ಮಂಡ್ಯ: ‘2025- 26ನೇ ಸಾಲಿನಲ್ಲಿ 5 ಸಾವಿರ ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುವ ಗುರಿ ಹೊಂದಲಾಗಿದೆ’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣ (ಎ.ಬಿ.ಸಿ ಮತ್ತು ಎ.ಆರ್.ವಿ) ನೀಡುವ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಈ ಬಾರಿ ಮಂಡ್ಯ ನಗರಸಭೆಯಲ್ಲಿ ₹60 ಲಕ್ಷವನ್ನು ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಸ್ಥಳೀಯ ಸಂಸ್ಥೆಗಳು ತಮ್ಮ ಆಯವ್ಯಯದಲ್ಲಿ ಶೇ 2ರಷ್ಟು ಹಣವನ್ನು ಬೀದಿ ನಾಯಿಗಳಿಗೆ ಎ.ಬಿ.ಸಿ ಹಾಗೂ ಎ.ಆರ್.ವಿ ಚಿಕಿತ್ಸೆಗೆ ಮೀಸಲಿಡಲು ಅವಕಾಶವಿದೆ. ಪಶು ಸಂಗೋಪನೆ ಇಲಾಖೆ ಅವರು ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಹಣ ಮೀಸಲಿಡಲು ಕ್ರಮ ವಹಿಸಿ ಎಂದರು.
ಪ್ರಾಣಿಗಳನ್ನು ಕೆಣಕುವ ಕೃತ್ಯಗಳನ್ನು ಮಾಡಬಾರದು ಎಂಬುದನ್ನು ಸಹ ತಿಳಿಸಿದರು.
ಬೀದಿನಾಯಿ ಕಡಿತಕ್ಕೆ ಒಳಗಾಗಿರುವವರ ಅಂಕಿ ಅಂಶಗಳು ಸರಿಯಾಗಿ ತಾಳೆಯಾಗುತ್ತಿಲ್ಲ. ಕಡಿತಕ್ಕೆ ಒಳಗಾಗಿರುವವರಿಗೆ ನೀಡಲಾಗುವ ಡೋಸ್‌ಗಳು ಹಾಗೂ ವ್ಯಕ್ತಿಗಳ ಸಂಖ್ಯೆಯನ್ನು ತಾಳೆ ಮಾಡಿ ವರದಿ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಶಿವಲಿಂಗಯ್ಯ, ಪಶುವೈದ್ಯ ಡಾ.ಪ್ರವೀಣ್ ಇದ್ದರು.
ಶಾಲಾ ವಿದ್ಯಾರ್ಥಿಗಳು ನಾಯಿ ಕಡಿತಕ್ಕೆ ಒಳಗಾದರೆ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವಂತೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿಕುಮಾರ, ಜಿಲ್ಲಾಧಿಕಾರಿ, ಮಂಡ್ಯ
‘ಆಯವ್ಯಯದಲ್ಲಿ ಚಿಕಿತ್ಸೆಗೆ ಹಣ ಮೀಸಲಿಡಿ’
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ ಮಾತನಾಡಿ ಹೆಚ್ಚು ಬೀದಿ ನಾಯಿಗಳು ಇರುವ ಸ್ಥಳಗಳನ್ನು ಗುರುತಿಸಿ ಸದರಿ ವ್ಯಾಪ್ತಿಯ ಗ್ರಾಮ ಪಂಚಾಯತಿಯ ಆಯವ್ಯಯದಲ್ಲಿ ಎ.ಬಿ.ಸಿ ಹಾಗೂ ಎ.ಆರ್.ವಿ ಚಿಕಿತ್ಸೆಗೆ ಹಣ ಮೀಸಲಿಡಿ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಕುರಿತಂತೆ ಯೋಜನೆ ರೂಪಿಸಿ ಎಂದರು. ಕಸಾಯಿ ಖಾನೆ ಪ್ರವಾಸಿ ಸ್ಥಳಗಳು ಆರತಿ ಉಕ್ಕಡ ಆದಿ ಚುಂಚನಗಿರಿ ಸೇರಿದಂತೆ ಬೀದಿ ನಾಯಿಗಳಿಗೆ ಹೆಚ್ಚು ಆಹಾರ ಸಿಗುವ ಸ್ಥಳಗಳನ್ನು ಗುರುತಿಸಿ. ಬೀದಿ ನಾಯಿಗಳು ಹೆಚ್ಚಿರುವ ಸ್ಥಳಗಳಲ್ಲಿ ಎ.ಬಿ.ಸಿ ಹಾಗೂ ಎ.ಆರ್.ವಿ ಚಿಕಿತ್ಸೆಗೆ ಆದ್ಯತೆ ನೀಡಿ ಕ್ರಮ ಕೈಗೊಳ್ಳಿ ಎಂದರು.
‘ಮಕ್ಕಳ ರಕ್ಷಣಾ ಆಯೋಗಕ್ಕೆ ವರದಿ’
ಮಂಡ್ಯ ಜಿಲ್ಲೆಯಲ್ಲಿ ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ 6900 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದು ಇವರಲ್ಲಿ ಮಕ್ಕಳೇ ಅತಿ ಹೆಚ್ಚು ಬಾಧಿತರಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪಶುಸಂಗೋಪಾನ ಇಲಾಖೆ ಉಪನಿರ್ದೇಶಕರು ಜಿಲ್ಲಾ ಆರೋಗ್ಯಾಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಗರಸಭೆ ಪೌರಾಯುಕ್ತರು ಹಾಗೂ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಸೂಚಿಸಲಾಗಿದೆ. ಕೈಗೊಂಡ ಕ್ರಮಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ವರದಿ ಸಲ್ಲಿಸಬೇಕಿದೆ. ಪ್ರಜಾವಾಣಿಯಲ್ಲಿ ‘ನಾಯಿ ಕಡಿತ; ತತ್ತರಿಸಿದ ಮಕ್ಕಳು’ ಶೀರ್ಷಿಕೆಯ ವಿಶೇಷ ವರದಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳಿಂದ ನಲುಗುತ್ತಿರುವ ಮಕ್ಕಳ ಬಗ್ಗೆ ಸವಿಸ್ತಾರ ವರದಿ ಪ್ರಕಟಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.