ADVERTISEMENT

ವಿವಾಹಿತ ಮಹಿಳೆ ನಾಪತ್ತೆ: ಮರ್ಯಾದೆಗೇಡು ಹತ್ಯೆ ಶಂಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 12:30 IST
Last Updated 21 ಅಕ್ಟೋಬರ್ 2020, 12:30 IST
   

ಮಂಡ್ಯ: ಐದು ವರ್ಷಗಳ ಹಿಂದೆ ಅಂತರ್ಜಾತಿ ವಿವಾಹವಾಗಿ ನಾಪತ್ತೆಯಾಗಿದ್ದ ಮಹಿಳೆಯ ಪತ್ತೆಗಾಗಿ ಆಕೆಯ ಪೋಷಕರು ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಆ ಮಹಿಳೆ ನಿಧನರಾಗಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದ್ದು ಮರ್ಯಾದೆಗೇಡು ಹತ್ಯೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಮಳವಳ್ಳಿ ತಾಲ್ಲೂಕು ನಂಜೇಗೌಡನದೊಡ್ಡ ಗ್ರಾಮದ ಮಹದೇವಮ್ಮ ತಮ್ಮ ಮಗಳ ಪತ್ತೆಗಾಗಿ ಪಾಂಡವಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ವಾಸ ಮಾಡುತ್ತಿದ್ದ ವೇಳೆ ಮಹದೇವಮ್ಮ ಅವರ ಪುತ್ರಿ ಸವರ್ಣೀಯ ಯುವಕನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು. ವಿವಾಹದ ನಂತರ ಮಗಳ ಸಂಪರ್ಕ ಇರಲಿಲ್ಲ, ಎಲ್ಲಿ ಸಂಸಾರ ನಡೆಸುತ್ತಿದ್ದಾಳೆ ಎಂಬ ಮಾಹಿತಿಯೂ ಇರಲಿಲ್ಲ ಎಂದು ಮಹದೇವಮ್ಮ ತಿಳಿಸಿದ್ದಾರೆ.

ಆದರೆ ಈಚೆಗೆ ಮನೆ ಸ್ವಚ್ಛ ಮಾಡುವಾಗ ಮತದಾರರ ಗುರುತಿನ ಚೀಟಿಯೊಂದು ಪತ್ತೆಯಾಯಿತು. ಅದು ಪಾಂಡವಪುರ ತಾಲ್ಲೂಕು ತಿರುಮಲಾಪುರ ಗ್ರಾಮದ ಟಿ.ಕೆ.ಸ್ವಾಮಿಗೌಡ ಎಂಬ ಯುವಕನದ್ದಾಗಿತ್ತು. ಮಗಳು ಸ್ವಾಮಿಗೌಡನನ್ನು ಮದುವೆಯಾಗಿ ತಿರುಮಲಾಪುರದಲ್ಲಿ ಇದ್ದಾಳೆ ಎಂಬ ಮಾಹಿತಿ ದೊರೆಯಿತು. ಗ್ರಾಮಕ್ಕೆ ತೆರಳಿ ಹುಡುಗನ ಮನೆಯಲ್ಲಿ ವಿಚಾರಿಸಿದಾಗ, ಮದುವೆಯಾದ ಕೆಲವೇ ದಿನಗಳಲ್ಲಿ ಆಕೆ ಮನೆಬಿಟ್ಟು ಹೋದಳು ಎಂದು ತಿಳಿಸಿದರು. ಆದರೆ ಗ್ರಾಮಸ್ಥರನ್ನು ವಿಚಾರಿಸಿದಾಗ, ಹುಡುಗನ ಕುಟುಂಬ ಸದಸ್ಯರು ಆಕೆಯನ್ನು ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ನೀಡಿದರು ಎಂದು ಮಹದೇವಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಪ್ರೀತಿ ಮಾಡಿ, ಮನೆ ಬಿಟ್ಟು ಹೋದ ಮಗಳು ಎಲ್ಲೋ ಒಂದು ಕಡೆ ಚೆನ್ನಾಗಿರಲಿ ಎಂದು 5 ವರ್ಷಗಳಿಂದ ಸುಮ್ಮನಿದ್ದೆ. ಆದರೆ ಮಗಳು ಕೊಲೆಯಾಗಿದ್ದಾಳೆ ಎಂಬ ವಿಚಾರ ತಿಳಿದು ನೋವಾಗಿದೆ. ಹೆಂಡತಿ ಏನಾದಳು ಎಂಬ ಬಗ್ಗೆ ಪೊಲೀಸರು ಹುಡುಗನನ್ನು ಕೇಳುವುದನ್ನು ಬಿಟ್ಟು, ಐದು ವರ್ಷದಿಂದ ಏಕೆ ದೂರು ಕೊಟ್ಟಿಲ್ಲ ಎಂದು ನನ್ನನ್ನೇ ಕೇಳುತ್ತಿದ್ದಾರೆ. ಮಗಳು ಬದುಕಿದ್ದರೆ ಹುಡುಕಿಕೊಡಿ, ಸತ್ತಿದ್ದರೆ ಮಗಳ ಸಾವಿಗೆ ನ್ಯಾಯ ಕೊಡಿ ಎಂದು ಪೊಲೀಸರನ್ನು ಕೇಳುತ್ತಿದ್ದೇನೆ’ ಎಂದು ಮಹದೇವಮ್ಮ ತಿಳಿಸಿದರು.

‘ಸ್ವಾಮಿಗೌಡ ಕುಟುಂಬದ ವಿರುದ್ಧ ಮಹದೇವಮ್ಮ ಕುರುಕುಳ ದೂರು ನೀಡಿದ್ದಾರೆ. ಅವರ ಮಗಳು ನಾಪತ್ತೆಯಾಗಿರುವ ಅಥವಾ ಮರ್ಯಾದೆಗೇಡು ಹತ್ಯೆಯಾಗಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಹೇಳಿದರು.

ಅನಾಥ ಶವ ಯಾರದ್ದು?

ನಾಲ್ಕು ವರ್ಷಗಳ ಹಿಂದೆ ಪಾಂಡವಪುರ ಬಳಿ ದೊರೆತ ಯುವತಿಯ ಅನಾಥ ಶವವನ್ನು ಪೊಲೀಸರು ಸಂಸ್ಕಾರ ನಡೆಸಿದ್ದರು. ಮಹದೇವಮ್ಮ ನೀಡಿರುವ ಮಗಳ ಛಾಯಾಚಿತ್ರ ಹಾಗೂ ಶವದ ಚಿತ್ರಕ್ಕೂ ಹೋಲಿಕೆ ಕಂಡುಬಂದಿದೆ.

ಆದರೆ ಮಹದೇವಮ್ಮ, ಅದನ್ನು ಮಗಳ ಶವ ಎಂದು ಸ್ಪಷ್ಟವಾಗಿ ಗುರುತಿಸಿಲ್ಲ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.