ADVERTISEMENT

ಸರ್ವಧರ್ಮದವರಿಂದ ಕೂಡಿರಲಿ: ಸುತ್ತೂರು ಶ್ರೀ

ಶಿವರಾತ್ರೀಶ್ವರ ಶಿವಯೋಗಿಯವರ 1066ನೇ ಜಯಂತ್ಯುತ್ಸವ ಡಿ.18ರಿಂದ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 13:53 IST
Last Updated 24 ಜೂನ್ 2025, 13:53 IST
ಮಳವಳ್ಳಿ ಪಟ್ಟಣದ ಟಿಎಪಿಸಿಎಂಎಸ್ ಮುಂಭಾಗ ನಿವೇಶನದಲ್ಲಿ ನಡೆದ ಸರ್ವಧರ್ಮದವರ ಪೂರ್ವಭಾವಿ ಸಭೆಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು.
ಮಳವಳ್ಳಿ ಪಟ್ಟಣದ ಟಿಎಪಿಸಿಎಂಎಸ್ ಮುಂಭಾಗ ನಿವೇಶನದಲ್ಲಿ ನಡೆದ ಸರ್ವಧರ್ಮದವರ ಪೂರ್ವಭಾವಿ ಸಭೆಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು.   

ಮಳವಳ್ಳಿ: ‘ಮಳವಳ್ಳಿಯಲ್ಲಿ ಡಿ.18ರಿಂದ ಒಂದು ವಾರಗಳ ಕಾಲ ನಡೆಯುವ ಶಿವರಾತ್ರೀಶ್ವರ ಶಿವಯೋಗಿಯವರ ಜಯಂತ್ಯುತ್ಸವವು ಸರ್ವಧರ್ಮದವರು ಒಗ್ಗೂಡಿ ಆಚರಣೆ ಮಾಡುವ ಮೂಲಕ ಉತ್ತಮ ಸಂದೇಶ ನೀಡಬೇಕು’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕರೆ ನೀಡಿದರು.

ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿಯವರ 1066ನೇ ಜಯಂತಿ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಟಿಎಪಿಸಿಎಂಎಸ್ ಮುಂಭಾಗ ನಿವೇಶನದಲ್ಲಿ ಮಂಗಳವಾರ ನಡೆದ ಸರ್ವಧರ್ಮದವರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಜಯಂತ್ಯುತ್ಸವದಲ್ಲಿ ಉಳಿದ ಹಣದ ಜೊತೆಗೆ ಮಠದ ಸಂಪನ್ಮೂಲವನ್ನು ಸೇರಿಸಿ ತಾಲ್ಲೂಕಿನ ಐತಿಹಾಸಿಕ ಸ್ಥಳವೊಂದನ್ನು ಅಭಿವೃದ್ಧಿಪಡಿಸಲಾಗುವುದು. ಜವಾಬ್ದಾರಿಗಳ ಹಂಚಿಕೆಗೆ ತಂಡಗಳ ಒಳಗೊಂಡಂತೆ ಸಮಿತಿ ರಚಿಸಲಾಗುವುದು. ಸಮಿತಿಯಲ್ಲಿ ಸೇರಿಸಿಲ್ಲ ಎಂಬ ಬೇಸರವಿಲ್ಲದೇ ಎಲ್ಲರೂ ಶ್ರೀಮಠದ ಭಕ್ತರೆಂದು ತಿಳಿದು ಯಶಸ್ವಿಗೆ ಕೈಜೋಡಿಸಬೇಕು’ ಎಂದು ಹೇಳಿದರು.

ADVERTISEMENT

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ‘ಡಿಸೆಂಬರ್ ತಿಂಗಳಿನಲ್ಲಿ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿ ಅವರ 1066ನೇ ಜಯಂತ್ಯುತ್ಸವ ಮಳವಳ್ಳಿಯಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಹೆಮ್ಮೆ, ಮಹೋತ್ಸವವು ಭಕ್ತಿ, ಭಾವೈಕ್ಯದಿಂದ, ಜಾತ್ಯತೀತವಾಗಿ ನಡೆಯಲಿದೆ’ ಎಂದು ಹೇಳಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ‘ಎರಡನೇ ಬಾರಿಗೆ ಜಿಲ್ಲೆಯಲ್ಲಿ ಜಯಂತ್ಯುತ್ಸವ ಆಚರಣೆ ಭಾಗ್ಯ ಸಿಕ್ಕಿದೆ.  ಯಾವುದೇ ಗೊಂದಲವಾಗದಂತೆ ನಾನು ಮತ್ತು ಮರಿತಿಬ್ಬೇಗೌಡ ಕೊಂಡಿಯಾಗಿ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ಮಾಜಿ ಶಾಸಕ ಕೆ.ಅನ್ನದಾನಿ, ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿದರು.

ಶ್ರೀರಂಗಪಟ್ಟಣ ಬಿಜೆಪಿ ಮುಖಂಡ ಸಚ್ಚಿದಾನಂದ ಮಾತನಾಡಿ, ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ₹5 ಲಕ್ಷದ ಚೆಕ್ ಅನ್ನು ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕನಕಪುರದ ದೇಗುಲ ಮಠದ ಕಿರಿಯ ಚನ್ನಬಸವಸ್ವಾಮೀಜಿ ಮಾತನಾಡಿ, ‘ಮಳವಳ್ಳಿಯಲ್ಲಿ ನಡೆಯುವ ಶ್ರೀಗಳ ಜಯಂತಿ ನಾಡಿನಲ್ಲಿ ಮಾದರಿಯಂತಿರಬೇಕು ’ ಎಂದರು.

ಗೌರಿಶಂಕರಸ್ವಾಮೀಜಿ, ಬಿಜೆಪಿ ಮುಖಂಡ ಜಿ.ಮುನಿರಾಜು, ಮನ್ ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ, ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಸದಸ್ಯ ಟಿ.ನಂದಕುಮಾರ್, ಮುಖಂಡರಾದ ಯಮದೂರು ಸಿದ್ದರಾಜು, ಬಿ.ರವಿ ಕಂಸಾಗರ, ವಿ.ಪಿ.ನಾಗೇಶ್, ಜಯರಾಮು, ಎಂ.ಎನ್.ಕೃಷ್ಣ, ಚಿಕ್ಕಲಿಂಗಯ್ಯ, ಟಿ.ಸಿ.ಚೌಡಯ್ಯ, ಕೆ.ಜೆ.ದೇವರಾಜು, ಬಿ.ಎಸ್.ರಾಮಚಂದ್ರು, ಸಿದ್ದೇಗೌಡ, ಅಶೋಕ್ ಕುಮಾರ್ ಪಾಲ್ದೊಂಡಿಗರು.

ಸುತ್ತೂರು ಮಠ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸುವೆ. ಭಾವೈಕ್ಯದ ಸಂಕೇತದ ಜಯಂತ್ಯುತ್ಸವ ಜಾತ್ಯತೀತವಾಗಿ ನಡೆದು ರಾಜ್ಯಕ್ಕೆ ಮಾದರಿಯಾಗಲಿದೆ.
-ಪಿ.ಎಂ.ನರೇಂದ್ರಸ್ವಾಮಿ, ಶಾಸಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.