
ಮಂಡ್ಯ: ‘ನೀವು ನೀಡುವ ಒಂದು ಮತವು ಸ್ಪರ್ಧಿಗಳ ಸೋಲು ಗೆಲುವು ನಿರ್ಧರಿಸುತ್ತದೆ. ಮತದಾನಿಂದ ಉತ್ತಮ ನಾಯಕನ ಆಯ್ಕೆ ಸಾಧ್ಯ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು’ ಎಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಜೆ.ಎನ್.ಸುಬ್ರಹ್ಮಣ್ಯ ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಪ್ರತಿಯೊಂದು ಮತಕ್ಕೂ ತನ್ನದೇ ಆದ ಮಹತ್ವವಿದೆ. ಮತದಾರರು ಚುನಾವಣೆ ನಡೆಯುವ ದಿನದಂದು ತಪ್ಪದೇ ಮತದಾನ ಮಾಡಬೇಕು. ಇದು ನಿಮ್ಮ ಜವಾಬ್ದಾರಿ. ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಸದಾವಕಾಶ’ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೇವಲ ಒಂದು ಮತದ ಅಂತರದಲ್ಲಿ ಒಬ್ಬ ಚುನಾವಣೆ ಪ್ರತಿನಿಧಿ ಗೆಲುವು ಸಾಧಿಸಿದ್ದಾರೆ. ಇದರ ಅರ್ಥ ಮತದಾನ ಮಹತ್ವ ಎಷ್ಟಿದೆ ಎಂಬುದನ್ನು ತೋರಿಸುತ್ತದೆ ಎಂದರು.
‘ಚುನಾವಣೆಗೆ ಮೂರು ಮುಕ್ಕಾಲು ತಿಂಗಳ ಇರುವ ಹಾಗೆಯೇ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಶಿಕ್ಷಕರಿಗೆ ವಿಶೇಷ ಅಧಿಕಾರ ಇರುತ್ತದೆ. ಮೂರು ಇಲಾಖೆಯವರು ಶ್ರಮವಹಿಸಿ ಚುನಾವಣೆಯಲ್ಲಿ ಭ್ರಷ್ಟಾಚಾರ ಆಗದಂತೆ ನೋಡಿಕೊಳ್ಳಬೇಕು. ಮತದಾನದ ಮಹತ್ವ ಅರಿತ ಮತದಾರರು ಇತರರಿಗೂ ಅರಿವು ಮೂಡಿಸಬೇಕು. ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದಂತೆ ಮತದಾನ ಮಾಡಿ’ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ‘ಭಾರತ ಪ್ರಜಾಪ್ರಭುತ್ವ ದೇಶ. ಮತದಾರರು ನಾಯಕರನ್ನು ಆಯ್ಕೆ ಮಾಡುವಾಗ ನೈತಿಕ ಚಿಂತನೆ ಇಟ್ಟುಕೊಂಡು ಪ್ರಜ್ಞಾವಂತಿಕೆಯಿಂದ ಆಯ್ಕೆ ಮಾಡಬೇಕು.ದೇಶ ಚೆನ್ನಾಗಿ ಇರಬೇಕಾದರೆ ಸೂಕ್ತ ನಾಯಕರನ್ನು ಆಯ್ಕೆ ಮಾಡುವುದು ಮುಖ್ಯ. ನಮ್ಮನ್ನಾಳುವ ನಾಯಕರು ಸರಿ ಇರಬೇಕು ಎಂದರೆ ಪ್ರಜೆಗಳು ಸರಿ ಇರಬೇಕು’ ಎಂದರು.
‘ನನ್ನ ಭಾರತ ನನ್ನ ಮತದಾನ’ ಎಂಬ ಘೋಷವಾಕ್ಯದಡಿ ಮತದಾರ ದಿನಾಚರಣೆ ಆಚರಿಸಲಾಗುತ್ತಿದೆ. ದೇಶದ ಯುವ ಜನತೆ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್ ನಂದಿನಿ, ‘ಸಂವಿಧಾನಿಕ ಕರ್ತವ್ಯಗಳಲ್ಲಿ ಮತದಾನವೂ ಒಂದಾಗಿದೆ’ ಎಂದರು.
ಬೂತ್ ಮಟ್ಟದ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಮತದಾನದ ಪ್ರತಿಜ್ಞಾವಿಧಿ ಭೋದಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಶಿವಲಿಂಗಯ್ಯ, ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಗ್ರೇಡ್-2 ಲಕ್ಷ್ಮೀ, ತಹಶೀಲ್ದಾರ್ ವಿಶ್ವನಾಥ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.