ADVERTISEMENT

ಮಂಡ್ಯ ವಿವಿ ಗೊಂದಲ; ಅರ್ಥಶಾಸ್ತ್ರ ಪರೀಕ್ಷೆಗೆ ಇಂಗ್ಲಿಷ್‌ನಲ್ಲಿ ಪ್ರಶ್ನೆಪತ್ರಿಕೆ!

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 6:23 IST
Last Updated 3 ಆಗಸ್ಟ್ 2024, 6:23 IST
ಮಂಡ್ಯ ವಿ.ವಿ. ಮೌಲ್ಯಮಾಪನ ಕುಲಸಚಿವ ಎಚ್‌.ಜಿ. ರಂಗರಾಜು ಅವರ ಜೊತೆ ವಿದ್ಯಾರ್ಥಿಗಳ ಸಮಸ್ಯೆ ಕುರಿತು ಕನ್ನಡ ಸೇನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌ ಮಾತುಕತೆ ನಡೆಸಿದರು 
ಮಂಡ್ಯ ವಿ.ವಿ. ಮೌಲ್ಯಮಾಪನ ಕುಲಸಚಿವ ಎಚ್‌.ಜಿ. ರಂಗರಾಜು ಅವರ ಜೊತೆ ವಿದ್ಯಾರ್ಥಿಗಳ ಸಮಸ್ಯೆ ಕುರಿತು ಕನ್ನಡ ಸೇನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌ ಮಾತುಕತೆ ನಡೆಸಿದರು    

ಮಂಡ್ಯ: ಎಂ.ಎ. ಅರ್ಥಶಾಸ್ತ್ರ ವಿಭಾಗದ ದ್ವಿತೀಯ ಸೆಮಿಸ್ಟರ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಕನ್ನಡದಲ್ಲಿ ನೀಡುವ ಬದಲು ಇಂಗ್ಲಿಷ್‌ ಭಾಷೆಯಲ್ಲಿ ನೀಡಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಮಂಡ್ಯ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಎಚ್‌.ಜಿ. ರಂಗರಾಜು ಅವರಲ್ಲಿ ಶುಕ್ರವಾರ ಅಳಲು ತೋಡಿಕೊಂಡರು.

ನಗರದ ಮಂಡ್ಯ ವಿ.ವಿ.ಯಲ್ಲಿ ಎಂ.ಎ ಮೊದಲ ಸೆಮಿಸ್ಟರ್‌ನ ಕನ್ನಡ ವಿಷಯದ ಪ್ರಶ್ನೆ ಪತ್ರಿಕೆಯನ್ನು ಇಂಗ್ಲಿಷ್‌ನಲ್ಲಿ ನೀಡಲಾಗಿತ್ತು. ಈ ವಿಷಯವನ್ನು ವಿ.ವಿ ಕುಲಪತಿ ಅವರ ಗಮನಕ್ಕೆ ತರಲಾಗಿತ್ತು. ಆದರೂ ಎರಡನೇ ಸಮಿಸ್ಟರ್‌ನ ಕನ್ನಡ ಭಾಷೆಯ ಪ್ರಶ್ನೆ ಪತ್ರಿಕೆಯನ್ನು ಮತ್ತೆ ಇಂಗ್ಲಿಷ್‌ನಲ್ಲಿ ನೀಡುವ ಮೂಲಕ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಎಂ.ಎ ಅರ್ಥಶಾಸ್ತ್ರ ವಿಷಯಕ್ಕೆ ಒಟ್ಟು 17 ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ ಅವರಲ್ಲಿ ಮೂರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. ಈ ಕಾರಣಕ್ಕೆ ಅವರು ಕಾಲೇಜಿಗೆ ಬರುತ್ತಿಲ್ಲ. ನಾವು ಕೂಡ ಈ ಬಾರಿ ಅನುತ್ತೀರ್ಣರಾದರೆ ವ್ಯಾಸಂಗವನ್ನು ನಿಲ್ಲಿಸುವ ಪರಿಸ್ಥಿತಿ ಬರುತ್ತದೆ. ಮನೆಯಲ್ಲಿ ಪೋಷಕರು ಸಾಲ ಮಾಡಿ ಕಾಲೇಜಿನ ಶುಲ್ಕ ಪಾವತಿ ಮಾಡಿದ್ದಾರೆ. ಇವರಿಗೇನು ಹೇಳುವುದು ಎಂದು ವಿದ್ಯಾರ್ಥಿಗಳಾದ ಎಚ್‌.ಜೆ. ನರೇಂದ್ರ, ಎಂ.ವಿನುತಾ, ಮನೋಜ್‌, ಜಯಶೇಖರ್ ಆರೋಪಿಸಿದರು.

ADVERTISEMENT

‘ಪ್ರಥಮ ಸೆಮಿಸ್ಟರ್‌ನಲ್ಲಿಯೇ ಅಧ್ಯಯನಕ್ಕೆ ತಕ್ಕಂತಹ ವಿಷಯದ ಬಗ್ಗೆ ಗ್ರಂಥಾಲಯದಲ್ಲಿ ಮಾಹಿತಿಯೇ ಸಿಗಲಿಲ್ಲ. ಹಾಗಾಗಿ ಕೆಲವು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದೇವೆ. ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡುವಂತೆ ನಡೆದುಕೊಳ್ಳುತ್ತಿರುವ ವಿ.ವಿ. ನಡೆ ಸರಿಯಲ್ಲ’ ಎಂದು ವಿದ್ಯಾರ್ಥಿಗಳಾದ ಎಚ್‌.ಎಸ್‌. ನಂಜುಂಡಸ್ವಾಮಿ, ದರ್ಶನ್ ಕುಮಾರ್, ಮನೋಜ್‌, ಪ್ರಜ್ವಲ್‌, ಕೆ.ಎಂ.ಸುಚಿತ್ರಾ, ಪೂರ್ಣಿಮಾ, ಜಯಶೀಲಾ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ವಿವಿ ಮೌಲ್ಯಮಾಪನ ಕುಲಸಚಿವ ಎಚ್‌.ಜಿ.ರಂಗರಾಜು ಮಾತನಾಡಿ, ‘ಅರ್ಥಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಗೆ ಸಂಬಂಧ ಪಟ್ಟಂತೆ ಮೈಸೂರಿನ ವಿವಿಯ ಮಾದರಿಯನ್ನು ಅನುಸರಿಸುತ್ತಿದ್ದೆವು. ಮಂಡ್ಯ ವಿವಿಯಾದ ನಂತರ ಇಂಗ್ಲಿಷ್‌ ಪ್ರಶ್ನೆ ಪತ್ರಿಕೆ ಜೊತೆಗೆ ಕನ್ನಡ ಪ್ರಶ್ನೆ ಪತ್ರಿಕೆಯನ್ನು ನೀಡಲು ನಿರ್ಧರಿಸಿದ್ದೆವು. ಈಗ ಮೈಸೂರು ವಿವಿ ಪ್ರಶ್ನೆ ಪತ್ರಿಕೆ ಬಂದಿರುವುದರಿಂದ ಅದನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಈ ಗೊಂದಲ ಸರಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.

ಕನ್ನಡ ಸೇನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌ ಮಾತನಾಡಿ, ‘ಕನ್ನಡದಲ್ಲಿ ಪಾಠ ಮಾಡಿ ಈಗ ಇಂಗ್ಲಿಷ್‌ ಪ್ರಶ್ನೆಪತ್ರಿಕೆ ನೀಡಿ ವಿದ್ಯಾರ್ಥಿಗಳಿಗೆ ತೊಂದರೆ ಮಾಡಿದ್ದಾರೆ. ಇದನ್ನು ಸರಿಪಡಿಸದೇ ಹೋದರೆ ಮುಂದಿನ ನಾಲ್ಕು ವಿಷಯಗಳ ಪರೀಕ್ಷೆಯನ್ನು ನಿಷಿದ್ಧ ಮಾಡಿ ಮರು ಪರೀಕ್ಷೆ ಮಾಡುವಂತೆ ಒತ್ತಾಯಿಸಿ ಆಗಸ್ಟ್ 5ರಂದು ಸೋಮವಾರ ವಿದ್ಯಾರ್ಥಿಗಳ ಜೊತೆ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಸಮಸ್ಯೆ ಮರುಕಳಿಸದಂತೆ ಕ್ರಮವಹಿಸುವೆ’

‘ಎರಡನೇ ಸೆಮಿಸ್ಟರ್‌ನ ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಬೋಧನೆ ಮಾಡಲಾಗಿರುತ್ತದೆ. ಅವರಿಗೆ ಕನ್ನಡದಲ್ಲಿ ಪ್ರಶ್ನೆಪತ್ರಿಕೆ ನೀಡಬೇಕಾಗಿತ್ತು. ಆದರೆ ಇಂಗ್ಲಿಷ್‌ ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿದೆ. ಈ ವಿಷಯವಾಗಿ ಬೋರ್ಡ್‌ ಆಫ್‌ ಎಕ್ಸಾಮಿನೇಷನ್‌ ಚೇರ್ಮನ್‌ ಜೊತೆ ಮಾತುಕತೆ ನಡೆಸಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಹಾಗೂ ಮುಂದೆ ಈ ರೀತಿ ಸಮಸ್ಯೆ ಮರುಕಳಿಸದಂತೆ ಎಚ್ಚರ ವಹಿಸುವೆ’ ಎಂದು ಮಂಡ್ಯ ವಿವಿ ಕುಲಪತಿ ಪುಟ್ಟರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.