ADVERTISEMENT

ಓದಲು ನಿರಾಸಕ್ತಿ ತೋರುವ ಹುಡುಗರು!        

ಕೆಡಿಪಿ ಸಭೆಯಲ್ಲಿ ಶಿಕ್ಷಣಾಧಿಕಾರಿ ಎಸ್.ಸ್ವಾಮಿ ಕಳವಳ

​ಪ್ರಜಾವಾಣಿ ವಾರ್ತೆ
Published 29 ಜೂನ್ 2018, 17:26 IST
Last Updated 29 ಜೂನ್ 2018, 17:26 IST
29june01: ನಾಗಮಂಗಲ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಭೆಯು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದಾಸೇಗೌಡ ನೇತೃತ್ವದಲ್ಲಿ ನಡೆಯಿತು.
29june01: ನಾಗಮಂಗಲ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಭೆಯು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದಾಸೇಗೌಡ ನೇತೃತ್ವದಲ್ಲಿ ನಡೆಯಿತು.   

ನಾಗಮಂಗಲ: ನನ್ನ ಗಮನಕ್ಕೆ ಬಾರದೇ ಯಾವುದೇ ಕಡತಗಳನ್ನು ಬೇರೆಯವರ ಬಳಿ ತೆಗೆದುಕೊಂಡು ಹೋಗಬೇಡಿ ಎನ್ನುವ ಮೂಲಕ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದಾಸೇಗೌಡ ಅವರು ಶಾಸಕ ಸುರೇಶ್ ಗೌಡರಿಗೆ ತಿರುಗೇಟು ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾನು ಅಧ್ಯಕ್ಷನಾದ ನಂತರ 4 ತಿಂಗಳಿನಿಂದ ಚುನಾವಣಾ ನೀತಿ ಸಂಹಿತೆಯ ಕಾರಣ ಸಭೆ ನಡೆದಿರಲಿಲ್ಲ. ತಾಲ್ಲೂಕುಮಟ್ಟದ ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೇ ಜನಪರವಾಗಿ ಕೆಲಸ ಮಾಡಿ ಎಂದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸ್ವಾಮಿ ಮಾತನಾಡಿ, ‘ಗಂಡುಮಕ್ಕಳು ಓದಲು ಆಸಕ್ತಿ ತೋರಿಸುತ್ತಿಲ್ಲ. ಶಾಲೆಗೆ ಬರಲು ನಿರಾಸಕ್ತಿ ವಹಿಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಕಡಿಮೆ ಫಲಿತಾಂಶ ಬರಲು ಇದೇ ಪ್ರಮುಖ ಕಾರಣ. ಹೆಣ್ಣುಮಕ್ಕಳು ಗಂಡುಮಕ್ಕಳಿಗಿಂತ ಶೇ 11ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿದ್ದಾರೆ. ಜೊತೆಗೆ ಪ್ರಾಥಮಿಕ ಶಾಲಾ ಹಂತದಲ್ಲಿ ನುರಿತ ಹಿಂದಿ ಭಾಷಾ ಶಿಕ್ಷಕರಿಲ್ಲದಿರುವುದೂ ಫಲಿತಾಂಶದಲ್ಲಿ ಹಿಂದುಳಿಯಲು ಮತ್ತೊಂದು ಕಾರಣ’ ಎಂದು ಹೇಳಿದರು.

ತಾಲ್ಲೂಕಿನಲ್ಲಿ 293 ಶಿಕ್ಷಕರ ಕೊರತೆಯಿದೆ. ಸರ್ಕಾರ 214 ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ ನೀಡಿದೆ. ಅದರಲ್ಲಿ ಈಗಾಗಲೇ 144 ಶಿಕ್ಷಕರಿಗೆ ನೇಮಕಾತಿ ಪತ್ರ ನೀಡಲಾಗಿದೆ. ಪ್ರಮುಖವಾಗಿ ಜೀವಶಾಸ್ತ್ರ ಶಿಕ್ಷಕರ ಕೊರತೆ ಕಾಡುತ್ತಿದೆ. ಅದಕ್ಕಾಗಿ ಬೇರೆ ಶಾಲೆಗಳ ಶಿಕ್ಷಕರನ್ನು ಎರವಲು ನೀಡಲಾಗುತ್ತಿದೆ. ಶಾಲಾ ಕಟ್ಟಡಗಳ ದುರಸ್ತಿಗಾಗಿ ₹ 22 ಲಕ್ಷದ ಕ್ರಿಯಾಯೋಜನೆಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಪಂಚಾಯತ್ ಎಂಜಿನಿಯರಿಂಗ್‌ ವಿಭಾಗದ ಎಇಇ ಶ್ರೀನಿವಾಸಗೌಡ ಮಾತನಾಡಿ, ‘ನಬಾರ್ಡ್ ಯೋಜನೆಯ ಎಲ್ಲ ಕಾಮಗಾರಿಗಳೂ ಪೂರ್ಣಗೊಂಡಿವೆ. ಎಸ್‌ಸಿ–ಎಸ್‌ಟಿ ಜನರಿಗಾಗಿ ತಾಲ್ಲೂಕಿನ ತುಪ್ಪದಮಡು, ಅಂಚೆಚಿಟ್ಟನಹಳ್ಳಿ ಮತ್ತು ಮುಳಕಟ್ಟೆ ಗ್ರಾಮಗಳಲ್ಲಿ ಜಾಗ ನಿಗದಿಪಡಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ’ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಜನ್, ‘ಬೆಳ್ಳೂರು ಹೋಬಳಿಯ ಕೆಂಬಾರೆ ಅಂಗನವಾಡಿ ಕೇಂದ್ರ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ವಿಷಯ ನ್ಯಾಯಾಲಯದಲ್ಲಿದೆ ಅದನ್ನು ಇತ್ಯರ್ಥ ಪಡಿಸಲು ಯತ್ನಿಸಲಾಗುತ್ತಿದೆ’ ಎಂದು ಹೇಳಿದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಜಯಲಕ್ಷ್ಮಿ, ಕಾರ್ಯನಿರ್ವಹಣಾಧಿಕಾರಿ ಶಿವನಂಜಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್ ಇದ್ದರು.

ಕೆಡಿಪಿ ಸಭೆಗೆ ರಾಹುಕಾಲ ಭೀತಿ!

ಬೆಳಗ್ಗೆ 11ಕ್ಕೆ ಕೆಡಿಪಿ ಸಭೆ ನಿಶ್ಚಯವಾಗಿತ್ತು. ಅಧ್ಯಕ್ಷರ ಪ್ರಥಮ ಸಭೆಯಾಗಿದ್ದರಿಂದ ರಾಹುಕಾಲ ಮುಗಿಯುವವರೆಗೂ ಕಾದು ನಂತರ 12ಕ್ಕೆ ಆರಂಭವಾಯಿತು. ಈ ಬಗ್ಗೆ ಮಾತನಾಡಿದ ಅಧ್ಯಕ್ಷ ದಾಸೇಗೌಡ, ‘ಕೆಲವು ಅಧಿಕಾರಿಗಳು ರಾಹು ಕಾಲ ಇದೆ ಅದು ಮುಗಿಯಲಿ ಎಂದು ಸಲಹೆ ನೀಡಿದ್ದರು. ಹಾಗಾಗಿ ಸಭೆ ತಡವಾಗಿ ಆರಂಭವಾಗುತ್ತಿದೆ’ ಎಂದು ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.