ADVERTISEMENT

ಮಂಡ್ಯ | ಬೆಂಬಲ ಬೆಲೆ, ಕನಿಷ್ಠ ಕೂಲಿ ನೀಡಿ: ಪುಟ್ಟಮಾದು ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 13:55 IST
Last Updated 20 ಜೂನ್ 2025, 13:55 IST
ಮಂಡ್ಯ ನಗರದ ಕೆ.ವಿ.ಎಸ್‌ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರಿಗೆ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಾಗಾರದಲ್ಲಿ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿದರು
ಮಂಡ್ಯ ನಗರದ ಕೆ.ವಿ.ಎಸ್‌ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರಿಗೆ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಾಗಾರದಲ್ಲಿ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿದರು   

ಮಂಡ್ಯ: ‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೃಷಿ ಕ್ಷೇತ್ರವನ್ನೇ ನಿರ್ಲಕ್ಷ್ಯ ಮಾಡಿವೆ. ಕನಿಷ್ಠ ಬೆಂಬಲ ಬೆಲೆ (ಎಂ.ಎಸ್‌.ಪಿ) ಮತ್ತು ಕನಿಷ್ಠ ಕೂಲಿಯನ್ನು ನೀಡದಿದ್ದರೆ ಈ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಾಗುವುದಿಲ್ಲ’ ಎಂದು ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ. ಪುಟ್ಟಮಾದು ಅಭಿಪ್ರಾಯಪಟ್ಟರು. 

ನಗರದ ಕರ್ನಾಟಕ ಸಂಘದ ಕೆ.ವಿ.ಎಸ್‌ ಭವನದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರಿಗೆ ಎರಡು ದಿನ ಏರ್ಪಡಿಸಿರುವ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಯಂತ್ರಗಳು ಬಂದ ಕಾರಣ ಕೂಲಿಕಾರರಿಗೆ ವಾರ್ಷಿಕವಾಗಿ ಉದ್ಯೋಗ ಖಾತ್ರಿ ಕೆಲಸ ಕಡಿಮೆ ಸಿಗುತ್ತಿದೆ. ಕೃಷಿ ಕ್ಷೇತ್ರವನ್ನು ನೋಡಿದರೆ ಬೆಳೆಗೆ ಔಷಧ ಸಿಂಪಡಿಸಲು ಡ್ರೋನ್‌ ಬಳಸಲಾಗುತ್ತಿದೆ. ಭತ್ತ, ರಾಗಿ, ಜೋಳ ಕೊಯ್ಲು ಮಾಡಲು ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಯಂತ್ರಗಳ ನಿರ್ವಹಣೆ, ಬಾಡಿಗೆ ಎಲ್ಲವನ್ನೂ ಲೆಕ್ಕ ಹಾಕಿದರೆ ಖರ್ಚು ದುಬಾರಿಯಾಗುತ್ತದೆ. ಕೂಲಿಕಾರರಿಗೆ ಭರಿಸುವ ವೆಚ್ಚ ಕಡಿಮೆ ಇದೆ ಎಂಬುದು ಗೊತ್ತಿದ್ದರೂ ಏನೂ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ವಿಷಾದಿಸಿದರು.

ADVERTISEMENT

‘2000ನೇ ಸಾಲಿನಿಂದ ಈಚೆಗೆ ರೈತ ಆತ್ಮಹತ್ಯೆಗಳು ಕಂಡು ಬಂದವು. ಆ ನಂತರ 2014ರಲ್ಲಿ ಕೃಷಿ ಕೂಲಿಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಾಖಲೆ ಮಾಡಲಾಯಿತು. 6,710 ಕೂಲಿಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಯಿತು’ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ಎನ್‌. ನಾಗರಾಜು, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ. ಶಿವಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್‌, ಮುಖಂಡರಾದ ಎಚ್‌.ಎಸ್‌. ಮಂಜುಳಾ, ಲಕ್ಷ್ಮೀ ಕುಂತೂರು, ವೈ.ಕೆ. ಗೋಪಾಲಸ್ವಾಮಿ ಭಾಗವಹಿಸಿದ್ದರು.

ಪ್ರಶ್ನಿಸುವುದನ್ನು ಕಲಿಯಿರಿ: ಕೃಷ್ಣೇಗೌಡ

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್‌. ಕೃಷ್ಣೇಗೌಡ ಮಾತನಾಡಿ ‘ಕೃಷಿ ಕೂಲಿಕಾರರು ಮಾತನಾಡುವುದನ್ನಾದರೂ ಕಲಿಯಬೇಕು. ಏಕೆಂದರೆ ಈ ವ್ಯವಸ್ಥೆಯನ್ನು ಪ್ರಶ್ನೆ ಮಾಡುವ ಮನೋಭಾವ ಎಲ್ಲರಲ್ಲಿಯೂ ಬರಬೇಕು. ಹಲವು ವರ್ಷಗಳ ಹಿಂದೆ ₹80ರಷ್ಟಿದ್ದ ಕೂಲಿ ಈಗ ₹370 ಆಗಿದೆ. ಸದ್ಯಕ್ಕೆ ನಾಲ್ಕು ಪಟ್ಟು ಹೆಚ್ಚಾಯಿತು. ಇದು ಹೆಚ್ಚಾಗಲು ನೀವು ಕೇಳಿದ್ದಕ್ಕೆ ಮಾತ್ರ ಕೂಲಿ ಹಣ ಹೆಚ್ಚಾಗಿದೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.