ADVERTISEMENT

ಕಲ್ಲು ಗಣಿಗಾರಿಕೆ: ಸಿಬಿಐಗೆ ವಹಿಸಲು ಆಗ್ರಹ

ಶ್ರೀರಂಗಪಟ್ಟಣದಲ್ಲಿ ಅಂಬರೀಶ್‌ ಅಭಿಮಾನಿಗಳ ಸಂಘದ ಸಭೆ; ಅಧ್ಯಕ್ಷ ಬೇಲೂರು ಸೋಮಶೇಖರ್‌ ಒತ್ತಾಉ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 4:24 IST
Last Updated 10 ಜುಲೈ 2021, 4:24 IST
ಶ್ರೀರಂಗಪಟ್ಟಣದ ಪ್ರವಾಸಿ ಮಂದಿರದ ಬಳಿ ಶುಕ್ರವಾರ ನಡೆದ ಅಂಬರೀಶ್‌ ಅಭಿಮಾನಿಗಳ ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಎಸ್‌.ಎಲ್‌.ಲಿಂಗರಾಜು ಮಾತನಾಡಿದರು
ಶ್ರೀರಂಗಪಟ್ಟಣದ ಪ್ರವಾಸಿ ಮಂದಿರದ ಬಳಿ ಶುಕ್ರವಾರ ನಡೆದ ಅಂಬರೀಶ್‌ ಅಭಿಮಾನಿಗಳ ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಎಸ್‌.ಎಲ್‌.ಲಿಂಗರಾಜು ಮಾತನಾಡಿದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಹಂಗರಹಳ್ಳಿ ಮೊದಲಾದ ಕಡೆಗಳಲ್ಲಿ ಹಲವು ವರ್ಷಗಳಿಂದ ಕಲ್ಲು ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದ್ದು, ಸಾವಿರಾರು ಕೋಟಿ ಬೆಲೆಯ ಸಾರ್ವಜನಿಕ ಸಂಪತ್ತು ಲೂಟಿಯಾಗಿದೆ. ಈ ಅಕ್ರಮವನ್ನು ಸಿಬಿಐಗೆ ವಹಿಸಬೇಕು ಎಂದು ಅಂಬರೀಶ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್‌ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರ ಬಳಿ ಶುಕ್ರವಾರ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಕಲ್ಲು ಗಣಿಗಾರಿಕೆ ಅಕ್ರಮದ ಬಗ್ಗೆ ತನಿಖೆಯಾಗಲಿ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಹಾಗಾಗಿ ಕಲ್ಲು ಗಣಿಗಾರಿಕೆ ಅಕ್ರಮದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರದ ಸಂಪತ್ತು ಕಬಳಿಸಿರುವವರಿಂದ ನಷ್ಟ ವಸೂಲಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿರುವುದು ನಿಜ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಶಾಸಕರೇ ಅಕ್ರಮಕ್ಕೆ ಆಸ್ಪದ ನೀಡಿರುವುದು ತಪ್ಪು. ತಮ್ಮ ಅಕ್ರಮ ಮುಚ್ಚಿಕೊಳ್ಳಲು ಅಂಬರೀಶ್‌ ಅವರ ಹೆಸರನ್ನು ಗಣಿಗಾರಿಕೆಗೆ ಎಳೆದು ತರುತ್ತಿದ್ದಾರೆ. ಅಂಬರೀಶ್‌ ಬಗ್ಗೆ ಸುಳ್ಳು ಆರೋಪ ಮಾಡಿರುವುದು ಅಭಿಮಾನಿಗಳಿಗೆ ನೋವುಂಟು ಮಾಡಿದೆ. ತಮ್ಮ ಪ್ರಮಾದಕ್ಕೆ ಅವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರವೀಂದ್ರ ಶ್ರೀಕಂಠಯ್ಯ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ. ಅಂಬರೀಶ್‌ ಅಭಿಮಾನಿಗಳು ಅವರಿಗೆ ಘೇರಾವ್‌ ಹಾಕಲಿದ್ದಾರೆ ಎಂದು ಎಚ್ಚರಿಸಿರು.

ADVERTISEMENT

2002ರಲ್ಲಿ ಹಂಗರಹಳ್ಳಿ ಜೀತ ಪ್ರಕರಣ ಬೆಳಕಿಗೆ ಬಂದಾಗ ರವೀಂದ್ರ ಶ್ರೀಕಂಠಯ್ಯ ಅವರ ತಾಯಿ ಪಾರ್ವತಮ್ಮ ಶಾಸಕರಾಗಿದ್ದರು. ಕಲ್ಲು ಕುಟಿಕರ ಕಾಲಿಗೆ ಕೋಳ ಹಾಕಿದ್ದ ಆ ಪ್ರಕರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಂತಹ ಅಮಾನವೀಯ ಪ್ರಕರಣ ನಡೆಯಲು ಅವಕಾಶ ಕೊಟ್ಟ ಪಾರ್ವತಮ್ಮ ಶ್ರೀಕಂಠಯ್ಯ ಹೊಣೆಯಾಗಬೇಕು. ತಮ್ಮ ತಪ್ಪಿಗೆ ಈಗಲಾದರೂ ವಿಷಾದ ವ್ಯಕ್ತಪಡಿಸಬೇಕು ಎಂದರು.

ಸಂಘದ ಗೌರವಾಧ್ಯಕ್ಷ ಎಸ್‌.ಎಲ್‌.ಲಿಂಗರಾಜು ಮಾತನಾಡಿ, ಅಂಬರೀಶ್‌ ಅವರು ಯಾವುದೇ ಗಣಿ ಅಕ್ರಮ ನಡೆಸಿಲ್ಲ. ಜಲ್ಲಿ ಕ್ರಷರ್‌ ನಡೆಸುತ್ತಿದ್ದವನು ನಾನು. ಅಂಬರೀಶ್‌ ಅವರಿಗೂ ಕ್ರಷರ್‌ಗೂ ಯಾವುದೇ ಸಂಬಂಧ ಇಲ್ಲ. ಆದರೂ ರವೀಂದ್ರ ಶ್ರೀಕಂಠಯ್ಯ ಅವರು ಅಂಬರೀಶ್‌ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಸುಳ್ಳು ಆರೋಪ ಮಾಡುವ ಮೂಲಕ ಸಂಸದೆ
ಸುಮಲತಾ ಅವರ ತೇಜೋವಧೆಗೆ ಇಳಿದಿದ್ದಾರೆ. ಶಾಸಕರಾದವರಿಗೆ ಇದು ಒಳ್ಳೆಯದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡ ಹನಕೆರೆ ಶಶಿ ಮಾತನಾಡಿ, ಶಾಸಕ ರವೀಂದ್ರ ಶ್ರೀಕಂಠಯ್ಯ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದು ನಿಜ. ಅದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಇಲ್ಲ ಎನ್ನುವುದಾದರೆ ಅವರು ಹಂಗರಹಳ್ಳಿಗೆ ಬರಲಿ, ನಾವೂ ಬರುತ್ತೇವೆ. ಅವರ ಕಲ್ಲು ಗಣಿ ಯಾವುದು ಎಂಬುದನ್ನು ತೋರಿಸುತ್ತೇವೆ. ತಾವು ಅಕ್ರಮ ನಡೆಸುತ್ತಿಲ್ಲ ಎಂದು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

ಮುಖಂಡರಾದ ಮಹೇಶ್‌, ಮಂಜುನಾಥ್‌, ದರ್ಶನ್‌, ಮೋಹನ್‌ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.