ಮೇಲುಕೋಟೆ: ಆಷಾಢ ಮಾಸದ ಜಾತ್ರೆಯಾದ ಕೃಷ್ಣರಾಜಮುಡಿ ಕಿರೀಟಧಾರಣಾ ಮಹೋತ್ಸವ ಬುಧವಾರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ತುಂತುರು ಮಳೆ ನಡುವೆಯೂ ಭವ್ಯ ಪುಷ್ಪಾಹಾರದ ಅಲಂಕಾರದಲ್ಲಿ ಕಂಗೊಳಿಸಿದ ಸ್ವಾಮಿಯ ದರ್ಶನ ಪಡೆದ ಸಾವಿರಾರು ಭಕ್ತರು ಧನ್ಯತಾಭಾವ ಮೆರೆದರು.
ಕೃಷ್ಣರಾಜಮುಡಿ ಬ್ರಹ್ಮೋತ್ಸವದ 4ನೇ ದಿನವಾದ ಬುಧವಾರ ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢನಾದ ಚೆಲುವನಾರಾಯಣನಿಗೆ ರಾತ್ರಿ 8.30ರ ವೇಳೆಗೆ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ತೊಡಿಸಿ ಅಲಂಕಾರ ಮಾಡಲಾಯಿತು.
ಗರುಡದೇವನ ಮೆರವಣಿಗೆ ನಂತರ ಮಹಾಮಂಗಳಾರತಿ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ವೇದಾಂತದೇಶಿಕರ ಸನ್ನಿಧಿಯಲ್ಲಿ ಆರಂಭವಾದ ಈ ಉತ್ಸವ ಚತುರ್ವಿಧಿಗಳಲ್ಲಿ ನೆರವೇರಿದ ನಂತರ ರಾತ್ರಿ 10ಕ್ಕೆ ಮುಕ್ತಾಯವಾಯಿತು.
ಕಿರೀಟ ಪರಿಶೀಲನೆ
ಜಿಲ್ಲಾ ಖಜಾನೆಯಿಂದ ಪೊಲೀಸ್ ಬಂದೋಬಸ್ತ್‌ನಲ್ಲಿ ಮೇಲುಕೋಟೆಗೆ ತಂದ ಕೃಷ್ಣರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಪಟ್ಟಣದ ಹೊರವಲಯದಲ್ಲಿರುವ ಆಂಜನೇಯಸ್ವಾಮಿ ಸನ್ನಿಧಿಯಲ್ಲಿರಿಸಿ ಪೂಜೆ ನೆರವೇರಿಸಿ ಭದ್ರತಾ ಅಧಿಕಾರಿಗಳಿಗೆ ಗೌರವ ಸಮರ್ಪಿಸಲಾಯಿತು.
ನಂತರ ಆ ಪೆಟ್ಟಿಗೆಯನ್ನು ಪಲ್ಲಕ್ಕಿಯಲ್ಲಿರಿಸಿ ಶ್ವೇತಛತ್ರಿ, ದೀವಟಿಗೆ, ಮಂಗಳವಾದ್ಯದ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ತರಲಾಯಿತು. ಪೆಟ್ಟಿಗೆಯ ಮೊಹರನ್ನು ಪರಿಶೀಲಿಸಿ, ಕೃಷ್ಣರಾಜಮುಡಿ ಮತ್ತು ಗಂಡಭೇರುಂಡ ಪದಕಗಳನ್ನು ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಸಂತೋಷ್, ಇಒ ಶೀಲಾ ಪರಿಶೀಲನೆ ಮಾಡಿ, ದೇವಾಲಯದ ಸ್ಥಾನಿಕರು, ಅರ್ಚಕ ಪರಿಚಾರಕರು ಹಾಗೂ ಕಾವಲುಗಾರರ ಜಂಟಿವಶಕ್ಕೆ ನೀಡಲಾಯಿತು.
ಈ ವೇಳೆ ಸ್ಥಾನಿಕರಾದ ಕರಗಂನಾರಾಯಣ ಅಯ್ಯಂಗಾರ್, ಎಸ್.ತಿರುನಾರಾಯಣ ಅಯ್ಯಂಗಾರ್, ಶ್ರೀನಿವಾಸ ನರಸಿಂಹನ್ ಗುರೂಜಿ, ಮುಕುಂದನ್, ನರಸಿಂಹಯ್ಯಂಗಾರ್, ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ. ಆನಂದಾಳ್ವಾರ್ ಇದ್ದರು.
ನಾಗವಲ್ಲಿ ಮಹೋತ್ಸವ
ಕೃಷ್ಣರಾಜಮುಡಿ ಉತ್ಸವಕ್ಕೂ ಮುನ್ನ ದೇವಾಲಯದಲ್ಲಿ ನಾಗವಲ್ಲಿ ಮತ್ತು ನರಾಂದಾಳಿಕಾರೋಹಣ ನೆರವೇರಿತು. ನಂತರ ಕಲ್ಯಾಣನಾಯಕಿ ಮತ್ತು ಚೆಲುವನಾರಾಯಣಸ್ವಾಮಿಗೆ ಪುಷ್ಪಾಲಂಕೃತ ಬೆಳ್ಳಿಯ ಪಲ್ಲಕ್ಕಿಯಲ್ಲಿ ಉತ್ಸವ ನೆರವೇರಿತು. ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ದೇವಾಲಯದ ರಾಜಗೋಪುರ ಹಾಗೂ ದೇಶಿಕರ ಸನ್ನಿಧಿಗೆ ದೀಪಾಲಂಕಾರದ ವ್ಯವಸ್ಥೆ ಕಲ್ಪಿಸಿದ್ದರು. ಉತ್ಸವದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸರ್ಕಲ್ ಇನ್‌ಸ್ಪೆಕ್ಟರ್ ಅಶೋಕ್ ನೇತೃತ್ವದ ತಂಡ ಬಂದೋಬಸ್ತ್ ಒದಗಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.