ADVERTISEMENT

ಉದ್ಯೋಗ ಖಾತ್ರಿ: ಸಮರ್ಪಕ ಕೂಲಿ ಪಾವತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 12:50 IST
Last Updated 22 ಸೆಪ್ಟೆಂಬರ್ 2020, 12:50 IST

ಮಂಡ್ಯ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಬೇಕು, ಕೂಡಲೇ ಬಾಕಿ ಕೂಲಿ ನೀಡಬೇಕು, 94 ಸಿ ಅಡಿಯಲ್ಲಿ ಹಕ್ಕು ಪತ್ರ ಹಾಗೂ ನಿವೇಶನ ರಹಿತರಿಗೆ ವಸತಿ, ಬ್ಯಾಂಕ್‌ ಸಾಲ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಘಟಕದ ಸದಸ್ಯರು ಮಂಗಳವಾರ ಜಿಲ್ಲಾ ಪಂಚಾಯಿತಿ ಸಿಇಒ ಜುಲ್ಫೀಕರ್‌ ಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.

2020ನೇ ಸಾಲಿನಲ್ಲಿ 15–50 ದಿನಗಳ ಕೆಲಸ ಸಿಕ್ಕಿದ್ದು, ಕೊರೊನಾ ಸಂಕಷ್ಟದ ಕಾಲದಲ್ಲಿ ಜನರಿಗೆ ಸಮರ್ಪಕ ಕೆಲಸ ನೀಡುತ್ತಿಲ್ಲ. ಕೂಡಲೇ ಎಲ್ಲರಿಗೂ ಕೆಲಸ ನೀಡಲು ಆದೇಶಿಸಬೇಕು. ಮಳವಳ್ಳಿ, ಮದ್ದೂರು, ಪಾಂಡವಪುರ, ಮಂಡ್ಯ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ 2 ತಿಂಗಳಿಂದ ಕೂಲಿ ಕೊಡದೆ ಕಡಿಮೆ ಕೂಲಿ ನೀಡಲಾಗಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು, ಉದ್ಯೋಗ ಕಾರ್ಡ್‌ ಕೊಡದಿರುವ ಹಿಟ್ಟನಹಳ್ಳಿಕೊಪ್ಪಲು, ಬ್ಯಾಡರಹಳ್ಳಿ, ಸುಜ್ಜಲೂರು, ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

5 ಕಿ.ಮೀ.ಗಿಂತ ದೂರದಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ಶೇ 10 ಪ್ರಯಾಣ ಭತ್ಯೆ ಪಾವತಿಸಬೇಕು. ಜಿಲ್ಲೆಯಲ್ಲಿ ಸಾಕಷ್ಟು ಕಡೆ ಯಂತ್ರದ ಹಾವಳಿ ಹೆಚ್ಚಿದ್ದು, ಇದನ್ನು ನಿಯಂತ್ರಿಸಿ ಕೂಲಿಕಾರರಿಗೆ ಅರಿವು ಮೂಡಿಸಿ, ಕೆಲಸ ನೀಡಬೇಕು. ವಾರದ 2 ಮತ್ತು 4ನೇ ಶನಿವಾರ ಸರ್ಕಾರಿ ರಜೆಯಾಗಿದ್ದು, ಉದ್ಯೋಗ ಖಾತ್ರಿ ಕೂಲಿಕಾರರಿಗೆ ರಜೆ ನೀಡಿ ಸರ್ಕಾರದ ನಿಯಮದಂತೆ ಕೂಲಿ ನೀಡಬೇಕು. ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ಕೂಲಿಕಾರರು 94 ಸಿ ಅಡಿಯಲ್ಲಿ ಅರ್ಜಿ ಹಾಕಿದ್ದು, ಹಕ್ಕುಪತ್ರ ನೀಡಿ ವಸತಿ ನಿರ್ಮಿಸಿ ಮೂಲ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

ಲೇವಾದೇವಿಗಾರರಿಂದ ಬಡ್ಡಿ ಹಾವಳಿ ಹೆಚ್ಚಾಗಿದ್ದು, ಸುಲಿಗೆ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಿ ಬ್ಯಾಂಕ್‌ಗಳ ಮೂಲಕ ಕನಿಷ್ಠ ₹1 ಲಕ್ಷ ಸಾಲ ನೀಡಬೇಕು. ಸರ್ಕಾರಿ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿರುವ ಕೂಲಿಕಾರರು ಈಗಾಗಲೇ ಫಾರಂ ನಂ. 57 ಸಲ್ಲಿಸಿದ್ದು, ಅವರ ವ್ಯವಸಾಯಕ್ಕೆ ತೊಂದರೆ ನೀಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು, ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್‌, ಸಹ ಕಾರ್ಯದರ್ಶಿ ಕೆ.ಹನುಮೇಗೌಡ, ಉಪಾಧ್ಯಕ್ಷ ಕೆ.ಬಸವರಾಜು, ಮಳವಳ್ಳ ತಾಲ್ಲೂಕು ಅಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಸರೋಜಮ್ಮ, ಅನಿತಾ, ಎಚ್‌.ಸಿ.ನಾಗರಾಜು, ಅಮಾಸಯ್ಯ, ರಾಜು, ಶಾಂತಮ್ಮ, ಎನ್‌.ಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.