ಮಂಡ್ಯ: ‘ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವುದು ಇವರ‍್ಯಾರ (ರಾಜ್ಯ ಸರ್ಕಾರದವರ) ಕೈಯಲ್ಲೂ ಆಗುವುದಿಲ್ಲ. ಅದು ದೇವೇಗೌಡರ ಕುಟುಂಬದಿಂದಲೇ ಆಗಬೇಕು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಮೊದಲು ತಮಿಳುನಾಡಿನವರನ್ನು ಒಪ್ಪಿಸಲಿ. ತಮಿಳುನಾಡಿನವರು ಕಾಂಗ್ರೆಸ್‌ನವರ ಪಾರ್ಟ್‌ನರ್‌ಗಳು. ಒಪ್ಪಿಗೆ ಪಡೆದುಕೊಂಡು ಬರಲಿ, ಮೇಕೆದಾಟು ಮಾಡಿಸೋಣ’ ಎಂದರು.
‘ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ 32ಕ್ಕೂ ಅಧಿಕ ಸಾವಾಗಿದೆ ಇದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾಗಿದೆ. ಪ್ರತಿ ತಾಲ್ಲೂಕಿನಲ್ಲೂ ಜೆಡಿಎಸ್‌ನಿಂದ ಹೃದಯ ತಪಾಸಣೆ ಮಾಡಲು ಚರ್ಚೆ ಮಾಡುತ್ತಿದ್ದೇವೆ. ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಹೃದ್ರೋಗ ವಿಭಾಗ ತೆರೆಯಲು ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಸಚಿವರು ಇದಕ್ಕೆ ಆದ್ಯತೆ ನೀಡಬೇಕು’ ಎಂದು ಹೇಳಿದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಪಕ್ಷದ ಸಂಘಟನೆಗಾಗಿ ಅವರು ಓಡಾಡುತ್ತಿದ್ದಾರೆ. ಬಿಜೆಪಿ ಮೈತ್ರಿಗೂ ಇದಕ್ಕೂ ಸಂಬಂಧವಿಲ್ಲ. ನಾವು (ಜೆಡಿಎಸ್) ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಸಾಧ್ಯವಿಲ್ಲ. ನಮಗೆ ಶಕ್ತಿ ಇರುವ ಕಡೆ ಸಂಘಟನೆ ಮಾಡುತ್ತಿದ್ದೇವೆ. ಚುನಾವಣೆ ಬಂದಾಗ ಕ್ಷೇತ್ರಗಳ ಬಗ್ಗೆ ಕೇಂದ್ರ ನಾಯಕರ ಜೊತೆ ಮಾತನಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.