ADVERTISEMENT

‘ಮೇಕೆದಾಟು ಯೋಜನೆ’ಗೆ ಒಪ್ಪಿಗೆ ನೀಡಿ: ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಮನವಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 16:41 IST
Last Updated 13 ಸೆಪ್ಟೆಂಬರ್ 2025, 16:41 IST
   

ಶಿವನಸಮುದ್ರ: ‘ಮೇಕೆದಾಟು ಯೋಜನೆ ಅನುಷ್ಠಾನಗೊಂಡರೆ 66 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದು. ಈ ಯೋಜನೆಯಿಂದ ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಗಳಿಗೂ ಅನುಕೂಲವಾಗುತ್ತದೆ. ಆದ್ದರಿಂದ ರಾಜಕೀಯ ಕಾರಣಕ್ಕೆ ತಕರಾರು ಮಾಡದೆ, ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಈ ಯೋಜನೆಗೆ ಒಪ್ಪಿಗೆ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಬಳಿ ಶನಿವಾರ ಆಯೋಜಿಸಿದ್ದ ‘ಗಗನಚುಕ್ಕಿ ಜಲಪಾತೋತ್ಸವ–2025’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಮಾನಾಂತರ ಜಲಾಶಯವಾದ ಮೇಕೆದಾಟು ಯೋಜನೆಗೆ ತಮಿಳುನಾಡು ಏಕೆ ಅಡ್ಡಿಪಡಿಸುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಕೆಆರ್‌ಎಸ್‌ ಅಣೆಕಟ್ಟೆ ನಿರ್ಮಾಣವಾದ 94 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೂನ್‌ನಲ್ಲಿ ಡ್ಯಾಂ ಭರ್ತಿಯಾಗಿದೆ. ಈ ಬಾರಿ 120 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ತಮಿಳುನಾಡಿಗೆ ಹರಿದು ಹೋಗಿದೆ. ಮಳೆ ಚೆನ್ನಾಗಿ ಸುರಿದರೆ ನೀರು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಈಗ ಕಾವೇರಿ ಜಲ ವಿವಾದವೂ ತಣ್ಣಗಾಗಿದೆ’ ಎಂದರು.

ADVERTISEMENT

‘ತಮಿಳುನಾಡಿಗೆ ವರ್ಷಕ್ಕೆ 177.25 ಟಿಎಂಸಿ ಅಡಿ ನೀರು ಕೊಡಬೇಕು ಅಂತ ತೀರ್ಮಾನವಾಗಿದೆ. ಮಳೆಗಾಲ ಸರಿಯಾಗಿ ಆದಾಗ ಮಾತ್ರ ನೀರು ಕೊಡಬಹುದು. ಮಳೆ ಕೊರತೆಯಾದಾಗ ‘ಸಂಕಷ್ಟ ಸೂತ್ರ’ ಪಾಲಿಸಬೇಕು. ರಾಜ್ಯದ ಎಲ್ಲ ಜಲಾಶಯಗಳು ಈ ಬಾರಿ ಭರ್ತಿಯಾಗಿರುವ ಕಾರಣ ವಿದ್ಯುತ್‌ ಸಮಸ್ಯೆ ಕಾಡುವುದಿಲ್ಲ’ ಎಂದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು:

ಏಷ್ಯಾಖಂಡದಲ್ಲೇ ಮೊದಲ ಬಾರಿಗೆ 1902ರಲ್ಲಿ ಶಿವನಸಮುದ್ರದಲ್ಲಿ ಜಲವಿದ್ಯುತ್‌ ಉತ್ಪಾದನೆ ಆರಂಭವಾಯಿತು. ಗಗನಚುಕ್ಕಿ ಜಲಪಾತ ನೋಡಲು ಇದುವರೆಗೆ 22 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಶಕ್ತಿ ಯೋಜನೆ ಮೂಲಕ ಮಹಿಳೆಯರು ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದ್ದು, ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.