
ಮಂಡ್ಯ: ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸದಂತೆ ಆಗ್ರಹಿಸಿ ನಗರದ ಸರ್‌ಎಂ.ವಿ.ಪ್ರತಿಮೆ ಎದುರು ಎಸ್‌ಡಿಎಂಸಿ ಸಂಘ, ರೈತ ಸಂಘದ ಕಾರ್ಯಕರ್ತರು ನಡೆಸುತ್ತಿದ್ದ ಮೂರನೇ ದಿನದ ಉಪವಾಸ ಸತ್ಯಾಗ್ರಹವು ಸೋಮವಾರ ಪಂಜಿನ ಮೆರವಣಿಗೆ ನಡೆಸುವ ಮೂಲಕ ಮುಕ್ತಾಯಗೊಳಿಸಲಾಯಿತು.
ಶಾಲಾ ಶಿಕ್ಷಣ ಇಲಾಖೆಯ ಲೋಗೋವನ್ನು ಸುಡುವ ಮೂಲಕ ಸತ್ಯಾಗ್ರಹ ಸ್ಥಳದಿಂದ ಜೆ.ಸಿ.ವೃತ್ತದವರೆಗೆ ಪಂಜಿನ ಸಂಜೆ ಮೆರವಣಿಗೆ ನಡೆಸಿದ ವಿವಿಧ ಸಂಘಟನೆಯ ಮುಖಂಡರು ಹಾಗೂ ಪ್ರತಿಭಟನಾಕಾರರು ಉಪವಾಸ ಸತ್ಯಾಗ್ರಹ ಮುಕ್ತಾಯಗೊಳಿಸುವ ಮೂಲಕ ಸರ್ಕಾರಿ ಶಾಲೆ ಉಳಿಸುವುದು ಹಾಗೂ ವಿಲೀನಗೊಳಿಸುವುದನ್ನು ತಪ್ಪಿಸಬೇಕೆಂಬ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಡಿ.30ರ ಗಡುವು ನೀಡಿದರು.
ಮಾತು ತಪ್ಪಿದರೆ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವಕ್ಕೆ ಅಡ್ಡಿಪಡಿಸುವುದು ಹಾಗೂ ಒಂದು ಕೈಯಲ್ಲಿ ರಾಷ್ಟ್ರಧ್ವಜ, ಮತ್ತೊಂದು ಕೈಯಲ್ಲಿ ಸರ್ಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟಿಸಲಾಗುವುದು ಎಂಬ ಎಚ್ಚರಿಕೆ ನೀಡಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ‘ಕೇರಳ ಮಾದರಿಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸಾಗಬೇಕು. ಶಾಲೆಗಳನ್ನು ವಿಲೀನ ಅಥವಾ ಮಾರಾಟ ಮಾಡಬಾರದು, ಗುಣಾತ್ಮಕವಾಗಿ ಕಂಪ್ಯೂಟರೀಕರಣ ಸೇರಿದಂತೆ ಗುಣಮಟ್ಟದ ಶಿಕ್ಷಣ ನೀಡುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ರೈತ ಸಂಘ(ಮೂಲ ಸಂಘಟನೆ)ದ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಮೂರು ದಿನಗಳ ಉಪವಾಸ ಸತ್ಯಾಗ್ರಹ ಮಾಡಲಾಯಿತು. ಸರ್ಕಾರಕ್ಕೆ ಎಲ್‌ಕೆಜಿ ಯಿಂದ ಐದನೇ ತರಗತಿವರೆಗೆ ಸಿಬಿಎಸ್‌ಇ ಸಿಲಬಸ್‌ನಲ್ಲಿ ಶಿಕ್ಷಣ ನೀಡಬೇಕು. ಆರನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೂ ನವೋದಯ ವಸತಿ ಶಾಲೆಯಂತೆ ಶಿಕ್ಷಣ ನೀಡಬೇಕು. ಇಡೀ ರಾಜ್ಯದಲ್ಲಿ ಏಕರೂಪ ಶಿಕ್ಷಣ ಜಾರಿ ಮಾಡಬೇಕೆಂಬ ಹಲವು ಬೇಡಿಕೆಯನ್ನು ಸರ್ಕಾರ ಈಡೇರಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಶಿವಳ್ಳಿ ಚಂದ್ರು, ಸಂತೋಷ್‌ಗೌಡ, ರೇವಣ್ಣ, ಧನುಷ್‌ಗೌಡ, ಎಂ.ಬಿ.ನಾಗಣ್ಣಗೌಡ, ಪೂರ್ಣಿಮಾ, ಫಯಾಜ್, ಅನಿಲ್‌ಗೌಡ, ಜವರೇಗೌಡ, ಚನ್ನಬಸಪ್ಪ ಮೈಸೂರು ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.