ADVERTISEMENT

ಗೋಡೆಯ ಮೇಲೆ ಸಕ್ಕರೆ ಜಿಲ್ಲೆಯ ಸಂಸ್ಕೃತಿ ಅನಾವರಣ

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ವರ್ಲಿ ಕಲೆ, ಚಿತ್ರಕಲಾ ಶಿಕ್ಷಕರ ಕೈಚಳಕ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 19:45 IST
Last Updated 22 ಜನವರಿ 2020, 19:45 IST
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಗೋಡೆ ಮೇಲೆ ಮೂಡಿರುವ ಸಕ್ಕರೆ ಕಾರ್ಖಾನೆ, ಆಲಮನೆ, ಎತ್ತಿನ ಗಾಡಿ ಚಿತ್ರ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಗೋಡೆ ಮೇಲೆ ಮೂಡಿರುವ ಸಕ್ಕರೆ ಕಾರ್ಖಾನೆ, ಆಲಮನೆ, ಎತ್ತಿನ ಗಾಡಿ ಚಿತ್ರ   

ಮಂಡ್ಯ: ಕೃಷಿ, ಜನ ಸಾಮಾನ್ಯರ ನಿತ್ಯದ ಜೀವನ, ಹಳ್ಳಿಗಾಡಿನ ಸೊಬಗು, ಪ್ರಕೃತಿ ಸೌಂದರ್ಯ, ಕೋಟೆ ಕೊತ್ತಲು, ಐತಿಹಾಸಿಕ ಸ್ಮಾರಕ, ಪಠ್ಯ ವಿಷಯ ಸೇರಿ ಜಿಲ್ಲೆಯ ಸಂಸ್ಕೃತಿ, ಪ್ರವಾಸಿ ತಾಣಗಳ ಚಿತ್ರಗಳು ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಗೋಡೆಗಳಲ್ಲಿ ಕಣ್ಮನ ಸೆಳೆಯುತ್ತಿವೆ.

ಚಿತ್ರಕಲಾ ಶಿಕ್ಷಕರ ಕುಂಚದಲ್ಲಿ ಮೂಡಿರುವ‌ ವರ್ಲಿ ಕಲೆ ನೋಡುಗರ ಮನಸೂರೆಗೊಳ್ಳುತ್ತಿದೆ. ಗೋಡೆಗಳ ಮೇಲೆ ಜಾನಪದ ಲೋಕವೇ ಅನಾವರಣಗೊಂಡಿದ್ದು, ಮಹಾನ್‌ ವ್ಯಕ್ತಿಗಳ ನುಡಿಮುತ್ತುಗಳು ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಗೌತಮ ಬುದ್ಧ, ನಾಲ್ವಡಿ ಕೃಷ್ಣರಾಜ ಒಡೆಯರ್‌, ಡಾ.ಬಿ.ಆರ್‌.ಅಂಬೇಡ್ಕರ್‌, ಸರ್ವಪಲ್ಲಿ ರಾಧಾಕೃಷ್ಣನ್‌, ಕಾವೇರಿ ಮಾತೆ ಚಿತ್ರಗಳು ಗಮನ ಸೆಳೆಯುತ್ತವೆ. ಸೋಮಾರಿತನವೇ ಮಾನವನ ಮೊದಲ ವೈರಿ, ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ, ನಿನಗೆ ನೀನೇ ಬೆಳಕು, ಸಮಯ ಮತ್ತು ಸಮುದ್ರದ ಅಲೆಗಳು ಯಾರನ್ನೂ ಕಾಯುವುದಿಲ್ಲ, ಮಾತು ಬೆಳ್ಳಿ ಮೌನ ಬಂಗಾರ ಸೇರಿದಂತೆ ಹತ್ತಾರು ನುಡಿಮುತ್ತುಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ನಿಲ್ಲುತ್ತವೆ.

ಹಳ್ಳಿ ಸೊಗಡು ಅನಾವರಣ: ಮರೆಯಾಗುತ್ತಿರುವ ಹಳ್ಳಿಗಾಡಿನ ಸಂಸ್ಕೃತಿಯ ನೆನಪುಗಳನ್ನು ಗೋಡೆಯ ಮೇಲೆ ಚಿತ್ರಿಸಲಾಗಿದೆ. ಲಾಟೀನು ದೀಪ, ಗುಂಡುಕಲ್ಲು, ಮಡಿಕೆಯಲ್ಲಿ ಮಹಿಳೆ ನೀರು ಹಿಡಿದುಕೊಂಡು ಹೋಗುತ್ತಿರುವುದು, ಬಾವಿಯಲ್ಲಿ ನೀರು ಸೇದುತ್ತಿರುವುದು, ರಾಗಿ ಬೀಸುತ್ತಿರುವ ಚಿತ್ರ, ಮಜ್ಜಿಗೆ ಕಡಿಯುತ್ತಿರುವ, ಎತ್ತಿನ ಗಾಡಿಯಲ್ಲಿ ಮೇಕೆ, ಅಮ್ಮ– ಮಗಳು, ನವಿಲು ಮರವೇರಿ ಕುಳಿತಿರುವ ಚಿತ್ರಗಳು ವಾಸ್ತವ ಲೋಕವನ್ನು ಸೃಷ್ಟಿಸುತ್ತವೆ.

ADVERTISEMENT

ಪ್ರವಾಸಿ ತಾಣಗಳ ಅನಾವರಣ: ಮೇಲುಕೋಟೆ ದೇವಾಲಯ, ಆದಿಚುಂಚನಗಿರಿ, ಕೆಆರ್‌ಎಸ್‌ನಲ್ಲಿನ ಕಾವೇರಿ ಮಾತೆ ಚಿತ್ರ, ಶ್ರೀರಂಗಪಟ್ಟಣ ಕೋಟೆ, ಕೊಕ್ಕರೆ ಬೆಳ್ಳೂರು, ಮದ್ದೂರಿನ ಶಿವಪುರ ಧ್ವಜ ಸತ್ಯಾಗ್ರಹ ಸೌಧ, ಮಳವಳ್ಳಿ ಸಿಡಿಹಬ್ಬ, ಏಷ್ಯಾದಲ್ಲೇ ಮೊದಲ ಬಾರಿಗೆ ಜಲವಿದ್ಯುತ್‌ ಕಂಡ ಶಿವನಸಮುದ್ರ ಜಲವಿದ್ಯುತ್‌ ಉತ್ಪಾದನೆ ಕೇಂದ್ರ, ಗಗನಚುಕ್ಕಿ ಜಲಪಾತದ ಚಿತ್ರಗಳು ಆಪ್ತವೆನಿಸುತ್ತದೆ.

ಜನಪದ ಕಲೆ: ಸೋಮನ ಕುಣಿತ, ಪೂಜಾ ಕುಣಿತ, ನಂದಿ ಧ್ವಜ ಕುಣಿತ, ಜೋಗಯ್ಯ, ಕಡಬಡಯ್ಯ, ವೀರಾಗಸೆ, ಜಾತ್ರೆಯಲ್ಲಿ ತೇರು ಎಳೆಯುವುದು, ಕೊಲೆ ಬಸವ ಸೇರಿದಂತೆ ಇನ್ನಿತರ ಜಾನಪದ ಕಲೆಗಳು ಮನಸೂರೆಗೊಳ್ಳುತ್ತವೆ. ಸಾಲು ಮರದ ತಿಮ್ಮಕ್ಕ ಅವರ ಭಾವಚಿತ್ರ, ಮರಗಳ ಸಾಲು ಅವರ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಸರ್ಕಾರಿ ಶಾಲೆಯಲ್ಲಿ ದೊರೆಯುವ ಉಚಿತ ಶಿಕ್ಷಣ, ಸೈಕಲ್‌ ವಿತರಣೆ ಮುಂದಾದ ವಿಚಾರಗಳು ಚಿತ್ರಕಲೆಯಲ್ಲಿ ಅನಾವರಣಗೊಳ್ಳುತ್ತವೆ. ಜೀರ್ಣಾಂಗ ವ್ಯವಸ್ಥೆ, ಹೃದಯದ ಚಿತ್ರದ ಮೂಲ ವಿಜ್ಞಾನ ಪಾಠವನ್ನೂ ಚಿತ್ರಿಸಲಾಗಿದೆ. ಗಧಾಯುದ್ಧ ಪ್ರಸಂಗ ಗಮನ ಸೆಳೆಯುತ್ತದೆ.

ಕಳೆದ ಸೆಪ್ಟೆಂಬರ್‌ ಹಾಗೂ ಡಿಸೆಂಬರ್‌ ತಿಂಗಳಿನಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗೆ ತರಬೇತಿಗಾಗಿ ಬಂದಿದ್ದ ಚಿತ್ರಕಲಾ ಶಿಕ್ಷಕರು ಈ ಚಿತ್ರ ಬಿಡಿಸಿದ್ದಾರೆ.‘ಆರಂಭದಲ್ಲಿ 33 ಶಿಕ್ಷಕರು ಐದು ದಿನಗಳಲ್ಲಿ, ನಂತರದ ಹತ್ತು ದಿನ 21 ಶಿಕ್ಷಕರು ಸಂಸ್ಥೆಯ ಗೋಡೆಗಳಿಗೆ ಹೊಸ ರೂಪ ನೀಡಿದ್ದಾರೆ. ಶಿಕ್ಷಕರಿಗೆ ಊಟ, ಟೀ, ಟಿಎ–ಡಿಎ ಖರ್ಚು ಮಾತ್ರ ನೀಡಲಾಗಿದೆ. ಒಟ್ಟು ₹85 ಸಾವಿರ ವೆಚ್ಚವಾಗಿದೆ’ ಎಂದು ಉಪನ್ಯಾಸಕ ರಾಜೇಂದ್ರ ಹೇಳಿದರು.

ಗೋಡೆ ಚಿತ್ರಗಳು ಹೊಸ ವಾತಾವರಣವನ್ನೇ ಸೃಷ್ಟಿಸಿವೆ. ತರಬೇತಿಗೆ ಬರುವ ಶಿಕ್ಷಕರು ಹೆಚ್ಚು ಆಸಕ್ತಿಯಿಂದ ಕಲಿಯುತ್ತಿದ್ದಾರೆ. ತಮ್ಮ ಶಾಲೆಯನ್ನೂ ಇದೇ ರೀತಿ ಮಾಡಬೇಕು ಎನ್ನುವ ಆಸೆ ಹುಟ್ಟಿಸಿದೆ
–ಶಿವಮಾದಪ್ಪ, ಪ್ರಾಂಶುಪಾಲರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.