ನಾಗಮಂಗಲ: ‘ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಗಿಡಗಳನ್ನು ನೆಡುವುದು, ಅವುಗಳನ್ನು ಸಂರಕ್ಷಿಸಿ ಹೆಮ್ಮರವಾಗುವಂತೆ ಮಾಡುವುದು ಪುಣ್ಯದ ಕೆಲಸವಾಗಿದೆ. ಸುತ್ತಮುತ್ತಲಿನ ಪರಿಸರದಲ್ಲಿ ಗಿಡಮರಗಳನ್ನು ಬೆಳೆಸುವ ಕೆಲಸ ಮಾಡಿ’ ಎಂದು ಹೈಕೋರ್ಟ್ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಹೇಳಿದರು.
ತಾಲ್ಲೂಕಿನ ಅಂಕುಶಾಪುರ ಮತ್ತು ಕಾಚೇನಹಳ್ಳಿ ಅರಣ್ಯ ಪ್ರದೇಶದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಭಾನುವಾರ ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಜಿಲ್ಲಾಡಳಿ, ತಾಲ್ಲೂಕು ಕಸಾಪ, ವಕೀಲರ ಸಂಘ ಮತ್ತು ಎ.ಸಿ.ಯುನ ಎನ್.ಎಸ್.ಎಸ್ ಘಟಕಗಳ ಸಹಯೋಗದಲ್ಲಿ ಬೆಂಗಳೂರಿನ ಮಾತೃ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಐದು ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪರಿಸರ ದಿನಾಚರಣೆಯೂ ಒಂದು ದಿನದ ಗಿಡ ನೆಡುವ ಕಾರ್ಯಕ್ರಮ ಎಂದು ಭಾವಿಸದೇ ಪ್ರತಿ ದಿನವೂ ಪರಿಸರ ಸಂರಕ್ಷಣೆ ಮಾಡುವ ಕೆಲಸವಾಗಬೇಕು. ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವ ಮೂಲಕ ಪರಿಸರ ಮಾಲಿನ್ಯವಾಗದಂತೆ ಕ್ರಮವಹಿಸಿ. ಪುನರ್ ಬಳಸಬಹುದಾದ ಪ್ಲಾಸ್ಟಿಕ್ ಬಳಕೆಗೆ ಆದ್ಯತೆ ನೀಡಿ. ಪ್ರತಿ ಮಕ್ಕಳೂ ತಮ್ಮ ಮನೆಯ ವಾತಾವರಣದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿ ಪೋಷಿಸಿದರೆ ಅದುವೆ ನಿಜವಾದ ಮಹಾತ್ಕಾರ್ಯ’ ಎಂದರು.
ಹೈಕೋರ್ಟ್ ನ್ಯಾಯಾಧೀಶರಾದ ಬಿ.ಎಂ.ಶ್ಯಾಮ್ ಪ್ರಸಾದ್, ಇ.ಎಸ್. ಇಂದ್ರೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಗಿಡಗಳನ್ನು ನೆಡುವ ಜೊತೆಗೆ ಅವರ ಪ್ರೀತಿ ಪಾತ್ರರ ಹೆಸರುಗಳಿರುವ ಟ್ಯಾಗ್ ಗಳನ್ನು ಅಳವಡಿಸಿದರು. ಅಲ್ಲದೇ ಗಿಡ ನೆಡುವ ಕಾರ್ಯಕ್ರಮದಲ್ಲಿ ಹಲಸು, ಬೇವು, ಹೊಂಗೆ, ಮಾವು, ಬೀಟೆ, ಆಲ, ಬಸುರಿ, ಬಿದಿರು, ಅತ್ತಿ, ಜಂಬುನೇರಳೆ, ಅರಳಿ, ಸಂಪಿಗೆ ಸೇರಿದಂತೆ ವಿವಿಧ ಬಗೆಯ ಐದು ಸಾವಿರ ಗಿಡಗಳನ್ನು ನಡೆಲಾಯಿತು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಕೆ.ಎನ್.ಫಣೀಂದ್ರ, ಟಿ.ಜಿ.ಶಿವಶಂಕರೇಗೌಡ, ಎಸ್.ರಾಚಯ್ಯ, ಕೆ.ಕಿರಣ್ ಶೆಟ್ಟಿ, ಟಿ.ಎ.ನದಾಫ್, ಉಪಲೋಕಾಯುಕ್ತ ಬಿ.ವೀರಪ್ಪ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಶಿಲ್ದಾರ್ ನಂದೀಶ್, ಮಾತೃ ಫೌಂಡೇಶನ್ ಸಂಸ್ಥಾಪಕ ಮಾಯಣ್ಣಗೌಡ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಮಹದೇವ್ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.