ADVERTISEMENT

ಮನ್‌ಮುಲ್‌: 6 ಅಧಿಕಾರಿಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 14:09 IST
Last Updated 5 ಜೂನ್ 2021, 14:09 IST

ಮಂಡ್ಯ: ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ (ಮನ್‌ಮುಲ್‌) ನೀರು ಮಿಶ್ರಿತ ಹಾಲು ಸರಬರಾಜು ಪ್ರಕರಣದ ಸಂಬಂಧ ಶನಿವಾರ ಮನ್‌ಮುಲ್‌ ವ್ಯವಸ್ಥಾಪಕ ನಿರ್ದೇಶಕರನ್ನು ವರ್ಗಾವಣೆಗೊಳಿಸಿ, ಇತರ 6 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಸಂಗ್ರಹ ಮಾಡಿದ ಹಾಲಿನಲ್ಲಿ ನೀರು ಮಿಶ್ರಣ ಮಾಡಿ ಅದನ್ನು ಮನ್‌ಮುಲ್‌ಗೆ ಸರಬರಾಜು ಮಾಡುತ್ತಿರುವ ವಿಷಯ ವಾರದ ಹಿಂದೆ ಬೆಳಕಿಗೆ ಬಂದಿತ್ತು. ಗಟ್ಟಿ ಹಾಲನ್ನು ಖಾಸಗಿ ಡೇರಿಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಕಳಪೆ ಹಾಗೂ ಗುಣಮಟ್ಟದ ಹಾಲು ಬೇರ್ಪಡಿಸಲು ವಿಶೇಷ ರೀತಿಯಲ್ಲಿ ಟ್ಯಾಂಕರ್‌ ವಿನ್ಯಾಸ ಮಾಡಿರುವ ಅಂಶ ಪತ್ತೆಯಾಗಿತ್ತು.

ಖಾಸಗಿ ಡೇರಿಗೆ ಹಾಲು ಮಾರಾಟ ಮಾಡುತ್ತಿದ್ದ 4 ಟ್ಯಾಂಕರ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಮನ್‌ಮುಲ್‌ನಿಂದ ಗುತ್ತಿಗೆ ಪಡೆದು ಹಾಲು ಸರಬರಾಜು ಮಾಡುತ್ತಿದ್ದ ಟ್ಯಾಂಕರ್‌ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು. ನಾಗಮಂಗಲ ಡಿವೈಎಸ್‌ಪಿ ನವೀನ್‌ ಕುಮಾರ್‌ ಪ್ರಕರಣದ ತನಿಖೆ ನಡೆಸುತ್ತಿದ್ದರು.

ADVERTISEMENT

ಅವ್ಯವಹಾರ ಬೆಳಕಿಗೆ ಬಂದ ವಾರದ ನಂತರ ಮನ್‌ಮುಲ್‌ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್ ಅವರನ್ನು ತರಾತುರಿಯಲ್ಲಿ ವರ್ಗಾವಣೆ ಮಾಡಲಾಗಿದೆ. ಹಾಲಿನ ಗುಣಮಟ್ಟ ಪರೀಕ್ಷೆ ವೇಳೆ ತಪ್ಪೆಸಗಿರುವ ಆರೋಪದ ಮೇಲೆ ಇತರ 6 ಮಂದಿಯನ್ನು ಅಮಾನತು ಮಾಡಲಾಗಿದೆ. ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಶೋಕ್‌ ಅವರನ್ನು ನೇಮಕ ಮಾಡಲಾಗಿದೆ.

‘ಹಿಂದಿನ ಎಂ.ಡಿ ಚಂದ್ರಶೇಖರ್‌ ಅವರು ಅನಾರೋಗ್ಯ ಕಾರಣದಿಂದ ರಜೆಯಲ್ಲಿದ್ದರು. ಅವರನ್ನು ವರ್ಗಾವಣೆ ಮಾಡಲಾಗಿದ್ದು, ಘಟನೆಗೆ ಕಾರಣರಾದ ಇತರ 6 ಮಂದಿಯನ್ನು ಅಮಾನತು ಮಾಡಲಾಗಿದೆ’ ಎಂದು ಮನ್‌ಮುಲ್‌ ನಿರ್ದೇಶಕ ಎಚ್‌.ಟಿ.ಮಂಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.