ADVERTISEMENT

ಮಂಡ್ಯ | ಏಕವಚನದಲ್ಲಿ ಬೈದಾಡಿಕೊಂಡ ಸಚಿವ–ಶಾಸಕರು

​ಪ್ರಜಾವಾಣಿ ವಾರ್ತೆ
Published 27 ಮೇ 2020, 13:10 IST
Last Updated 27 ಮೇ 2020, 13:10 IST
   

ಮಂಡ್ಯ: ಕೊರೊನಾ ಸೋಂಕು ನಿಯಂತ್ರಣ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಜೆಡಿಎಸ್‌ ಶಾಸಕರಾದ ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳನ್ನು ಹೊರಗಿಟ್ಟು ಸಭೆ ಆಯೋಜನೆ ಮಾಡಲಾಗಿತ್ತು. ಮುಂಬೈ ವಲಸಿಗರ ಸಂಖ್ಯೆ ಹೆಚ್ಚಳ, ಕ್ವಾರಂಟೈನ್‌ ವಾಸಿಗಳಿಗೆ ಸೌಲಭ್ಯ ವಿಚಾರಕ್ಕೆ ಶಾಸಕ ಸುರೇಶ್‌ಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ರವೀಂದ್ರ ಶ್ರೀಕಂಠಯ್ಯ ಅವರೂ ಧ್ವನಿಗೂಡಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿವರು, ನೀವು ಹೇಳುವುದನ್ನೆಲ್ಲಾ ಕೇಳಿಸಿಕೊಳ್ಳಲು ನಾನು ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದರಿಂದ ಕೆರಳಿದ ಶಾಸಕರು, ನೀನ್ಯಾವನು ಕೇಳೋಕೆ ಹೋಗಲೋ ಎಂದು ನಿಂದಿಸಿದ್ದಾರೆ. ಕೆಲ ಕಾಲ ಏಕವಚನದಲ್ಲೇ ಬೈದಾಡಿಕೊಂಡಿದ್ದಾರೆ. ವಿವಿಧ ಇಲಾಖೆ ಅಧಿಕಾರಿಗಳ ಎದುರೇ ಸಚಿವ–ಶಾಸಕರು ಕೀಳು ಭಾಷೆ ಬಳಸಿ ನಿಂದಿಸಿಕೊಂಡಿದ್ದಾರೆ.

ADVERTISEMENT

ಸಭೆಯಲ್ಲಿ ಗೊಂದಲ ಉಂಟಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ನಂತರ ಸಭೆ ಮುಂದುವರಿಯಿತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.