ADVERTISEMENT

ನಗರಸಭೆ: ವರ್ಷ ಕಳೆದರೂ ಸದಸ್ಯರಿಗೆ ಅಧಿಕಾರವಿಲ್ಲ

ಚುನಾವಣೆ ಫಲಿತಾಂಶ ಬಂದು ಸೆ.3ಕ್ಕೆ ವರ್ಷ, ಹೈಕೋರ್ಟ್‌ನಲ್ಲಿ ಬಾಕಿ ಉಳಿದ ಮೀಸಲಾತಿ ಗೊಂದಲ

ಎಂ.ಎನ್.ಯೋಗೇಶ್‌
Published 4 ಸೆಪ್ಟೆಂಬರ್ 2019, 9:08 IST
Last Updated 4 ಸೆಪ್ಟೆಂಬರ್ 2019, 9:08 IST
ನಗರಸಭೆ ಕಟ್ಟಡ (ಸಂಗ್ರಹ ಚಿತ್ರ)
ನಗರಸಭೆ ಕಟ್ಟಡ (ಸಂಗ್ರಹ ಚಿತ್ರ)   

ಮಂಡ್ಯ: ನಗರಸಭೆ ಚುನಾವಣೆಯ ಫಲಿತಾಂಶ ಬಂದು ಸೆ.3ಕ್ಕೆ ವರ್ಷ ಕಳೆದರೂ ಚುನಾವಣೆಯಲ್ಲಿ ಗೆದ್ದ ಸದಸ್ಯರು ಈವರೆಗೂ ಪ್ರಮಾಣವಚನ ಸ್ವೀಕರಿಸಿಲ್ಲ. ನಗರಾಡಳಿತ ಅಧಿಕಾರಿಗಳ ಕೈಯಲ್ಲಿದ್ದು ಚುನಾವಣೆಯಲ್ಲಿ ಗೆದ್ದ ಸದಸ್ಯರು ಅಧಿಕಾರದಿಂದ ದೂರವೇ ಉಳಿಯುವಂತಾಗಿದೆ.

2018, ಆ. 31ರಂದು ಚುನಾವಣೆ ನಡೆದು ಸೆ.3ರಂದು ಫಲಿತಾಂಶ ಪ್ರಕಟಗೊಂಡಿತ್ತು. ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್‌ ಕೈಯಲ್ಲಿದ್ದ ಆಡಳಿತವನ್ನು ಜೆಡಿಎಸ್‌ ಕಸಿದುಕೊಂಡಿತ್ತು. ಒಟ್ಟು 35 ವಾರ್ಡ್‌ಗಳಲ್ಲಿ ಜೆಡಿಎಸ್‌ 18, ಕಾಂಗ್ರೆಸ್‌ 10, ಬಿಜೆಪಿ 2, ಪಕ್ಷೇತರರಾಗಿ 5 ಮಂದಿ ಆಯ್ಕೆಯಾಗಿದ್ದರು. ಅಧ್ಯಕ್ಷ– ಉಪಾಧ್ಯಕ ಮೀಸಲಾತಿ ವಿಚಾರದಲ್ಲಿ ಗೊಂದಲ ಉಂಟಾಗಿದ್ದು ಪ್ರಕರಣ ಹೈಕೋರ್ಟ್‌ ಅಂಗಳದಲ್ಲಿದೆ. ಪ್ರಕರಣ ಇತ್ಯರ್ಥವಾಗದ ಕಾರಣ ಸದಸ್ಯರಿಗೆ ಅಧಿಕಾರ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ.

ಫಲಿತಾಂಶ ಪ್ರಕಟಗೊಂಡ ದಿನವೇ ಸರ್ಕಾರ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿ ಮಾಡಿ ಪಟ್ಟಿ ಪ್ರಕಟಿಸಿತ್ತು. ನಂತರ ಸೆ.6ರಂದು ಪರಿಷ್ಕೃತ ಮೀಸಲಾತಿ ಪಟ್ಟಿ ಪ್ರಕಟಗೊಂಡಿತು. ಆದರೆ ಹೊಸಪಟ್ಟಿಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್‌ ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್‌ ಸೆ.3ರಂದು ಪ್ರಕಟಿಸಿದ್ದ ಮೀಸಲಾತಿ ಪಟ್ಟಿಯನ್ನೇ ಎತ್ತಿ ಹಿಡಿಯಿತು. ಆದರೆ ಆದೇಶ ಪ್ರಶ್ನಿಸಿ ಮತ್ತೆ ಮೇಲ್ಮನವಿ ಸಲ್ಲಿಸಲಾಯಿತು. ಮೇಲ್ಮನವಿ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು ಸದಸ್ಯರ ಅಧಿಕಾರದ ಕನಸು ನನಸಾಗಿಲ್ಲ.

ADVERTISEMENT

ಸೆ.3ರಂದು ಪ್ರಕಟಿಸಿದ ಮೀಸಲಾತಿಯಲ್ಲಿ ಅಧ್ಯಕ್ಷರ ಹುದ್ದೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸ್ಥಾನ ಹಿಂದುಳಿದ (ಬ) ವರ್ಗದ ಮಹಿಳೆಗೆ ಮೀಸಲಾಗಿದೆ. ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ತಮಗೆ ಬೇಕಾದ ಸಮುದಾಯಗಳಿಗೆ ಮೀಸಲಾತಿ ನಿಗದಿ ಮಾಡಿಸಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದರು.

ಜಿಲ್ಲಾಧಿಕಾರಿ ಆಡಳಿತಾಧಿಕಾರಿ: ರಾಜ್ಯದ ಆಡಳಿತ ಯಂತ್ರ ಕುಸಿದಾಗ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಮಾದರಿಯಲ್ಲೇ ಈಗ ನಗರಾಡಳಿತದಲ್ಲಿ ಜಿಲ್ಲಾಧಿಕಾರಿ ಆಡಳಿತವಿದೆ. ಜಿಲ್ಲಾಧಿಕಾರಿ ನಗರಸಭೆಯ ಆಡಳಿತಾಧಿಕಾರಿಯಾಗಿದ್ದು ಯಾವುದೇ ಕಾಮಗಾರಿ ಕೈಗೊಳ್ಳುವಾಗ ಅವರ ನಿರ್ಧಾರವೇ ಅಂತಿಮವಾಗಿದೆ. ಸದಸ್ಯರು ಅಧಿಕಾರವನ್ನೇ ವಹಿಸಿಕೊಳ್ಳದ ಕಾರಣ ನಗರಸಭೆಯ ನಿರ್ಣಯಗಳಿಗೆ ಸದಸ್ಯರಿಗೆ ಯಾವುದೇ ಅಧಿಕಾರ ಇಲ್ಲವಾಗಿದೆ.

ನಗರಸಭೆಯಲ್ಲಿ ಸದಸ್ಯರ ಮಾತುಗಳಿಗೆ ಮನ್ನಣೆ ದೊರೆಯುತ್ತಿಲ್ಲ, ಅಧಿಕಾರಿಗಳ ದರ್ಬಾರ್‌ ನಡೆಯುತ್ತಿದೆ. ಸದಸ್ಯರ ಗಮನಕ್ಕೆ ತಾರದೇ ಅಧಿಕಾರಿಗಳು ನಿರ್ಣಯ ಕೈಗೊಳ್ಳುತ್ತಿದ್ದಾರೆ ಎಂದು ಸದಸ್ಯರು ಆರೋಪ ಮಾಡುತ್ತಿದ್ದಾರೆ. ಕಳೆದ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಶಾಸಕರ ನಿಧಿಯಲ್ಲಿ ಉಳಿಕೆ ಹಣವಿತ್ತು. ಜೊತೆಗೆ 14ನೇ ಹಣಕಾಸು ಯೋಜನೆಯ ಹಣ ಸಮರ್ಪಕವಾಗಿ ಬಳಕೆ ಮಾಡಿಲ್ಲ. ವಿವಿಧ ಬಡಾವಣೆಗಳಲ್ಲಿ ರಸ್ತೆ ಕಾಮಗಾರಿ ಆರಂಭವಾಗಿದ್ದು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಜನರು ಸ್ಥಳೀಯ ನಗರಸಭೆ ಸದಸ್ಯರನ್ನು ಪ್ರಶ್ನೆ ಮಾಡುತ್ತಿದ್ಧಾರೆ. ಸದಸ್ಯರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರು ಹೇಳುತ್ತಾರೆ.

ಜಲಮಂಡಳಿ ಅಧಿಕಾರಿಗಳು ನಡೆಸಿರುವ ಒಳಚರಂಡಿ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲೂ ಸಾಧ್ಯವಾಗುತ್ತಿಲ್ಲ. ಜೊತೆಗೆ ಕೇಂದ್ರ ಪುರಸ್ಕೃತ ಅಮೃತ್‌ ಯೋಜನೆ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿವೆ. ಅಧಿಕಾರಿಗಳು ಸದಸ್ಯರನ್ನು ದೂರವಿಟ್ಟು ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮೀಸಲಾತಿ ಗೊಂದಲ ಬಗೆಹರಿಯುವವರೆಗೂ ಸದಸ್ಯರು ಅಧಿಕಾರಿಗಳು ಅಸಹಾಯಕರಾಗಿಯೇ ಉಳಿಯಬೇಕಾಗಿದೆ. ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಲ್ಲೂ ಇದೇ ಪರಿಸ್ಥಿತಿ ಇದ್ದು ಎಲ್ಲರ ಚಿತ್ತ ಹೈಕೋರ್ಟ್‌ ಆದೇಶದತ್ತ ನೆಟ್ಟಿದೆ.

ಸದಸ್ಯರ ಅಧಿಕಾರಾವಧಿ 6 ವರ್ಷ!

ನಿಯಮಾನುಸಾರ ನಗರಸಭೆ ಅಧ್ಯಕ್ಷ ಅಧಿಕಾರ ವಹಿಸಿಕೊಂಡು ಮೊದಲ ಸಾಮಾನ್ಯ ಸಭೆ ನಡೆಸಿದ ದಿನದಿಂದ ಸದಸ್ಯರ ಅಧಿಕಾರವಧಿ ಐದು ವರ್ಷಕ್ಕೆ ನಿಗದಿಯಾಗಿರುತ್ತದೆ. ಆದರೆ ಮಂಡ್ಯ ನಗರಸಭೆಯಲ್ಲಿ ಅಧ್ಯಕ್ಷರೂ ಇಲ್ಲ, ಸಾಮಾನ್ಯ ಸಭೆಯೂ ಇಲ್ಲ. ಹೀಗಾಗಿ ಈಗ ಎಲ್ಲಾ ಸದಸ್ಯರ ಅಧಿಕಾರವಧಿ 6 ವರ್ಷಕ್ಕೇರಿದೆ. ಒಂದು ವರ್ಷ ಉಚಿತವಾಗಿ ಸಿಕ್ಕಿದೆ.

‘ಇದರಲ್ಲಿ ಖುಷಿ– ನೋವು ಎರಡೂ ಇವೆ. ಒಂದು ವರ್ಷ ಹೆಚ್ಚಿಗೆ ಜನಸೇವೆ ಮಾಡುವ ಖುಷಿ ಒಂದೆಡೆಯಾದರೆ, ಜನರ ಸಂಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಇನ್ನೊಂದೆಡೆ ಇದೆ’ ಎಂದು ನಗರಸಭೆ 26ನೇ ವಾರ್ಡ್‌ ಸದಸ್ಯ ಶ್ರೀಧರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.