ADVERTISEMENT

ಮಂಡ್ಯ: ಹಾಲು ಖರೀದಿ ದರ ಕಡಿತಕ್ಕೆ ಸಮಿತಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 15:57 IST
Last Updated 15 ಜುಲೈ 2020, 15:57 IST

ಮಂಡ್ಯ: ಮನ್‌ಮುಲ್‌ ಆಡಳಿತ ಮಂಡಳಿ ಹಾಲು ಖರೀದಿ ದರವನ್ನು ಹಲವು ಬಾರಿ ಕಡಿತಗೊಳಿಸಿದ್ದು ರೈತರನ್ನು ಆತಂಕಕ್ಕೆ ತಳ್ಳಿದೆ. ಕೊರೊನಾ ಸಂಕಷ್ಟ ಮುಗಿಯುವವರೆಗೂ ದರ ಕಡಿತ ನಿರ್ಧಾರವನ್ನು ವಾಪಸ್‌ ಪಡೆಯಬೇಕು ಎಂದು ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಆಗ್ರಹಿಸಿದೆ.

ಮನ್‌ಮುಲ್‌ ಹಾಲು ಉ‍ತ್ಪಾದಕರ ಅವಿರತ ಶ್ರಮದಿಂದ ನಡೆಯುತ್ತಿದ್ದು, ಅದರಿಂದ ಬಂದಿರುವ ಲಾಭ ಉತ್ಪಾದಕನಿಗೆ ಸೇರದೆ ಒಕ್ಕೂಟದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಜೇಬಿಗೆ ಸೇರುತ್ತಿದೆ. ಹಾಲಿನ ದರ ಹೆಚ್ಚಳ ಮಾಡುವ ಸಂದರ್ಭದಲ್ಲಿ ಪತ್ರಿಕಾ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುವ ಒಕ್ಕೂಟ, ದರ ಕಡಿಮೆ ಮಾಡುವಾಗ ಯಾವುದೇ ಮುನ್ಸೂಚನೆ ನೀಡದೆ ಏಪ್ರಿಲ್‌ನಿಂದ ಜುಲೈ 10 ರವರೆಗೆ ₹6 ಕಡಿತಗೊಳಿಸಿದ್ದಾರೆ ಎಂದು ಸಮಿತಿ ಅಧ್ಯಕ್ಷ ಎಸ್‌.ಸಿ.ಮಧುಚಂದನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರೊನಾ ಕಾರಣದಿಂದ ಪಟ್ಟಣದಿಂದ ಹಳ್ಳಿಗೆ ಬಂದು ಅನೇಕರು ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಜೀವನಾಧಾರ ಭರವಸೆ ಮೂಡಿಸುವ ಬದಲು ಅಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಹಾಲಿನ ದರ ಕಡಿತದಿಂದ ನಿತ್ಯ ₹30ಲಕ್ಷದಂತೆ ತಿಂಗಳಿಗೆ ₹9ಕೋಟಿ ಲಾಭ ಆಗಲಿದೆ. ದರ ಕಡಿಮೆ ಮಾಡಿರುವುದಕ್ಕೆ ನೀಡಿರುವ ಕಾರಣ ಗಮನಿಸಿದರೆ ಕುಂಟು ನೆಪ ಹೇಳಿ ಉತ್ಪಾದಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ADVERTISEMENT

ಹಿಂದಿನ ಆಡಳಿತ ಮಂಡಳಿ ಭ್ರಷ್ಟಾಚಾರಗಳನ್ನು ತನಿಖೆಗೆ ಒಳಪಡಿಸಿ ಹಾಲು ಉತ್ಪಾದಕರ ಹಿತ ಕಾಯುತ್ತೇವೆ ಎಂದು ಅಧಿಕಾರಕ್ಕೆ ಬಂದು ಒಂದು ತಿಂಗಳ ಮಟ್ಟಿಗೆ ಹಾಲು ದರ ಹೆಚ್ಚಿಸಿ ಎರಡು ಬಾರಿ ದರ ಕಡಿಮೆ ಮಾಡಿರುವ ಆಡಳಿತ ಮಂಡಳಿ ಉತ್ಪಾದಕರಿಗಿಂತ ಸ್ವ ಹಿತಾಸಕ್ತಿ ಕಾಯ್ದುಕೊಳ್ಳುತ್ತಿದೆ. ಮಾರುಕಟ್ಟೆ ವಿಸ್ತರಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಅದಕ್ಕೆ ತೆಗೆದುಕೊಂಡಿರುವ ಕ್ರಮಗಳನ್ನು ಬಹಿರಂಗಪಡಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಕಾರಸವಾಡಿ ಮಹದೇವು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.