
ಶ್ರೀರಂಗಪಟ್ಟಣ: ಗ್ರಾಮ ಪಂಚಾಯಿತಿಗಳು ಅಂಗವಿಕಲರ ಕಲ್ಯಾಣಕ್ಕೆ ಬಳಸಬೇಕಾದ ಹಣವನ್ನು ಕಾಮಗಾರಿಗೆ ಬಳಸುತ್ತಿದ್ದು, ಅಂಗವಿಕಲರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅಂಗವಿಕಲರ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸೋಮವಾರ ನಡೆದ ಅಂಗವಿಕಲರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ವಿನಾಯಕ ಅಂಗವಿಕಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ. ನಾಗರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಆರ್. ಮಹದೇವು ಅಸಮಾಧಾನ ವ್ಯಕ್ತಪಡಿಸಿದರು.
‘ಗ್ರಾಮ ಪಂಚಾಯಿತಿಗೆ ಬರುವ ಅನುದಾನದಲ್ಲಿ ಶೇ 5ರಷ್ಟನ್ನು ಅಂಗವಿಕಲರ ಕಲ್ಯಾಣಕ್ಕೆ ಮಾತ್ರ ಬಳಸಬೇಕು ಎಂಬ ನಿಯಮ ಇದೆ. ಆದರೆ ಅದನ್ನು ಉಲ್ಲಂಘಿಸಿ ಅನ್ಯ ಉದ್ದೇಶಗಳಿಗೆ ಬಳಸುತ್ತಿದ್ದಾರೆ’ ಎಂದು ದೂರಿದರು.
‘ರಾಜ್ಯ ಸಾರಿಗೆ ಸಂಸ್ಥೆಯ ಕೆಲವು ಬಸ್‌ಗಳಲ್ಲಿ ಅಂಗವಿಕಲರನ್ನು ಹತ್ತಿಸಿಕೊಳ್ಳುತ್ತಿಲ್ಲ. ಅವರಿಗೆ ಮೀಸಲಾದ ಸೀಟು ಬಿಡುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಮರಳಾಗಾಲ ಮಂಜುನಾಥ್ ಮನವಿ ಮಾಡಿದರು.
‘ದೈಹಿಕ ಮತ್ತು ಮಾನಸಿಕ ವೈಕಲ್ಯ ಹೊಂದಿರುವವರು ಸರತಿ ಸಾಲಿನಲ್ಲಿ ನಿಂತು ಪಡಿತರ ಪಡೆಯುವುದು ಕಷ್ಟ. ಹಾಗಾಗಿ ಅಂಗವಿಕಲರಿಗೆ ಆದ್ಯತೆಯ ಮೇಲೆ ಪಡಿತರ ವಿತರಿಸಬೇಕು. ಓಡಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿರುವ ಅಂಗವಿಕಲರು ಆಸ್ಪತ್ರೆಗೆ ಬಂದು ಗುರುತಿನ ಚೀಟಿ ಪಡೆಯಲು ಕಷ್ಟವಾಗುತ್ತಿದೆ. ಅವರ ಪೋಷಕರಿಂದ ವಿಡಿಯೋ ಕರೆ ಮಾಡಿಸಿ, ಪರಿಸ್ಥಿತಿ ಅವಲೋಕಿಸಿ ಗುರುತಿನ ಚೀಟಿ ವಿತರಿಸಬೇಕು’ ಎಂದು ಎಚ್.ಆರ್. ಮಹದೇವು ಕೋರಿದರು.
‘ತಾಲ್ಲೂಕಿನ ಎಲ್ಲ ಪಡಿತರ ವಿತರಣಾ ಕೇಂದ್ರಗಳಲ್ಲಿ ಅಂಗವಿಕಲರಿಗೆ ಮೊದಲು ಪಡಿತರ ವಿತರಿಸಲು ಕ್ರಮ ವಹಿಸಬೇಕು’ ಎಂದು ಆಹಾರ ಇಲಾಖೆ ಶಿರಸ್ತೇದಾರ್ ಅವರಿಗೆ ತಹಶೀಲ್ದಾರ್ ಚೇತನಾ ಯಾದವ್ ಸೂಚಿಸಿದರು. ‘ಅಂಗವಿಕಲರು ಕೈ ತೋರಿದಲ್ಲಿ ಬಸ್ ನಿಲ್ಲಿಸಿ ಹತ್ತಿಸಿಕೊಳ್ಳಬೇಕು. ಸೂಕ್ತ ಆಸನದ ವ್ಯವಸ್ಥೆ ಮಾಡಬೇಕು’ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದರು.
‘ಗ್ರಾಮ ಪಂಚಾಯತಿಗಳಲ್ಲಿ ಅಂಗವಿಕಲರಿಗೆ ಮೀಸಲಾದ ಶೇ 5 ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸದಂತೆ ನೋಡಿಕೊಳ್ಳಿ’ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎ.ಬಿ. ವೇಣು ಅವರಿಗೆ ಹೇಳಿದರು.
‘ಮಲಗಿರುವ ಸ್ಥಿತಿಯಲ್ಲಿರುವ ಅಂಗವಿಕಲರಿಗೆ ಅವರ ಬಂಧುಗಳ ಮೂಲಕ ಅರ್ಜಿ ಪಡೆದು ಗುರುತಿನ ಚೀಟಿ ವಿತರಿಸುವ ಸಂಬಂಧ ಪರಿಶೀಲಿಸಿ ಕ್ರಮ ವಹಿಸಿ’ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಧರ್ ಅವರಿಗೆ ತಹಶೀಲ್ದಾರ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಎಸ್. ಸಕಲೇಶ್ವರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ. ಮೋಹನ್, ಐಇಆರ್‌ಟಿ ಶಿಕ್ಷಕ ರಮೇಶ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್‌ಕುಮಾರ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.