ಭಾರತೀನಗರ: ಸಮಾಜ ಸೇವೆಗೆ ಪ್ರೇರಣೆ ನೀಡಿದ ತಂದೆ ಮಂಜುನಾಥ್ ಅವರ ಪುತ್ಥಳಿಯನ್ನು ಪುತ್ರರಾದ ಡಾ.ಮಾದೇಶ್ ಮತ್ತು ಡಾ.ಕಿರಣ್‌ಕುಮಾರ್ ಅವರು ಮದ್ದೂರು ತಾಲ್ಲೂಕಿನ ಕಾಡುಕೊತ್ತನಹಳ್ಳಿಯಲ್ಲಿ ನಿರ್ಮಿಸಿದ್ದು, ಶನಿವಾರ ಅನಾವರಣಗೊಳಿಸಲಾಯಿತು.
ಗ್ರಾಮದ ನಿವೃತ್ತ ಆರೋಗ್ಯ ನಿರೀಕ್ಷಕ ಮಂಜುನಾಥ್ ಅವರ ಪುತ್ರರಾದ, ಮಂಡ್ಯದ ಎಸ್.ಡಿ. ಜಯರಾಂ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಾದೇಶ್, ಹಾಗೂ ಬೆಸಗರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಕಿರಣ್‌ಕುಮಾರ್ ಸಹೋದರರು ₹8 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ತಮ್ಮದೇ ಜಮೀನಿನಲ್ಲಿ ತಂದೆಯ ಪುತ್ಥಳಿ, ಮಂಟಪ ನಿರ್ಮಿಸಿದ್ದಾರೆ.
ಕಳೆದ ವರ್ಷ ನಿಧನರಾದ ತಂದೆಯ ನೆನಪಿನಲ್ಲಿ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ನಿರ್ಧರಿಸಿದ ಸಹೋದರರರು, ಈವರೆಗೆ 80ಕ್ಕೂ ಹೆಚ್ಚು ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿದ್ದಾರೆ.
‘ಅಪ್ಪನ ಸವಿನೆನಪು’ ಕಾರ್ಯಕ್ರಮದಡಿ ಶನಿವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಆಯೋಜಿಸಿದ್ದರು. ಡಾ.ಮಾದೇಶ್ ಗಾಯಕರಾಗಿರುವುದರಿಂದ ಜನಪದ, ರಸಮಂಜರಿ ಕಾರ್ಯಕ್ರಮಗಳೊಂದಿಗೆ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲಾ ಗಾಯಕರ ಟ್ರಸ್ಟ್, ಎಸ್.ಡಿ.ಜಯರಾಂ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದರು. ಶಿಬಿರದಲ್ಲಿ ನೂರಾರು ಬಡ ಜನರು ಆರೋಗ್ಯ ತಪಾಸಣೆಗೊಳಪಟ್ಟರು.
ವಿಧಾನಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ, ಮಳವಳ್ಳಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ, ರೋಗಶಾಸ್ತ್ರಜ್ಞ ಡಾ.ಚಂದ್ರಶೇಖರ್, ಕೀಲು ಮತ್ತು ಮೂಳೆ ತಜ್ಞ ಡಾ.ಚುಂಚೇಶ್‌ಕುಮಾರ್, ಕೆ.ಎಂ.ದೊಡ್ಡಿ ಸಿಎಚ್‌ಸಿಯ ವೈದ್ಯ ಡಾ.ಅರ್ಜುನ್, ಜಿ.ಪಂ ಮಾಜಿ ಅಧ್ಯಕ್ಷ ಬಿ.ಬಸವರಾಜು, ಪ್ರಖ್ಯಾತ ಗಾಯಕ ಮಳವಳ್ಳಿ ಡಾ.ಮಹದೇವಸ್ವಾಮಿ, ಗಾಯಕ ಯರಹಳ್ಳಿ ಪುಟ್ಟಸ್ವಾಮಿ ಪಾಲ್ಗೊಂಡಿದ್ದರು.
ಸಮಾಜ ಸೇವೆಯ ಭಾಗವಾದ ಪುತ್ಥಳಿ ಸಮುದಾಯ ಆರೋಗ್ಯ ರಕ್ಷಣೆಗೆ ಒತ್ತು
ತಂದೆ ಮಂಜುನಾಥ್ ಅವರು ಸಮಾಜಮುಖಿ ಮತ್ತು ಕಲಾ ಪೋಷಕರಾಗಿದ್ದರು. ನಮ್ಮನ್ನು ವೈದ್ಯರನ್ನಾಗಿ ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಹೀಗಾಗಿ ಪುತ್ಥಳಿ ಸ್ಥಾಪಿಸಿದ್ದೇವೆ – ಡಾ.ಮಾದೇಶ್
ಎಸ್ಪಿ ಬಾಲದಂಡಿ ಪ್ರಶಂಸೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿ ’ತಾಯಿಯ ಪ್ರೀತಿಯಲ್ಲಿ ತಂದೆಯ ನೆರಳಲ್ಲಿ ಬೆಳೆದ ಮಕ್ಕಳು ಸದಾ ಆದರ್ಶಪ್ರಾಯರಾಗಿರುತ್ತಾರೆ. ತಂದೆ– ತಾಯಂದಿರು ಕಾಲವಾದ ನಂತರವೂ ಅವರ ಹೆಸರಿಗೆ ಕಳಂಕ ಬರದಂತೆ ನಡೆದುಕೊಳ್ಳುವ ಮಕ್ಕಳ ಸಂಖ್ಯೆ ಕಡಿಮೆ. ಇದಕ್ಕೆ ಡಾ.ಮಾದೇಶ್ ಸಹೋದರರು ಹೊರತಾಗಿದ್ದಾರೆ’ ಎಂದು ಪ್ರಶಂಸಿಸಿದರು. ‘ಆರೋಗ್ಯ ಕ್ಷೇತ್ರದಲ್ಲಿದ್ದುಕೊಂಡು ಬಡಜನರ ಮೇಲೆ ಕಾಳಜಿಯಿಟ್ಟು ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವ ಸಹೋದರರ ಕಾರ್ಯ ಶ್ಲಾಘನೀಯ. ಅವರ ಕಳಕಳಿಯನ್ನು ಅರಿತು ಗ್ರಾಮೀಣ ಜನ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.