ADVERTISEMENT

ನೇಮಕಾತಿ ಪ್ರಶ್ನಿಸಿ ನ್ಯಾಯಾಲಯದ ಮೊರೆ

ಮನ್‌ಮುಲ್‌ ಹಗರಣ ತನಿಖೆ ನಡೆಸಲು ಮನವಿ; ಮುಖ್ಯಮಂತ್ರಿ ಭೇಟಿಗೆ ರೈತ ಸಂಘ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 16:13 IST
Last Updated 24 ಆಗಸ್ಟ್ 2022, 16:13 IST
ಮಧುಚಂದನ್‌
ಮಧುಚಂದನ್‌   

ಮಂಡ್ಯ:ಮನ್‌ಮುಲ್‌ನಲ್ಲಿ ನಡೆದಿರುವ ಹಗರಣ ಹಾಗೂ ನೇಮಕಾತಿ ಪ್ರಕ್ರಿಯೆ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮುಖಂಡರೊಂದಿಗೆ ನಿಯೋಗ ತೆರಳಿ ಮನವಿ ನೀಡಲಾಗುವುದು. ಪ್ರಸ್ತುತ ನೇಮಕಾತಿ ಪರೀಕ್ಷೆಯನ್ನು ಪ್ರಶ್ನಿಸಿ ನ್ಯಾಯಾ ಲಯದಲ್ಲಿ ತಡೆಯಾಜ್ಞೆ ತರಲಾ ಗುವುದು ಎಂದು ರೈತ ಸಂಘದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಎಸ್‌.ಸಿ.ಮಧುಚಂದನ್‌ ಹೇಳಿದರು.

ಮಂಡ್ಯ ಹಾಲು ಒಕ್ಕೂಟಕ್ಕೆ ಅಗತ್ಯವಿಲ್ಲದಿದ್ದರೂ 187 ಹುದ್ದೆಗಳಿಗೆ ಮತ್ತೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿ ಹಣ ಮಾಡುವ ದಂದೆಗೆ ಇಳಿದಿರುವುದು ದುರಂತ. ಸೆ.4ರಂದು ನೇಮಕಾತಿ ಪರೀಕ್ಷೆ ನಡೆಸಲು ಒಕ್ಕೂಟ ಸಿದ್ಧತೆ ನಡೆಸಿದೆ. ಈ ನೇಮಕಾತಿಗೆ ತಡೆಯಾಜ್ಞೆ ನೀಡುವಂತೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಜತೆಗೆ ಮೆಗಾ ಡೇರಿ ಸ್ಥಾಪನೆಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಲೋಕಾಯುಕ್ತರಿಗೂ ದೂರು ನೀಡಲಾಗುವುದು ಎಂದು ಸುದ್ದಿ ಗೋಷ್ಠಿಯಲ್ಲಿ ಬು ಧವಾರ ತಿಳಿಸಿದರು.

ಈಗಾಗಲೇ ಮನ್‌ಮುಲ್‌ನಲ್ಲಿ 285 ಖಾಯಂ ನೌಕರರು ಹಾಗೂ 1,300 ಹೊರ ಗುತ್ತಿಗೆ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೂ 510 ಹುದ್ದೆಗಳಿಗೆ ಸುಳ್ಳು ದಾಖಲೆ ಸೃಷ್ಟಿಸಿ ಸಹಕಾರ ಇಲಾಖೆಯ ಉಪನಿಬಂಧಕರಿಂದ ಮಂಜೂರಾತಿ ಪಡೆದುಕೊಂಡಿದ್ದಾರೆ. ಮೆಗಾ ಡೇರಿ ನಿರ್ಮಾಣವಾಗಿರುವಾಗ ಇಷ್ಟೊಂದು ಹುದ್ದೆಯ ಅಗತ್ಯವಿಲ್ಲದಿದ್ದರೂ ಹಣ ಮಾಡುವ ಉದ್ದೇಶದಿಂದ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಆರೋಪಿಸಿದರು.

ADVERTISEMENT

ಮನ್‌ಮುಲ್‌ನಲ್ಲಿನಡೆದಿರುವ ಹಗರಣ ಪಿಎಸ್ಐ ಹಗರಣಕ್ಕಿಂತಲೂ ದೊಡ್ಡದಿದೆ.ಒಂದೆಡೆ ನೀರು ಮಿಶ್ರಿತ ಹಾಲು ಹಗರಣ ಸಿಐಡಿ ತನಿಖೆಯಲ್ಲಿದೆ. ಮೆಗಾ ಡೇರಿಗೆ 4 ಸಾವಿರ ಕೆ.ವಿ.ಸಾಮರ್ಥ್ಯದ ವಿದ್ಯುತ್ ಅವಶ್ಯಕತೆಯಿದ್ದು, ಆಡಳಿತ ಮಂಡಳಿ ಯವರು ವಿದ್ಯುತ್ ಇಲಾಖೆ ಯಿಂದ ಸಂಪರ್ಕ ಪಡೆದುಕೊಳ್ಳದೆ 2,500 ಕೆ.ವಿ.ಸಾಮರ್ಥ್ಯದ ಡೀಸೆಲ್ ಜನರೇ ಟರ್‌ ಖರೀದಿಸಿದ್ದಾರೆ. ಇದ ರಿಂದ ಒಕ್ಕೂಟಕ್ಕೆ ಪ್ರತಿ ತಿಂಗಳು ₹1 ಕೋಟಿಗೂ ಅಧಿಕ ನಷ್ಟವಾಗುತ್ತಿದೆ. ಕಳೆದ ಆಡಳಿತ ಮಂಡಳಿ ₹72 ಕೋಟಿ ಅವ್ಯವಹಾರ ನಡೆಸಿದ ಆರೋಪಕ್ಕೆ ಒಕ್ಕೂಟ ಗುರಿಯಾ ಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೆಗಾ ಡೇರಿ ಸ್ಥಾಪನೆ ಅವ್ಯವಹಾರದ ತನಿಖೆ ಇನ್ನೂ ನಡೆದಿಲ್ಲ. ನೇಮಕಾತಿ ಪ್ರಕ್ರಿಯೆ ಆರಂಭಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ನೇಮಕಾತಿಯಲ್ಲಿ ಪರೀಕ್ಷೆ ಬರೆಯಲು ಸಿದ್ಧರಾಗಿರುವ ಅಭ್ಯರ್ಥಿಗಳು ಈಗಲೇ ಎಚ್ಚರಿಕೆಯಿಂದಿರಬೇಕು. ಒಂದು ವೇಳೆ ಹಣ ಕೊಟ್ಟು ಕೆಲಸ ಗಿಟ್ಟಿಸಿಕೊಳ್ಳಲು ಆಸೆ ಪಟ್ಟರೆ ಮುಂದೆ ನ್ಯಾಯಾಲಯದಿಂದ ತಡೆಯಾಜ್ಞೆ ಸಿಕ್ಕಿದರೆ ಇತ್ತ ಕೆಲಸವೂ ಇಲ್ಲ ಅತ್ತ ಹಣವೂ ಇಲ್ಲ ಎಂಬಂತಾಗುತ್ತದೆ ಎಂದರು.

ಒಕ್ಕೂಟದಲ್ಲಿ ನಡೆದಿರುವ ಹಗರಣ ಹಾಗೂ ನೇಮಕಾತಿ ಪ್ರಕ್ರಿಯೆ ಪ್ರಶ್ನಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿಕೊಡಲು ಶೀಘ್ರದಲ್ಲೇ ಭೇಟಿ ಮಾಡಿ ಮನವಿ ಸಲ್ಲಿಸಿ ಭ್ರಷ್ಟಾಚಾರದ ತನಿಖೆಗೆ ಆಗ್ರಹಪಡಿಸಲಾಗುತ್ತದೆ.ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ ತರಲು ಈಗಾಗಲೇ ನ್ಯಾಯಾಲಯದ ಮೆಟ್ಟಿಲು ಏರಿದ್ದು, ಮತ್ತೊಮ್ಮೆ ಹಿರಿಯ ವಕೀಲ ಸಂಪರ್ಕಿಸಿ ಶೀಘ್ರವಾಗಿ ತಡೆಯಾಜ್ಞೆ ತರಲು ನಿರ್ಧರಿಸಲಾಗಿದೆ ಎಂದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಪಿ.ಡಿ.ರಮೇಶ್, ವಿಜಯಕುಮಾರ್, ಹಾಲಹಳ್ಳಿ ಮಹೇಶ್, ಲಿಂಗಪ್ಪಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.