
ಭಾರತೀನಗರ: ಮಹಿಳೆಯರ ಆರ್ಥಿಕ ಸದೃಢತೆಗೆ ಮೀನುಗಾರಿಕೆ ಸಹಾಯಕವಾಗಲಿದ್ದು, ಈ ಹಿನ್ನೆಲೆಯಲ್ಲಿ ಮತ್ಯ್ಸ ಸಂಜೀವಿನಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ಸಮೀಪದ ಅಣ್ಣೂರು ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಭೂಮಿಕಾ ಸಂಜೀವಿನಿ ಗ್ರಾ.ಪಂ. ಒಕ್ಕೂಟ ಇವುಗಳ ಸಹಯೋಗದಲ್ಲಿ ನಡೆದ ಮತ್ಸ್ಯ ಸಂಜೀವಿನಿ- ಒಳನಾಡು ಮೀನುಗಾರಿಕಾ ಚಟುವಟಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮೀನುಗಾರಿಕೆ ಇಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಮೀನಿಗೆ ಬಹಳ ಬೇಡಿಕೆಯೂ ಇದೆ. ಮೀನಿನ ಆಹಾರ ಆರೋಗ್ಯಕರವೂ ಆಗಿದ್ದು, ಇಂತಹ ಮೀನುಗಾರಿಕೆಯನ್ನು ಮಹಿಳೆಯರು ಸಮರಥವಾಗಿ ನಿಭಾಯಿಸಬಲ್ಲರು ಎಂಬ ನಿಲುವಿನೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜೀವಿನಿ ಒಕ್ಕೂಟಗಳಿಗೆ ಕೆರೆಗಳಲ್ಲಿ ಮೀನು ಸಾಕಣಿಕೆ ಮಾಡಿ ಆರ್ಥಿಕವಾಗಿ ಚೈತನ್ಯ ತುಂಬುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ’ ಎಂದು ಹೇಳಿದರು.
ಮತ್ಸ್ಯ ಸಂಜೀವಿನಿ ಯೋಜನೆ ಅಡಿ ಅಣ್ಣೂರು ಗ್ರಾಮದ ಪುಟ್ಟಕಟ್ಟೆಗೆ 5 ಸಾವಿರ ಮೀನು ಮರಿಗಳನ್ನು ಶಾಸಕರು ನೀರಿಗೆ ಬಿಟ್ಟರು. ಮೀನುಗಾರಿಕಾ ಇಲಾಖೆ ವತಿಯಿಂದ ಇಬ್ಬರು ಫಲಾನುಭವಿಗಳಿಗೆ ತೆಪ್ಪ, ಅರಿಗೋಲು, ಬಲೆ, ರಕ್ಷಣಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಜಿ.ಪಂ ಮಾಜಿ ಸದಸ್ಯ ಅಣ್ಣೂರು ರಾಜೀವ, ಗ್ರಾ.ಪಂ. ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಚಂದ್ರಶೇಖರ್, ಸತೀಶ್, ಮಂಜುಕುಮಾರ್, ಗ್ರಾ.ಪಂ ಮಹಿಳಾ ಒಕ್ಕೂಟದ ಅಧ್ಯಕ್ಷೆ ಭಾರತಿ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಪುಷ್ಪಲತಾ, ಪಿಡಿಒ ಹರೀಶ್, ಎನ್‌ಆರ್‌ಎಲ್‌ಎಂ ಸಿಬ್ಬಂದಿ ರವೀಂದ್ರಗೌಡ, ಅಂಬರಹಳ್ಳಿ ಸ್ವಾಮಿ, ಪ್ರದೀಪ್, ಗುರುಲಿಂಗಸ್ವಾಮಿ, ಸುಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.