ಮಂಡ್ಯ: ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿರುವ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಮನ್‌ಮುಲ್) ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆದರೂ ಫಲಿತಾಂಶ ಘೋಷಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಮಂಡ್ಯ ತಾಲ್ಲೂಕು ನಿರ್ದೇಶಕ ಯು.ಸಿ. ಶಿವಕುಮಾರ್ (ಉಮ್ಮಡಹಳ್ಳಿ ಶಿವಪ್ಪ) ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಮಳವಳ್ಳಿ ತಾಲ್ಲೂಕಿನ ನಿರ್ದೇಶಕ ಡಿ.ಕೃಷ್ಣೇಗೌಡ ಮತ್ತು ಮಂಡ್ಯ ತಾಲ್ಲೂಕಿನ ಜೆಡಿಎಸ್ ಬೆಂಬಲಿತ ನಿರ್ದೇಶಕ ಎಂ.ಎಸ್. ರಘುನಂದನ್ ಅವರು ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರೂ ಅವರ ಅವಿರೋಧ ಆಯ್ಕೆಯನ್ನೂ ತಡೆಹಿಡಿಯಲಾಗಿದೆ. ಚುನಾವಣಾ ಫಲಿತಾಂಶ ಘೋಷಣೆಯಾಗದಿದ್ದರೂ ಅಧ್ಯಕ್ಷ ಸ್ಥಾನದ ಏಕೈಕ ಅಭ್ಯರ್ಥಿಯಾಗಿದ್ದ ಯು.ಸಿ. ಶಿವಕುಮಾರ್ ಅವರ ಗೆಲುವು ಬಹುತೇಕ ಖಚಿತ ಎಂಬ ಹಿನ್ನೆಲೆಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
16 ಮಂದಿಯಿಂದ ಮತದಾನ:
12 ಮಂದಿ ಚುನಾಯಿತ ನಿರ್ದೇಶಕರು, ಒಬ್ಬರು ನಾಮನಿರ್ದೇಶಿತ ನಿರ್ದೇಶಕರು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ಪ್ರತಿನಿಧಿ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರು, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳದ ಪ್ರತಿನಿಧಿಯೂ ಮತಹಕ್ಕು ಹೊಂದಿದ್ದರು. ಈ ಪೈಕಿ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳದ ಪ್ರತಿನಿಧಿ ಗೈರಾಗಿದ್ದರು. ಉಳಿದಂತೆ 16 ಮಂದಿಯೂ ಮತದಾನ ಮಾಡಿದ್ದಾರೆ.
ಫಲಿತಾಂಶ ಘೋಷಣೆಯಾಗದ ಕಾರಣ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯ ಮತಪತ್ರಗಳನ್ನು ಜಿಲ್ಲಾ ಖಜಾನೆಯಲ್ಲಿ ಭದ್ರವಾಗಿ ಇಡಲಾಗಿದೆ.
ತಡೆಯಾಜ್ಞೆಯಿಂದ ಫಲಿತಾಂಶ ವಿಳಂಬ:
ಮನ್‌ಮುಲ್ ಆಡಳಿತ ಮಂಡಳಿಗೆ (ನಿರ್ದೇಶಕರ ಸ್ಥಾನಗಳಿಗೆ) ಫೆ.2ರಂದು ನಡೆದ ಚುನಾವಣೆ ದಿನದಂದಲೂ ಮನ್‌ಮುಲ್‌ನಲ್ಲಿ ತಡೆಯಾಜ್ಞೆಗಳದ್ದೇ ಕಾರುಬಾರು. ಏಳು ತಾಲ್ಲೂಕುಗಳ ಚುನಾವಣೆಯಲ್ಲಿ ನಾಲ್ಕು ತಾಲ್ಲೂಕುಗಳ ಫಲಿತಾಂಶ ಮಾತ್ರ ಹೊರಬಿದ್ದಿದ್ದು, ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮದ್ದೂರು, ಮಳವಳ್ಳಿ ಮತ್ತು ಕೆ.ಆರ್.ಪೇಟೆ ತಾಲ್ಲೂಕುಗಳ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ಬಳಿಕ ಕಳೆದ ಮೂರು ತಿಂಗಳಲ್ಲಿ ಹಂತ– ಹಂತವಾಗಿ ಎಲ್ಲ ತಾಲ್ಲೂಕುಗಳ ಕಾನೂನು ತೊಡಕುಗಳು ನಿವಾರಣೆಯಾಗಿದ್ದು, ವಿಜೇತರ ಫಲಿತಾಂಶ ಘೋಷಣೆಯಾಗಿದೆ.
ತಡೆಯಾಜ್ಞೆ ಏಕೆ?
ಮಳವಳ್ಳಿ ತಾಲ್ಲೂಕಿನಿಂದ ಮನ್‌ಮುಲ್ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಿ.ಕೃಷ್ಣೇಗೌಡರ ಪರವಾಗಿ ಹೈಕೋರ್ಟ್ ಏಕಸದಸ್ಯ ಪೀಠವು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿ.ಎಂ. ವಿಶ್ವನಾಥ್ ಅವರು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಹೋಗಿದ್ದರು. ಹೀಗಾಗಿ ಈ ಪ್ರಕರಣದ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಮನ್‌ಮುಲ್ ವರಿಷ್ಠರ ಚುನಾವಣೆಯ ಫಲಿತಾಂಶ ಘೋಷಣೆಗೆ ಹೈಕೋರ್ಟ್ ದ್ವಿಸದಸ್ಯ ಪೀಠ ತಡೆಯಾಜ್ಞೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.