಿ ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ತನಿಖಾ ತಂಡಕ್ಕೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರ ಉಳಿಸಿಕೊಳ್ಳಲು ಟೊಂಕ ಕಟ್ಟಿ ನಿಂತಿರುವ ಜೆಡಿಎಸ್‌ ನಿರ್ದೇಶಕರು ತಮ್ಮದೇ ಪ್ರತ್ಯಸ್ತ್ರ ಹೂಡಲು ನಿರ್ಧರಿಸಿದ್ದಾರೆ. ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದು ಅವರ ಸಹಾಯದಿಂದ ಅಧಿಕಾರ ಉಳಿಸಿಕೊಳ್ಳುವ ಎಲ್ಲಾ ಸಿದ್ಧತೆಗಳನ್ನು ಅಧ್ಯಕ್ಷ, ಉಪಾಧ್ಯಕ್ಷರು ಮಾಡಿಕೊಂಡಿದ್ದಾರೆ. ಆ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಹಾಗೂ ಜಿಲ್ಲಾ ಬಿಜೆಪಿ ಮುಖಂಡರಿಗೆ ತಕ್ಕ ಉತ್ತರ ನೀಡುವ ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿ ಹರಡಿದೆ.

‘ನಿರ್ದೇಶಕರು ಕೋಟ್ಯಂತರ ರೂಪಾಯಿ ಸುರಿದು ಚುನಾವಣೆಯಲ್ಲಿ ಗೆದ್ದಿದ್ದಾರೆ. ಅಧ್ಯಕ್ಷರಾಗಲೂ ಅಪಾರ ಹಣ ಖರ್ಚು ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರ ಬಿಟ್ಟುಕೊಡುವುದು ಅಸಾಧ್ಯ. ಹೇಗಾದರೂ ಮಾಡಿ ಪ್ರಕರಣ ಮುಚ್ಚಿಹಾಕಿ, ಗದ್ದುಗೆ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಈ ಕುರಿತು ಎಚ್‌.ಡಿ.ಕುಮಾರಸ್ವಾಮಿಯವರೆಂದಿಗೆ ಒಂದು ಸುತ್ತಿನ ಮಾತುಕತೆಯೂ ಆಗಿದೆ’ ಎಂದು ಜೆಡಿಎಸ್‌ ಮುಖಂಡರೊಬ್ಬರು ತಿಳಿಸಿದರು.

‘ಪ್ರಕರಣದ ತನಿಖೆ ನಡೆಯುತ್ತಿದ್ದು ಶೀಘ್ರ ಸತ್ಯಾಂಶ ಹೊರಬೀಳಲಿದೆ. ಸೂಪರ್‌ಸೀಡ್‌ ಪ್ರಶ್ನೆಯೇ ಉದ್ಭವವಾಗುವುದಿಲ್ಲ’ ಎಂದು ಮನ್‌ಮುಲ್‌ ಅಧ್ಯಕ್ಷ ರಾಮಚಂದ್ರು ತಿಳಿಸಿದರು.

***

ಗುತ್ತಿಗೆದಾರನ ಬಂಧನಕ್ಕೆ ಒತ್ತಾಯ

ಪ್ರತಿದಿನ ಲಕ್ಷ ಲೀಟರ್‌ ಹಾಲು ಮನ್‌ಮುಲ್‌ಗೆ ಸರಬರಾಜಾಗಲೂ ಟ್ಯಾಂಕರ್‌ ಗುತ್ತಿಗೆದಾರನೇ ಕಾರಣ. ಆತ ಹಲವು ಜಿಲ್ಲೆಗಳ ಹಾಲು ಒಕ್ಕೂಟದಲ್ಲಿ ಟ್ಯಾಂಕರ್‌ ಗುತ್ತಿಗೆ ಪಡೆದು ವಂಚಿಸುತ್ತಿದ್ದಾನೆ. ಆತನೊಂದಿಗೆ ಶಾಮೀಲಾಗಿ ಆಡಳಿತ ಮಂಡಳಿ ಪದಾಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ. ಮೊದಲು ಗುತ್ತಿಗೆದಾರನನ್ನು ಬಂಧಿಸಬೇಕು ಎಂದು ಕಾಂಗ್ರೆಸ್‌ ಮುಖಂಡರು ಒತ್ತಾಯಿಸಿದ್ದಾರೆ.

‘ಕಪ್ಪು ಪಟ್ಟಿಯಲ್ಲಿರುವ ಟ್ಯಾಂಕರ್‌ ಗುತ್ತಿಗೆದಾರನೊಬ್ಬನಿಗೆ ಮನ್‌ಮುಲ್‌ ಅನುಮತಿ ನೀಡಿ ಅಕ್ರಮ ಎಸಗಿದೆ. ಆ ಗುತ್ತಿಗೆದಾರನನ್ನು ತಕ್ಷಣ ಬಂಧಿಸಬೇಕು’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.