ADVERTISEMENT

ಕೃಷಿ ಇಲಾಖೆಯಿಂದ ಮಂಡ್ಯಕ್ಕೆ ₹137 ಕೋಟಿ‌ ಅನುದಾನ: ಸಚಿವ ಎನ್.ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:10 IST
Last Updated 23 ಡಿಸೆಂಬರ್ 2025, 6:10 IST
ನಾಗಮಂಗಲ ಪಟ್ಟಣದ ಬಡಗೂಡಮ್ಮ ದೇವಾಲಯದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಜನಸ್ಪಂದನ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸಮಾಧಾನ ಹೇಳಿದರು. ಜಿಲ್ಲಾಧಿಕಾರಿ ಕುಮಾರ್, ಸಿಇೊ ಕೆ.ಆರ್.ನಂದಿನಿ ಪಾಲ್ಗೊಂಡಿದ್ದರು
ನಾಗಮಂಗಲ ಪಟ್ಟಣದ ಬಡಗೂಡಮ್ಮ ದೇವಾಲಯದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಜನಸ್ಪಂದನ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸಮಾಧಾನ ಹೇಳಿದರು. ಜಿಲ್ಲಾಧಿಕಾರಿ ಕುಮಾರ್, ಸಿಇೊ ಕೆ.ಆರ್.ನಂದಿನಿ ಪಾಲ್ಗೊಂಡಿದ್ದರು   

ನಾಗಮಂಗಲ: ‘ಅಧಿಕಾರ ಇದ್ದಾಗ ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಜನರು ತೃಪ್ತಿ ಹೊಂದದೇ ಹೋದಾಗ ನಮಗೂ ಅಸಮಾಧಾನವಾಗುತ್ತದೆ. ಮೈಸೂರಿನ ಒಡೆಯರು ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ಹೆಚ್ಚು ಕೆಲಸ ಮಾಡಿದ್ದಾರೆ. ಆ ಕಾಲದಿಂದ ಈ ಕಾಲದವರೆಗೆ ಎಲ್ಲರನ್ನೂ ತೃಪ್ತಿ ಪಡಿಸಲು‌ ಆಗಿಲ್ಲ ಎಂದರೆ ಈಗ ನಮ್ಮಿಂದ ಸಾಧ್ಯವೇ? ಆದರೂ ಪ್ರಾಮಾಣಿಕ ಪ್ರಯತ್ನದೊಂದಿಗೆ ಕೆಲಸ ಮಾಡುತ್ತಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಟಿ.ಬಿ ಬಡಾವಣೆಯ ಬಡಗೂಡಮ್ಮ ದೇವಾಲಯದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಸ್ಪಂದನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಅತ್ಯಂತ ಕೆಟ್ಟ ರಾಜಕಾರಣದ ವ್ಯವಸ್ಥೆ ಇತ್ತು. ಅಂತಹ ಸನ್ನಿವೇಶದಲ್ಲಿ ತಾಲ್ಲೂಕಿನ ಜನತೆ ನನ್ನನ್ನು ಆಯ್ಕೆ ಮಾಡಿದರು. ಇನ್ನೂ ಹತ್ತು ವರ್ಷ ಶ್ರಮಿಸಿದರು ಅವರ ಋಣ ಸಂದಾಯವಾಗುವುದಿಲ್ಲ ಅದಕ್ಕಾಗಿ ಹಗಲಿರುಳು ಕೆಲಸ ಮಾಡುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟರು.

ADVERTISEMENT

‘ಕೃಷಿ ಇಲಾಖೆಯಲ್ಲಿ ರಾಜ್ಯದಲ್ಲಿ ₹1400 ಕೋಟಿ ಅನುದಾನ ಬಿಡುಗಡೆ ಆಗಿದೆ. ಮಂಡ್ಯ ಜಿಲ್ಲೆಗೆ ₹137 ಕೋಟಿ‌, ನಾಗಮಂಗಲಕ್ಕೆ ₹29 ಕೋಟಿ ಬಿಡುಗಡೆ ಮಾಡಿದ್ದೇನೆ. ಕಳೆದ ಎರಡೂವರೆ ವರ್ಷದಲ್ಲಿ ನಾಗಮಂಗಲ ಕೊಪ್ಪದಲ್ಲಿ ₹2500 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ತರಲಾಗಿದೆ. ಇವೆಲ್ಲವು ನನ್ನ ಅಧಿಕಾರಾವಧಿಯಲ್ಲಿ ಆಗುತ್ತಿರುವುದು’ ಎಂದರು.

ನಾಗಮಂಗಲ ತಾಲ್ಲೂಕಿನಲ್ಲಿ 80 ಸಾವಿರ ಖಾತೆ ಬಾಕಿಯಿದ್ದು, ಮುಂದಿನ ಆರು ತಿಂಗಳಲ್ಲಿ ಹಂತ-ಹಂತವಾಗಿ ಗ್ರಾಮ ಮಟ್ಟದಲ್ಲಿ ಆಂದೋಲನ ನಡೆಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಮುಜರಾಯಿ ದೇವಸ್ಥಾನದ ಅರ್ಚಕರಿಗೆ 6 ತಿಂಗಳಿಗೆ ₹36 ಸಾವಿರದಂತೆ ನಾಗಮಂಗಲ ತಾಲ್ಲೂಕಿನಲ್ಲಿ ಒಟ್ಟು 506 ದೇವಸ್ಥಾನಗಳಿಗೆ ₹30 ಲಕ್ಷಕ್ಕೂ ಹೆಚ್ಚು ಹಣ ನೀಡಲಾಗುತ್ತಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ. ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ ಸ್ವಾಮಿ, ನಾಗಮಂಗಲ ತಹಶೀಲ್ದಾರ್ ಆದರ್ಶ್, ಪಾಂಡವಪುರ ಉಪವಿಭಾಗ ಅಧಿಕಾರಿ ಶ್ರೀನಿವಾಸ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾಧಿಕಾರಿ ಮಂಜುಳಾ, ನಗರಾಭಿವೃದ್ಧಿ ಕೋಶ ಜಂಟಿ ನಿರ್ದೇಶಕ ನರಸಿಂಹ ಮೂರ್ತಿ  ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರದ ಸಹಕಾರ ಶೂನ್ಯ

ಕಳೆದ 10 ತಿಂಗಳಿಂದ ಜೆಜೆಎಮ್ ಯೋಜನೆಗೆ ಪ್ರಧಾನಿ ನರೇಂದ್ರಮೋದಿ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಆದರು ಕರ್ನಾಟಕದಲ್ಲಿ ಜೆಜೆಎಮ್ ಯೋಜನೆ ಕಾಮಗಾರಿ ಚಾಲ್ತಿಯಲ್ಲಿದೆ. ಇನ್ನೂ ಒಂದು ವರ್ಷದ ಅವಧಿಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಕೊಳವೆ ಮೂಲಕ ಲಭ್ಯವಾಗುತ್ತದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಂಡ್ಯ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ₹86 ಸಾವಿರಕ್ಕೂ ಹೆಚ್ಚು ಪಹಣಿಗಳನ್ನು ತಿದ್ದುಪಡಿ ಮಾಡಲಾಗಿದ್ದು ಎ.ಸಿ ನ್ಯಾಯಾಲಯದಲ್ಲಿ  1600ಕ್ಕೂ ಹೆಚ್ಚು ಕೋರ್ಟ್ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ನಾಗಮಂಗಲ ತಾಲ್ಲೂಕಿನಲ್ಲಿ ಸುಮಾರು 20 ಸಾವಿರ ಪೌತಿ ಖಾತೆ ಬದಲಾವಣೆ ಮಾಡಲಾಗಿದೆ. 2.60 ಲಕ್ಷ ಆಧಾರ್ ಸೀಡಿಂಗ್ ಮಾಡಲಾಗಿದೆ ಎಂದು ಎನ್.ಚಲುವರಾಯಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.