ಹಲಗೂರು: ಸಮೀಪದ ಮಾರಗೌಡನಹಳ್ಳಿ ಗ್ರಾಮದಲ್ಲಿ ಸುಮಾರು 1.5 ಎಕರೆ ಭೂ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿಗೆ ಶುಕ್ರವಾರ ಮಧ್ಯಾಹ್ನ ಬೆಂಕಿ ಬಿದ್ದಿದೆ.
ಗ್ರಾಮದ ರೈತ ಎಂ.ಎಲ್.ಸತೀಶ್ ಕುಮಾರ್ ಅವರು ದೇವರಾಜಯ್ಯ ಅವರ ಜಮೀನನ್ನು ಗುತ್ತಿಗೆಗೆ ಪಡೆದು ಕಬ್ಬು ಬೆಳೆದಿದ್ದರು. ಸಮೃದ್ಧ ಫಸಲು ಬಂದಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಕಬ್ಬು ಕಟಾವು ಮಾಡಬೇಕಿತ್ತು. ಆದರೆ ಶುಕ್ರವಾರ ಮಧ್ಯಾಹ್ನ ಜಮೀನಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಇಡೀ ಜಮೀನಿಗೆ ಅವರಿಸಿಕೊಂಡಿದೆ. ಜಮೀನಿನಲ್ಲಿ ಬೆಳೆಸಿದ್ದ ಸುಮಾರು 50ಕ್ಕೂ ಹೆಚ್ಚು ತೆಂಗಿನ ಸಸಿಗಳು ಬೆಂಕಿಗೆ ಸಿಲುಕಿ ಸುಟ್ಟು ಹೋಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರೂ, ಜಮೀನಿಗೆ ದಾರಿ ಇಲ್ಲದ ಪರಿಣಾಮ ಯಾವುದೇ ಪ್ರಯೋಜನ ಆಗಿಲ್ಲ.
‘ಸ್ವಾವಲಂಬಿ ಜೀವನ ನಿರ್ವಹಣೆಗಾಗಿ, ಕಷ್ಟ ಪಟ್ಟು ಸಾಲ ಮಾಡಿ ಕಬ್ಬು ಬೆಳೆದಿದ್ದು, ಕಟಾವಿಗೆ ಬಂದಿತ್ತು. ಯಾರೋ ಕಿಡಿಗೇಡಿಗಳು ಕಬ್ಬಿಗೆ ಬೆಂಕಿ ಹಚ್ಚಿದ್ದು, ಕಂಗಾಲಾಗಿದ್ದೆನೆ. ಬೆಂಕಿ ಅವಘಡದಿಂದಾಗಿ ಸುಮಾರು ₹3 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದ್ದು ಸಂಬಂಧಿಸಿದ ಇಲಾಖೆಯವರು ಪರಿಹಾರ ನೀಡಬೇಕು’ ಎಂದು ರೈತರ ಎಂ.ಎಲ್. ಸತೀಶ್ ಕುಮಾರ್ ಮನವಿ ಮಾಡಿದರು.
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.